ಬೆಂಗಳೂರು; ಶಂಕಿತ ಉಗ್ರರು 7 ದಿನಗಳ ಕಾಲ ಸಿಸಿಬಿ ವಶಕ್ಕೆ
ಬೆಂಗಳೂರು, ಜುಲೈ 19; ಬೆಂಗಳೂರು ನಗರದಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ ಐವರು ಶಂಕಿತ ಉಗ್ರರನ್ನು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ವಶಕ್ಕೆ ಕೋರ್ಟ್ ನೀಡಿದೆ. ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರನ್ನು ಬಂಧಿಸಿರುವ ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
ಬುಧವಾರ ಮಧ್ಯಾಹ್ನ ಬಿಗಿ ಬಂದೋಬಸ್ತ್‌ನಲ್ಲಿ ಬಂಧಿಸಲಾದ ಶಂಕಿತ ಉಗ್ರರಾದ ಸುಹೇಲ್, ಉಮರ್, ಜಾಹಿದ್, ಮುದಾಸಿರ್ ಮತ್ತುಫೈಜರ್ನನ್ನು ಎನ್‌ಐಎ ವಿಶೇಷ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.

ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಶಂಕಿತ ಉಗ್ರರನ್ನು ವಶಕ್ಕೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದರು. ಪೊಲೀಸರು ಮನವಿ ಪರಿಗಣಿಸಿದ ಕೋರ್ಟ್ ಐವರು ಶಂಕಿತ ಉಗ್ರರನ್ನು 7 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿತು. ರಹಸ್ಯ ಸ್ಥಳದಲ್ಲಿ ಪೊಲೀಸರು ವಿಚಾರಣೆ ಮುಂದುವರೆಸುವ ನಿರೀಕ್ಷೆ ಇದೆ.
ಸಿದ್ದರಾಮಯ್ಯ ಅಭಿನಂದನೆ; ಸಿಸಿಬಿ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, 'ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ವಿಫಲಗೊಳಿಸಿರುವ ರಾಜ್ಯದ ಸಿಸಿಬಿ ಪೊಲೀಸರಿಗೆ ಅಭಿನಂದನೆಗಳು' ಎಂದು ಹೇಳಿದ್ದಾರೆ.
'ಭಯೋತ್ಪಾದಕ ಚಟುವಟಿಕೆಗಳು ಸೇರಿದಂತೆ ಯಾವುದೇ ತೆರನಾದ ದೇಶವಿರೋಧಿ ಚಟುವಟಿಗಳಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ, ಬೇರು ಸಮೇತ ಅಂತಹ ಶಕ್ತಿಗಳನ್ನು ರಾಜ್ಯದಿಂದ ಕಿತ್ತೊಗೆಯಲು ನಾವು ಸದಾ ಸಿದ್ಧರಿದ್ದೇವೆ. ನಾಡಿನ ಪ್ರತಿಯೊಬ್ಬರೂ ಸುರಕ್ಷತೆಯ ಬದುಕು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ' ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಸದನದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಶಂಕಿತ ಉಗ್ರರ ಬಂಧನದ ಕುರಿತ ಹೇಳಿಕೆ ನೀಡಿದ್ದಾರೆ. "ನಾನು ಸಿಸಿಬಿ ಪೊಲೀಸರನ್ನು ಅಭಿನಂದಿಸುತ್ತೇನೆ ಮತ್ತು ಅವರ ಕಾರ್ಯವನ್ನು ಪ್ರಶಂಸೆ ಮಾಡುತ್ತೇನೆ. ಶಸ್ತ್ರಾಸ್ತ್ರ ಸಂಗ್ರಹ ಮಾಡಿ ಕರ್ನಾಟಕ ಮತ್ತು ದೇಶದ ವಿವಿಧ ಭಾಗದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
"ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಲ್ಲರನ್ನು ಬಂಧಿಸಲಾಗಿದೆ. ತನಿಖೆಯ ಬಳಿಕ ಅವರು ಯಾವ ಸಂಘಟನೆಯ ಜೊತೆ ಸಂಪರ್ಕದಲ್ಲಿದ್ದರು ಎಂಬುದು ತಿಳಿಯಲಿದೆ" ಎಂದು ಗೃಹ ಸಚಿವರು ಹೇಳಿದ್ದಾರೆ.
