ಬಿಜೆಪಿ ಸೇರುವ ಸಿದ್ಧತೆಯಲ್ಲಿ ಶಂಕರ ಬಿದರಿ!

ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದ ಶಂಕರ ಬಿದರಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೆಂಬಲಿಗರು ಹಾಗೂ ಹಿತೈಷಿಗಳ ಸಭೆ ನಡೆಸಿ, ಅ.21ರ ನಂತರ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಘೋಷಿಸಿದ್ದರು.
ಸದ್ಯ ಶಂಕರ ಬಿದರಿ ಬಿಜೆಪಿ ಸೇರಲು ಆಸಕ್ತಿ ತೋರಿದ್ದಾರೆ. ಬಿಜೆಪಿ ನಾಯಕರ ಜೊತೆ ಶಂಕರ ಬಿದರಿ ಬೆಂಬಲಿಗರು ನಡೆಸಿದ ಮಾತುಕತೆಯೂ ಫಲ ನೀಡಿದ್ದು, ಬಿಜೆಪಿ ನಾಯಕರು ಬಿದರಿ ಅವರಿಗೆ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಶೀಘ್ರದಲ್ಲೇ ಶಂಕರ ಬಿದರಿ ಬಿಜೆಪಿ ಸೇರುವ ಸಾಧ್ಯತೆ ಇದೆ.
ವಿಧಾನಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷ ಸೇರಿದ್ದ ಬಿದರಿ ಚುನಾವಣೆ ನಂತರ ತಮಗೆ ಯಾವುದೇ ಸ್ಥಾನಮಾನ ನೀಡಲಿಲ್ಲ ಎಂಬ ಕಾರಣಕ್ಕಾಗಿ ಸಮಾಜವಾದಿ ಪಕ್ಷ ಸೇರಿದ್ದರು. ಆದರೆ, ಚನ್ನಪಟ್ಟಣದ ಕ್ಷೇತ್ರದ ಶಾಸಕ ಹಾಗೂ ಪಕ್ಷದ ಮುಖಂಡ ಸಿ.ಪಿ.ಯೋಗೇಶ್ವರ್ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಪಕ್ಷ ತೊರೆದಿದ್ದರು. (ಬಿದರಿ ಕೈ ತಪ್ಪಿದ ಎಸ್ ಪಿ ರಾಜ್ಯಾಧ್ಯಕ್ಷ ಸ್ಥಾನ)
ಮುಂದಿನ ಲೋಕಸಭೆ ಚುನಾವಣೆಯಲ್ಲಿ ತವರೂರು ಬಾಗಲಕೋಟೆಯಿಂದ ಲೋಕಸಭಾ ಚುನಾವಣೆಯ ಟಿಕೆಟ್ ಬಯಸುತ್ತಿರುವ ಶಂಕರ ಬಿದರಿ ಜೆಡಿಎಸ್ ಅಥವ ಬಿಜೆಪಿ ಸೇಬಹುದೆಂದು ವಿಶ್ಲೇಷಿಸಲಾಗುತ್ತಿತ್ತು. ಸದ್ಯ ಅವರ ಬಿಜೆಪಿ ಸೇರಲು ಆಸಕ್ತಿ ಹೊಂದಿದ್ದಾರೆ. ಬಿಜೆಪಿಯಲ್ಲಿ ಬಿದರಿ ಅವರಿಗೆ ಸೂಕ್ತ ಸ್ಥಾನ-ಮಾನ ದೊರೆಯುವುದೇ ಕಾದು ನೋಡಬೇಕು.
ತ್ರಿಣಮೂಲ ಕಾಂಗ್ರೆಸ್ ಮತ್ತು ಬಿಎಸ್ ಪಿ ಪಕ್ಷಗಳಿಂದಲೂ ಶಂಕರ ಬಿದರಿ ಅವರಿಗೆ ಆಹ್ವಾನ ಬಂದಿದೆ ಎಂದು ತಿಳಿದು ಬಂದಿದೆ. ಆದರೆ, ಶಂಕರ ಬಿದರಿ ಕರ್ನಾಟಕದಲ್ಲಿ ಪ್ರಭಾವ ಹೊಂದಿರುವ ಪಕ್ಷಗಳನ್ನು ಮಾತ್ರ ಸೇರಲು ಬಯಸಿದ್ದಾರೆ. ಆದ್ದರಿಂದ ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈ ಕುರಿತ ಅಂತಿಮ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ.












Click it and Unblock the Notifications