ಸರಳ ವಾಸ್ತು ಚಂದ್ರಶೇಖರ ಗುರೂಜಿ ಕೊಲೆ ಕೇಸ್: ಹೈಕೋರ್ಟ್‌ನಿಂದ ಮಹತ್ವದ ಆದೇಶ
ಬೆಂಗಳೂರು, ಆಗಸ್ಟ್ 03: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಅಂಗಡಿ ಗುರೂಜಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಮಹಂತೇಶ ಶಿರೂರ್‌ಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಹಾಗಾಗಿ ಸದ್ಯ ಆರೋಪಿಗೆ ಬಿಡುಗಡೆ ಭಾಗ್ಯ ಇಲ್ಲದಂತಾಗಿದ್ದು, ಜೈಲಿನಲ್ಲಿಯೇ ಮುಂದಿನ ದಿನಗಳನ್ನು ಕಳೆಯಬೇಕಾಗಿದೆ.
ಆರೋಪಿಯನ್ನು ಜೈಲಿನಿಂದ ಹೊರಗೆಬಿಟ್ಟರೆ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾದ್ಯತೆ ಇದೆ ಎಂದು ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಜಾಮೀನು ಕೋರಿ ಮಹತೇಂಶ್ ಶಿರೂರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯಪೀಠ ಆದೇಶಿಸಿದೆ.

ಭಯ ಸೃಷ್ಟಿಸಿದ ಕೊಲೆ
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಹಳೆಯ ದ್ವೇಷದಿಂದ ಅರ್ಜಿದಾರ ಆರೋಪಿಯು ಚಂದ್ರಶೇಖರ ಗುರೂಜಿಯನ್ನು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿರುವ ರೀತಿ ನೋಡಿದರೆ, ಗುರೂಜಿ ಮೇಲೆ ಆರೋಪಿ ಎಷ್ಟು ದ್ವೇಷ ಬೆಳೆಸಿಕೊಂಡಿದ್ದ ಎನ್ನುವುದನ್ನು ಸೂಚಿಸುತ್ತದೆ. ಗುರೂಜಿ ಹತ್ಯೆ ಪೂರ್ವಯೋಜಿತ ಕೃತ್ಯ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.
ಅರ್ಜಿದಾರ ಮಾರಾಕಾಸ್ತ್ರಗಳೊಂದಿಗೆ ಗುರೂಜಿಯನ್ನು ಭೇಟಿ, ಚಾಕುವಿನಿಂದ 56 ಬಾರಿ ಇರಿದು ಗಾಯಗೊಳಿಸಿ ಕೊಲೆ ಮಾಡಿದ್ದಾರೆ. ಅರ್ಜಿದಾರನ ಕೃತ್ಯ ಸಮಾಜದಲ್ಲಿ ಸಂಚಲನ ಮೂಡಿಸಿರುವುದಲ್ಲೇ ದೊಡ್ಡ ಪ್ರಮಾಣದಲ್ಲಿ ಭಯವನ್ನು ಸಹ ಸೃಷ್ಟಿಸಿದೆ ಎಂದು ಪೀಠ ಹೇಳಿದೆ.
ಅಲ್ಲದೇ, ಮೃತ ಗುರೂಜಿಯ ಕುಟುಂಬದ ಸದಸ್ಯರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ ಜಾಮೀನು ಅರ್ಜಿ ತೀರ್ಮಾನಿಸುವಾಗ ಆರೋಪಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಆದರೆ, ವೈಯಕ್ತಿಕ ಸ್ವಾತಂತ್ರ ನಿರಂಕುಶವಾಗಿರುವುದಿಲ್ಲ. ಅದನ್ನು ನ್ಯಾಯಯುತವಾದ ಕಾರಣಗಳಿಂದ ನಿರ್ಬಂಧಿಸಹುದು. ವ್ಯಕ್ತಿಯು ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದಾಗ ವೈಯಕ್ತಿ ಸ್ವತಂತ್ರವ್ಯನ್ನು ನಿರ್ಬಂಧಿಸಬಹುದು.
ಸಮಾಜವು ಓರ್ವ ವ್ಯಕ್ತಿಯಿಂದ ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ನಿರೀಕ್ಷಿಸುತ್ತದೆ. ಪ್ರಜೆಯು ಕಾನೂನು ಪಾಲಿಸಬೇಕಾಗುತ್ತದೆ. ಸಮಾಜದ ನಿಯಮಗಳಿಗೆ ಗೌರವ ತೋರಿಸಬೇಕಾಗುತ್ತದೆ. ಅರ್ಜಿದಾರ ಚಂದ್ರಶೇಖರ ಗುರೂಜಿಯನ್ನು ಕೊಲೆ ಮಾಡಿರುವುದು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಮತ್ತು ದಾಖಲೆಗಳಿಂದ ತಿಳಿದುಬರುವ ಕಾರಣ ಜಾಮೀನು ಪಡೆಯಲು ಮಹಂತೇಶ್ ಅರ್ಹನಾಗಿಲ್ಲ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.