ಎನ್‌ಐಎ ತನಿಖೆಗೆ ಆಗ್ರಹ; ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣದ ಬಗ್ಗೆ ಎನ್‌ಐಎ ತನಿಖೆಯಾಗಬೇಕು ಎಂದು ಪ್ರತಿಪಕ್ಷ ಬಿಜೆಪಿ ವಿಧಾನಸಭೆಯಲ್ಲಿ ಒತ್ತಾಯಿಸಿದೆ. ಆದರೆ ಸರ್ಕಾರ ಈ ಒತ್ತಾಯವನ್ನು ತಳ್ಳಿ ಹಾಕಿದೆ. ಶಂಕಿತರನ್ನು ಬಂಧಿಸಿರುವುದೇ ನಮ್ಮ ಪೊಲೀಸರು, ಅವರೇ ತನಿಖೆ ನಡೆಸಲಿದ್ದಾರೆ ಎಂದು ಹೇಳಿದೆ.
ಶಂಕಿತ ಉಗ್ರನಾದ ಸುಹೇಲ್ ನೇತೃತ್ವದಲ್ಲಿ ಉಳಿದವರು ಸಭೆ ಸೇರುತ್ತಿದ್ದರು ಎಂದು ಶಂಕಿಸಲಾಗಿದೆ. ಆರ್. ಟಿ. ನಗರದಲ್ಲಿರುವ ಸುಹೇಲ್ ಮನೆಯಲ್ಲಿ ಸಭೆಗಳು ನಡೆಯುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಶಂಕಿತ ಉಗ್ರರಿಂದ ಸ್ಯಾಟಲೈಟ್ ಪೋನ್, ನಾಡ ಪಿಸ್ತೂಲ್, ಡ್ರಾಗರ್, ಜೀವಂತ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಂಕಿತ ಉಗ್ರರು 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಟಿ. ನಾಸೀರ್ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಇದೆ. ಕೇರಳದ ಅಬ್ದುಲ್ ನಾಸೀರ್ ಮದನಿ ಸಹಚರ ಟಿ. ನಾಸೀರ್ ಲಷ್ಕರ್-ತೋಯ್ಬಾ ಸಂಘಟನೆಗೆ ಸೇರಿದವನಾಗಿದ್ದಾನೆ.
ಶಂಕಿತ ಉಗ್ರರ ಬಂಧನದ ಬಳಿಕ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, 'ಬೆಂಗಳೂರಿಗೆ ಬಾಂಬಿಡಲು ಮುಂದಾದವರ ರಕ್ಷಣೆ ರಾಜ್ಯ ಸರಕಾರ ಮಾಡದಿರಲಿ. ಕರ್ನಾಟಕದಲ್ಲಿ @DKShivakumar ಅವರ 'ಬ್ರದರ್ಸ್' ವಿಧ್ವಂಸಕ ಕೃತ್ಯ ಎಸೆಗಲು ಹೊಂಚು ಹಾಕಿ ಸಿಕ್ಕಿಬಿದ್ದಿದ್ದಾರೆ. @siddaramaiah ರವರ ತುಘಲಕ್ ಸರ್ಕಾರದ ಆಗಮನದಿಂದಾಗಿ ಮತಾಂಧ ಜಿಹಾದಿಗಳು ಉಗ್ರರ ಸಖ್ಯ ಬೆಳೆಸಿ ಬಾಲ ಬಿಚ್ಚಿದ್ದಾರೆ. @INCKarnataka ಇನ್ನಾದರೂ ತುಷ್ಟೀಕರಣ ರಾಜಕೀಯ ಬಿಟ್ಟು, ದೇಶದ ಭದ್ರತೆ, ಸುರಕ್ಷತೆಗೆ ಒತ್ತು ನೀಡಲಿ..!' ಎಂದು ಹೇಳಿದೆ.












Click it and Unblock the Notifications