Advocate General of Karnataka: ನೂತನ ಅಡ್ವೊಕೇಟ್ ಜನರಲ್ ಆಗಿ ಶಶಿಕಿರಣ್ ಶೆಟ್ಟಿ ನೇಮಕ
ಬೆಂಗಳೂರು, ಮೇ 20: ಕರ್ನಾಟಕದ ನೂತನ ಅಡ್ವೊಕೇಟ್ ಜನರಲ್ ಆಗಿ ಹೈಕೋರ್ಟ್ ಹಿರಿಯ ವಕೀಲರಾದ ಶಶಿಕಿರಣ ಶೆಟ್ಟಿಯವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಶಿಕಿರಣ ಶೆಟ್ಟಿ ನಿವೃತ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಪುತ್ರ. ಕಾಂಗ್ರೆಸ್ ಶಾಸಕರ ಅನರ್ಹತೆ ಪ್ರಕರಣ ಸೇರಿದಂತೆ ಹಲವು ಮಹತ್ವದ ಪ್ರಕರಣಗಳನ್ನು ಅವರು ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿ ಮುಗಿದ ನಂತರ ಅಡ್ವೊಕೇಟ್ ಜನರಲ್ ಆಗಿದ್ದ ಪ್ರಭುಲಿಂಗ ನಾವದಗಿ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಸ್ಥಾನಕ್ಕೆ ಶಶಿಕಿರಣ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಎಜಿ ನೇಮಕ ಮಾಡಲು ಸಂಪುಟ ಸಭೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರ ನೀಡಲಾಗಿತ್ತು. ನೇಮಕಾತಿಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಶಶಿಕಿರಣ ಶೆಟ್ಟಿ, ತಮ್ಮನ್ನು ನೇಮಕ ಮಾಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ನ್ಯಾಯಾಲಯದ ಕೆಲಸ ನಿರ್ವಹಣೆಯನ್ನು ಉತ್ತಮಗೊಳಿಸುವು ನಮ್ಮ ಆದ್ಯತೆಯಾಗಿದೆ. ಬಾಕಿ ಉಳಿದಿರುವ ಮತ್ತು ಕ್ಷುಲ್ಲಕ ಪ್ರಕರಣಗಳಲ್ಲಿ ಆದಷ್ಟು ಬೇಗ ಇತ್ಯರ್ಥಗೊಳಿಸುವುದು ಹಾಗೂ ಕಾನೂನು ಇಲಾಖೆಯನ್ನು ಬಲಪಡಿಸುವುದು ನಮ್ಮ ಮೊದಲ ಆದ್ಯತೆ ಎಂದು ಶಶಿಕಿರಣ್ ಶೆಟ್ಟಿ ಹೇಳಿದ್ದಾರೆ.
ಡಿಜಿ ಐಜಿಪಿ ಆಗಿ ಅಲೋಕ್ ಮೋಹನ್ ನೇಮಕ
ಇನ್ನು ರಾಜ್ಯಸರ್ಕಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಮೋಹನ್ ಅವರನ್ನು ನೇಮಕಗೊಳಿಸಿ ಇಂದು ಆದೇಶ ಹೊರಡಿಸಿದೆ. ಡಿಜಿ ಐಜಿಪಿ ಆಗಿದ್ದ ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಿದ ಬಳಿಕ ತೆರವಾದ ಸ್ಥಾನಕ್ಕೆ ಅಲೋಕ್ ಮೋಹನ್ ನೇಮಕವಾಗಿದೆ.












Click it and Unblock the Notifications