ನರಗಳ ಸಮಸ್ಯೆಯಿಂದ ಆಸ್ಪತ್ರೆಗೆ ಅಲೆದಾಟ, ನನ್ನ ಧ್ವನಿಯ ಮೇಲೂ ಎಫೆಕ್ಟ್ ಆಗಿದೆ: ಇನ್ಮುಂದೆ ಸೋನು ನಿಗಮ್ ಹಾಡಲ್ವಾ?
ಕನ್ನಡ ಹಿಟ್ ಹಾಡುಗಳಿಗೆ ಧ್ವನಿಯಾಗಿರುವ ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ತೀವ್ರವಾದ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ವಿಷಯ ಹೊರಬಿದ್ದಿದೆ. ಈ ಕುರಿತು ಸ್ವತಃ ಸೋನು ನಿಗಮ್ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಗಂಭೀರವಾದ ದೈಹಿಕ ನೋವಿನ ನಡುವೆಯೂ ಅವರು ತಮ್ಮ ವೃತ್ತಿಗೆ ಮೊದಲ ಆದ್ಯತೆ ನೀಡಿದ್ದಾರೆ.
ಸೋನು ನಿಗಮ್‌ಗೆ ಏನಾಗಿದೆ?
ತಮ್ಮ ವಿಡಿಯೋದಲ್ಲಿ ಅನಾರೋಗ್ಯದ ವಿವರಣೆ ನೀಡಿರುವ ಸೋನು ನಿಗಮ್, "ನನ್ನ ದೇಹದ ನರಗಳು ಜಜ್ಜಿಕೊಂಡಿವೆ ಅಥವಾ ಸಿಲುಕಿಕೊಂಡಿವೆ (Pinched Nerve). ಇದರಿಂದಾಗಿ ವಿಪರೀತವಾದ ದೈಹಿಕ ನೋವು ಕಾಣಿಸಿಕೊಂಡಿದೆ. ಕಳೆದ ಒಂದು ವಾರದಿಂದ ಸತತವಾಗಿ ಆಸ್ಪತ್ರೆಗೆ ಅಲೆಯುತ್ತಿದ್ದು, ಹಲವಾರು ಬಾರಿ ಎಂಆರ್‌ಐ (MRI) ಮತ್ತು ಸಿಟಿ ಸ್ಕ್ಯಾನ್ (CT Scan) ಪರೀಕ್ಷೆಗಳಿಗೆ ಒಳಗಾಗಿದ್ದೇನೆ" ಎಂದು ಹೇಳಿದ್ದಾರೆ.

ಧ್ವನಿಯ ಮೇಲೂ ಔಷಧಿಗಳ ಸೈಡ್ ಎಫೆಕ್ಟ್
ಸದ್ಯ ನೋವು ನಿವಾರಣೆಗಾಗಿ ಅವರು ಭಾರೀ ಪ್ರಮಾಣದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. "ನೋವು ತಡೆಯಲು ಸಾಕಷ್ಟು ಪೇನ್‌ಕಿಲ್ಲರ್‌ಗಳು ಹಾಗೂ ಸ್ನಾಯುಗಳನ್ನು ಸಡಿಲಗೊಳಿಸುವ ಪ್ರಬಲ ಮಾತ್ರೆಗಳನ್ನು ಸೇವಿಸುತ್ತಿದ್ದೇನೆ. ಈ ಔಷಧಿಗಳ ಪ್ರಭಾವದಿಂದಾಗಿ ನನ್ನ ಗಂಟಲು ಸದ್ಯ ಭಾರವಾದಂತಾಗಿದೆ. ಹೀಗಾಗಿ ನನ್ನ ಹಾಡುವ ಧ್ವನಿಯ ಮೇಲೂ ಕೊಂಚ ಪರಿಣಾಮ ಬೀರಿದೆ" ಎಂದು ಅವರು ಬೇಸರದಿಂದಲೇ ಮಾತನಾಡಿದ್ದಾರೆ.
