ನಮ್ಮ ಊರು, ನಮ್ಮ ಜವಾಬ್ದಾರಿ: ಬೆಂಗಳೂರಿನ ರಸ್ತೆಗಳನ್ನ ಸ್ವಚ್ಛಗೊಳಿಸುತ್ತಿರುವ ಸರ್ಬಿಯಾ ಮಾಡೆಲ್ ಲಜಾರ್
2018ರಲ್ಲಿ ಮಾಡೆಲಿಂಗ್ ಒಪ್ಪಂದದ ಮೇರೆಗೆ ಭಾರತಕ್ಕೆ ಕಾಲಿಟ್ಟ ಸರ್ಬಿಯಾ ಮೂಲದ 33 ವರ್ಷದ ಯುವಕ ಲಜಾರ್ ಜಾಂಕೋವಿಕ್, ಈಗ ದೇಶದ ರಸ್ತೆಗಳನ್ನ ಶುಚಿಗೊಳಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಅವರು ಬೆಂಗಳೂರಿನಲ್ಲಿ ಆರು ವರ್ಷ ಹಾಗೂ ದೆಹಲಿಯಲ್ಲಿ ಎರಡು ವರ್ಷ ಕಳೆದಿದ್ದಾರೆ.
ಕೇವಲ ಮಾಡೆಲಿಂಗ್ ಹಾಗೂ ಜಾಹೀರಾತುಗಳಲ್ಲಿ ಮಿಂಚುವುದರ ಜೊತೆಗೆ, ಅವರು ಭಾರತದ 20ಕ್ಕೂ ಹೆಚ್ಚು ರಾಜ್ಯಗಳನ್ನ ಸುತ್ತಿದ್ದಾರೆ. ಈ ಪ್ರವಾಸದ ವೇಳೆ ಅವರನ್ನು ಅತಿ ಹೆಚ್ಚು ಕಾಡಿದ ಸಮಸ್ಯೆ ಎಂದರೆ ಎಲ್ಲೆಂದರಲ್ಲಿ ಬಿದ್ದಿರುವ ಕಸ ಮತ್ತು ಆ ಬಗ್ಗೆ ಜನರಿಗಿರುವ ನಿರ್ಲಕ್ಷ್ಯದ ಮನಸ್ಥಿತಿ. ಸದ್ಯ ಬೆಂಗಳೂರಿನ ಹೆಣ್ಣೂರಿನಲ್ಲಿ ನೆಲೆಸಿರುವ ಲಜಾರ್, ತಾವೇ ಖುದ್ದಾಗಿ ಕಸದ ಚೀಲ ಹಿಡಿದು ರಸ್ತೆಗಿಳಿದಿದ್ದಾರೆ.

'4cleanIndia' ಅಭಿಯಾನ
ಭಾರತೀಯ ಸಂಸ್ಕೃತಿ, ಭಾಷೆ ಮತ್ತು ಜನರ ಜೀವನಶೈಲಿಯನ್ನ ಹತ್ತಿರದಿಂದ ಅರಿತ ಲಜಾರ್, 2024ರಲ್ಲಿ ಗುರ್ಗಾಂವ್‌ನಲ್ಲಿ '4cleanIndia' ಅಭಿಯಾನವನ್ನ ಆರಂಭಿಸಿದರು. ಇದಕ್ಕೂ ಮುನ್ನ ರಿಷಿಕೇಶ, ತಮಿಳುನಾಡು ಹಾಗೂ ಸಿಕ್ಕಿಂಗೆ ಭೇಟಿ ನೀಡಿದಾಗಲೂ ತಾವೇ ಕಸ ಗುಡಿಸಿ, ಸ್ವಚ್ಛತೆ ಮಾಡಿದ್ದರು. ಕೇವಲ ತಾವೊಬ್ಬರೇ ಒಂದು ಜಾಗವನ್ನು ಶುಚಿಗೊಳಿಸಿ ವಿಡಿಯೋ ಹಾಕಿದರೆ ಸಾಲದು ಎಂಬುದು ಅವರಿಗೆ ಶೀಘ್ರದಲ್ಲೇ ಅರಿವಾಯಿತು.
ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್‌ಗಳನ್ನ ನೀಡುವ ಮೂಲಕ ಸ್ಥಳೀಯರನ್ನ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದರು. ಇಂದು ಅವರ ಪುಟದೊಂದಿಗೆ ಸುಮಾರು 1.5 ಲಕ್ಷಕ್ಕೂ ಹೆಚ್ಚು ಜನರು ಕೈಜೋಡಿಸಿದ್ದು, ತಾವೇ ಸ್ವಚ್ಛಗೊಳಿಸಿದ ಫೋಟೋಗಳನ್ನ ಮತ್ತು ಸಂದೇಶಗಳನ್ನ ಹಂಚಿಕೊಳ್ಳುತ್ತಿದ್ದಾರೆ.
ಬೆಂಗಳೂರು ರಸ್ತೆಗಳ ಸ್ವಚ್ಛತೆ
ಇಡೀ ದೇಶದ ರಸ್ತೆಗಳನ್ನ ತಾವೊಬ್ಬರೇ ಶುಚಿಗೊಳಿಸುವುದು ಲಜಾರ್ ಅವರ ಗುರಿಯಲ್ಲ. ಬದಲಾಗಿ, ಜನರು ತಮ್ಮ ಸುತ್ತಮುತ್ತಲಿನ ಪರಿಸರದ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎನ್ನುವುದು ಅವರ ಆಶಯ. ಬೆಂಗಳೂರು ರಸ್ತೆಗಳ ಸ್ವಚ್ಛತೆ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಅವರು ಜಯನಗರ, ಜೆಪಿ ನಗರ, ಚರ್ಚ್ ಸ್ಟ್ರೀಟ್ ಹಾಗೂ ಕಬ್ಬನ್ ಪಾರ್ಕ್ ಸುತ್ತಮುತ್ತಲಿನ ಸುಮಾರು 10 ಸ್ಥಳಗಳನ್ನು ಸ್ವಚ್ಛಗೊಳಿಸಿದ್ದಾರೆ.
ಇತ್ತೀಚೆಗೆ ಬಿಡಿಎಸ್ ಗಾರ್ಡನ್ ಬಳಿ ಕಸದ ರಾಶಿ ಬಿದ್ದಿದ್ದಾಗ, ತಾವೇ ಅದನ್ನು ಶುಚಿಗೊಳಿಸಿ ವಿಡಿಯೋ ಹಂಚಿಕೊಂಡಿದ್ದರು. ಒಬ್ಬ ವಿದೇಶಿ ವ್ಯಕ್ತಿ ನಮ್ಮ ರಸ್ತೆಯನ್ನು ಗುಡಿಸುತ್ತಿದ್ದಾನೆ ಎಂಬ ನಾಚಿಕೆಯಿಂದಲೋ ಅಥವಾ ಪ್ರೇರಣೆಯಿಂದಲೋ, ಅಲ್ಲಿನ ನಿವಾಸಿಗಳು ಆ ಜಾಗವನ್ನ ಕಳೆದ ಒಂದೂವರೆ ತಿಂಗಳಿನಿಂದ ಕಸ ಹಾಕದೇ ನೀಟ್ ಆಗಿ ಇಟ್ಟುಕೊಂಡಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಲು ಲಜಾರ್ ಅವರು "ನಮ್ಮ ಊರು, ನಮ್ಮ ಜವಾಬ್ದಾರಿ" ಎಂಬ ಕನ್ನಡದ ವಾಕ್ಯವನ್ನ ಹೆಮ್ಮೆಯಿಂದ ಬಳಸುತ್ತಾರೆ.