ಮಹಂತೇಶ್ ಶಿರೂರ್ ಪರ ವಕೀಲರು, ಅರ್ಜಿದಾರ ಅಮಾಯಕನಾಗಿದ್ದಾನೆ. ತಪ್ಪಾಗಿ ಆತನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಘಟನೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳಲ್ಲಿಯೂ ಸಹ ಅರ್ಜಿದಾರನ ಗುರುತು ಪತ್ತೆಯಾಗುವುದಿಲ್ಲ. ಆತನ ವಿರುದ್ಧ ಸಾಕ್ಷ್ಯಗಳು ಇಲ್ಲವಾಗಿದ್ದು, ಜಾಮೀನು ನೀಡಬೇಕು ಎಂದು ವಾದ ಮಂಡಿಸಿದ್ದರು.
ಅದಕ್ಕೆ ಆಕ್ಷೇಪಿಸಿದ್ದ ಸರ್ಕಾರಿ ಪರ ವಕೀಲರು, ಅರ್ಜಿದಾರ ಗುರೂಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಸಿಸಿಟಿವಿ ದೃಶ್ಯಗಳಿಂದ ದೃಢಪಡುತ್ತದೆ. ಗುರೂಜಿ ಅವರ ಪತ್ನಿ ಸಿಸಿಟಿವಿ ದೃಶ್ಯಗಳನ್ನು ವೀಕ್ಷಿಸಿ, ಅರ್ಜಿದಾರನ ಗುರುತು ಪತ್ತೆಹಚ್ಚಿದ್ದಾರೆ. ಅರ್ಜಿದಾರ ಕೃತ್ಯ ಎಸಗಿರುವುದನ್ನು ಹಲವು ಪ್ರತ್ಯಕ್ಷದರ್ಶಿಗಳು ಕಂಡಿದ್ದಾರೆ.
ಗುರೂಜಿಯ ದೇಹದಲ್ಲಿ 56 ಗಾಯಗಳಿದ್ದವು. ಇದರಿಂದ ಅರ್ಜಿದಾರನ ಬರ್ಬರ ಮತ್ತು ಹೀನ ಕೃತ್ಯವನ್ನು ತೋರಿಸುತ್ತದೆ. ಅರ್ಜಿದಾರನಿಗೆ ಜಾಮೀನು ನೀಡಿದರೆ ಮೃತರ ಕುಟುಂಬ ಸದಸ್ಯರಿಗೆ ಮತ್ತು ಇತರೆ ಸಾಕ್ಷಿಗಳ ಜೀವಕ್ಕೆ ಅಪಾಯ ಒದಗಲಿದೆ. ಭಯಾನಕವಾಗಿರುವ ಈ ಹತ್ಯೆಯನ್ನು ಗಮನದಲ್ಲಿರಿಸಿಕೊಂಡು ಆರೋಪಿಗೆ ಜಾಮೀನು ನೀಡಬಾರದು ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ ಏನು..?
ಸರಳ ವಾಸ್ತು ಸಂಸ್ಥೆಯ ಉದ್ಯೋಗದಿಂದ ಅರ್ಜಿದಾರ ಮಹಂತೇಶ್‌ನನ್ನು ಗುರೂಜಿ ತೆಗೆದುಹಾಕಿದ್ದರು. ಈ ದ್ವೇಷದಿಂದ ಕಾರ್ಯಕ್ರಮವೊಂದಕ್ಕೆ ಹಾಜರಾಗಲು ಬೆಳಗಾವಿಗೆ ಬಂದಿದ್ದ ಗುರೂಜಿಯನ್ನು ಹೋಟೆಲ್ ಪ್ರೆಸಿಟೆಂಡ್ ಅಲ್ಲಿ ಭೇಟಿಯಾಗಿದ್ದ ಆರೋಪಿ ಆಶೀರ್ವಾದ ಪಡೆಯುವ ನೆಪದಲ್ಲಿ ಚಾಕುವಿನಿಂದ ಬರ್ಬರವಾಗಿ ಇರಿದು ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಗುರೂಜಿ ಸಾವನ್ನಪ್ಪಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಧಾರವಾಡದ ವಿದ್ಯಾನಗರ ಠಾಣಾ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ನಂತರ ತನಿಖೆ ನಡೆಸಿ ಕೊಲೆ ಪ್ರಕರಣದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಜಾಮೀನು ಕೋರಿ ಮಹಂತೇಶ್ ಹೈಕೋರ್ಟ್ ಮೊರೆ ಹೋಗಿದ್ದನು.












Click it and Unblock the Notifications