ನೋವಿದ್ದರೂ ಪ್ರದರ್ಶನ ರದ್ದು ಮಾಡಲ್ಲ
ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಗಾಯಕರು ವಿಶ್ರಾಂತಿ ಪಡೆಯುತ್ತಾರೆ. ಆದರೆ, ಸೋನು ನಿಗಮ್ ಅವರು ಮಾತ್ರ ತಮ್ಮ ಮುಂಬರುವ ಯಾವುದೇ ಲೈವ್ ಕಾನ್ಸರ್ಟ್‌ಗಳನ್ನು ರದ್ದುಗೊಳಿಸದಿರಲು ತೀರ್ಮಾನಿಸಿದ್ದಾರೆ. ನೋವು ಮತ್ತು ಗಂಟಲಿನ ಸಮಸ್ಯೆಯಿಂದಾಗಿ ಸ್ಟೇಜ್ ಏರುವ ಮುನ್ನ ಕೊಂಚ ಆತಂಕ ಹಾಗೂ ನರ್ವಸ್‌ನೆಸ್ ಇರುವುದು ನಿಜ, ಆದರೂ ಅಭಿಮಾನಿಗಳನ್ನು ನಿರಾಸೆಗೊಳಿಸದೆ ವೇದಿಕೆ ಮೇಲೆ ಅಬ್ಬರಿಸಲು ಕಾಯುತ್ತಿದ್ದೇನೆ ಎಂದಿದ್ದಾರೆ. ವಿಡಿಯೋದ ಕೊನೆಯಲ್ಲಿ ಅವರು "ಭಗವಂತ ನನಗೆ ಈ ಪರಿಸ್ಥಿತಿಯನ್ನು ಎದುರಿಸಲು ಶಕ್ತಿ ನೀಡಲಿ" ಎಂದು ಪ್ರಾರ್ಥಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸೋನು ನಿಗಮ್ ಅವರ ಸಾಲು ಸಾಲು ಲೈವ್ ಶೋಗಳು ನಿಗದಿಯಾಗಿವೆ. ತೀವ್ರ ಆರೋಗ್ಯ ಸಮಸ್ಯೆಯ ನಡುವೆಯೂ ಅವರು ತಮ್ಮ ವೃತ್ತಿಪರತೆಗೆ ಮೊದಲ ಆದ್ಯತೆ ನೀಡಿದ್ದು, ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ವೇಳಾಪಟ್ಟಿಯ ಪ್ರಕಾರ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಇದರ ಮೊದಲ ಭಾಗವಾಗಿ ಜೂನ್ 27ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅವರ ಭರ್ಜರಿ ಪ್ರದರ್ಶನ ನಡೆಯಲಿದೆ.
ಇದಾದ ಬಳಿಕ ಮುಂದಿನ ತಿಂಗಳು, ಅಂದರೆ ಜುಲೈ 25ರಂದು ನವದೆಹಲಿಯ ಪ್ರಮುಖ ಮುಕ್ತ ವೇದಿಕೆಯೊಂದರಲ್ಲಿ ಸೋನು ನಿಗಮ್ ಅವರು ಲೈವ್ ಕಾನ್ಸರ್ಟ್ ನಡೆಸಿಕೊಡಲಿದ್ದಾರೆ. ಇನ್ನು ಆಗಸ್ಟ್ 21ರಂದು ಅಬುಧಾಬಿಯ ಅಂತಾರಾಷ್ಟ್ರೀಯ ಸಾಂಸ್ಕೃತಿಕ ವೇದಿಕೆಯಲ್ಲಿ ಅವರ ಸಂಗೀತ ಕಚೇರಿ ನಿಗದಿಯಾಗಿದೆ. ಅಪ್ರತಿಮ ಗಾಯಕನ ಈ ಅನಾರೋಗ್ಯದ ಸ್ಥಿತಿಯನ್ನು ಕಂಡು ಇಡೀ ಭಾರತೀಯ ಸಂಗೀತ ಲೋಕ ಹಾಗೂ ಅವರ ಕೋಟ್ಯಂತರ ಅಭಿಮಾನಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅವರು ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗಲಿ ಎಂದು ಜಗತ್ತಿನಾದ್ಯಂತ ಹಾರೈಸುತ್ತಿದ್ದಾರೆ.













Click it and Unblock the Notifications