ನಾಲ್ಕು ಗೋಡೆಯ ಮನಸ್ಥಿತಿ ಬದಲಾಗಬೇಕು
ಭಾರತೀಯರು ತಮ್ಮ ಮನೆಯನ್ನ ಬಹಳ ಶುಚಿಯಾಗಿಟ್ಟುಕೊಳ್ಳುತ್ತಾರೆ, ಆದರೆ ಆ ಜವಾಬ್ದಾರಿ ತಮ್ಮ ಮನೆಯ ನಾಲ್ಕು ಗೋಡೆಯಿಂದ ಹೊರಗೆ ಬರುವುದಿಲ್ಲ ಎಂಬುದು ಲಜಾರ್ ಅವರ ಅಭಿಪ್ರಾಯ. "ನನ್ನ ಮನೆ ಶುಚಿಯಾಗಿದೆ, ನನ್ನ ವಸ್ತುಗಳು ನೀಟಾಗಿವೆ ಎಂದರೆ ಎಲ್ಲವೂ ಸರಿಯಾಗಿದೆ ಎಂಬ ಮನಸ್ಥಿತಿ ಬದಲಾಗಬೇಕು. ಆ ಮನಸ್ಥಿತಿಯನ್ನ ಮನೆಯಿಂದ ಸ್ವಲ್ಪ ಹೊರ ತಂದರೆ ಸಾಕು, ಎಲ್ಲವೂ ಬದಲಾಗುತ್ತದೆ" ಎನ್ನುತ್ತಾರೆ ಅವರು.
ಪ್ರತಿ ಮನೆಯವರು ಮತ್ತು ಅಂಗಡಿಯವರು ತಮ್ಮ ಆವರಣದ ಹೊರಗಿನ ಕೇವಲ ಎರಡು ಮೀಟರ್ ಜಾಗವನ್ನು ಶುಚಿಯಾಗಿಟ್ಟುಕೊಳ್ಳುವ ಜವಾಬ್ದಾರಿ ಹೊತ್ತರೆ, ದೇಶದ ಅರ್ಧದಷ್ಟು ಕಸದ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವುದು ಅವರ ಪರಿಹಾರ.
ಪರಿಸರ ಉಳಿಸಿ, ಕಸ ಹಾಕಬೇಡಿ ಎಂದು ಭಾಷಣ ಮಾಡಿದರೆ ಯಾರೂ ಕೇಳುವುದಿಲ್ಲ. ಲಜಾರ್ ಅವರ ಪ್ರಕಾರ, "ಭಾರತವು ಚಾಯ್ ಮತ್ತು ಎಮೋಷನ್ ಮೇಲೆ ನಡೆಯುವ ದೇಶ." ಹೀಗಾಗಿ, ಸ್ವಚ್ಛತೆಯ ಬಗ್ಗೆ ಉಪದೇಶ ನೀಡುವುದಕ್ಕಿಂತ, ಅದನ್ನು ಸಂಗೀತ, ಡ್ಯಾನ್ಸ್ ಮೂಲಕ ಮೋಜಿನ ಟ್ರೆಂಡ್ ಆಗಿ ಬದಲಾಯಿಸಬೇಕು ಎನ್ನುತ್ತಾರೆ ಅವರು. ಇದಕ್ಕಾಗಿ ಸೆಲೆಬ್ರಿಟಿಗಳು ಹಾಗೂ ಪ್ರಭಾವಿಗಳು ಕೈಜೋಡಿಸಬೇಕು ಎಂಬುದು ಅವರ ಸಲಹೆ.
ತಮ್ಮ ಈ ಸ್ವಚ್ಛತಾ ಕಾರ್ಯಕ್ಕೆ ಸರ್ಕಾರದ ಬೆಂಬಲವನ್ನೂ ನಿರೀಕ್ಷಿಸುತ್ತಿರುವ ಲಜಾರ್, ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಅವರ ಕಚೇರಿಯೊಂದಿಗೂ ಸಂಪರ್ಕದಲ್ಲಿದ್ದು, ಭವಿಷ್ಯದಲ್ಲಿ ಜನಪ್ರತಿನಿಧಿಗಳೊಂದಿಗೆ ಸೇರಿ ಬೃಹತ್ ಸ್ವಚ್ಛತಾ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.


Click it and Unblock the Notifications
