DV Sadanand Gowda: ಕೈತಪ್ಪಿದ ಟಿಕೆಟ್, ಬಿಜೆಪಿ ಬಿಟ್ಟು 'ಕೈ' ಹಿಡಿತಾರಾ ಮಾಜಿ ಸಿಎಂ: ನಾಳೆ ನಿರ್ಧಾರ
ಬೆಂಗಳೂರು, ಮಾರ್ಚ್ 18: ಬಿಜೆಪಿ ಟಿಕೆಟ್‌ಗಳು ಘೋಷಣೆ ಆಗುತ್ತಿದ್ದಂತೆ ಕರ್ನಾಟಕ ಬಿಜೆಪಿಯಲ್ಲಿ ಬಂಡಾಯ ಬಿಸಿ ಹೆಚ್ಚಾಗುತ್ತಿದೆ. ಹಾವೇರಿ ಟಿಕೆಟ್ ಕೈತಪ್ಪುತ್ತಿದ್ದಂತೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಬಂಡಾಯ ಘೋಷಿಸಿದ್ದಾರೆ. ಇದರ ಬೆನ್ನಲ್ಲೆ ಮಾಜಿ ಸಿಎಂ ಆಗಿರುವ ಕೇಂದ್ರ ಸಚಿವ ಡಿವಿ ಸದಾನಂದಗೌಡರು ಅಸಮಾಧಾನಗೊಂಡಿದ್ದಾರೆ. ಬಿಜೆಪಿ ತೊರೆಯುವರೇ? ಬಂಡಾಯ ಸಾರುವರೇ? ಪಕ್ಷದಲ್ಲೇ ಉಳಿಯುವರೇ? ಎಂಬೆಲ್ಲ ನಿರ್ಧಾರಗಳು ಮಂಗಳವಾರ (ಮಾರ್ಚ್ 19) ತಿಳಿಯಲಿವೆ.
ಬೆಂಗಳೂರು ಉತ್ತರ ಟಿಕೆಟ್ ಕೈತಪ್ಪಿರುವ ಕಾರಣ ಡಿವಿ ಸದಾನಂದಗೌಡರು ನಾಳೆ ಮಂಗಳವಾರ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಮೂಲಕ ಬೆಂಗಳೂರು ಉತ್ತರದ ಟಿಕೆಟ್ ಶೋಭಾ ಕರಂದ್ಲಾಜೆ ಅವರ ಪಾಲಾಗಿದ್ದರ ಬಗ್ಗೆ ಅಸಮಾಧಾನ, ಮುಂದಿನ ರಾಜಕೀಯ ನಡೆ ಕುರಿತು ಸ್ವತಃ ಬಹಿರಂಗಪಡಿಸಲಿದ್ದಾರೆ.

ಪಕ್ಷೇತರ ಸ್ಪರ್ಧೆ? ಇಲ್ಲವೇ ಕಾಂಗ್ರೆಸ್ ಸೇರ್ಪಡೆ?
ಟಿಕೆಟ್ ಹಂಚಿಕೆ ಬಿಜೆಪಿ ವರಿಷ್ಠರ ಕುರಿತು ಅಸಮಾಧಾನ ಹೊಂದಿರುವ ಡಿವಿ ಸದಾನಂದಗೌಡರು ಅವರಿಗೆ ಕಾಂಗ್ರೆಸ್ ಡಿಸಿಎಂ ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ತಿಳಿಸಬಹುದೇ? ಇಲ್ಲವೇ ಕೇಂದ್ರ ಸಚಿವ ಸ್ಥಾನ, ಸಿಎಂ ಸ್ಥಾನ ನೀಡಿದ್ದ ಬಿಜೆಪಿ ವಿರುದ್ಧ ಪಕ್ಷೇತರ ಸ್ಪರ್ಧೆ ಘೋಷಿಸಿ ಬಂಡಾಯ ಸಾರಬಹುದೇ? ಎಂಬ ಕುತೂಹಲ ಹೆಚ್ಚಾಗಿದೆ.
ಬೆಂಗಳೂರು ಉತ್ತರ ಕ್ಷೇತ್ರವನ್ನು ಶೋಭಾ ಕರಂದ್ಲಾಜೆ ಅವರಿಗೆ ನೀಡಿದ್ದು, ಸದಾನಂದಗೌಡರು ಯಾವ ಕ್ಷೇತ್ರವನ್ನು ನೀಡಿಲ್ಲ. ಈಗಾಗಲೇ 20 ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಅದರ ಬೆನ್ನಲ್ಲೆ ಕೆಎಸ್ ಈಶ್ವರಪ್ಪ ಬಂಡಾಯ ಸಾರಿದ್ದು, ಸದಾನಂದಗೌಡರು ಅದೇ ಸಾಲಿಗೆ ಸೇರುತ್ತಾರೆ ಎಂಬುದು ಮಂಗಳವಾರ ಸುದ್ದಿಗೋಷ್ಠಿ ಬಳಿಕ ಗೊತ್ತಾಗಲಿದೆ.

ಬೇರೆ ಪಕ್ಷಗಳ ನಾಯಕರು ಸಂಪರ್ಕಿಸಿದ್ದಾರೆ: ಡಿವಿಎಸ್
ವಿವಿಧ ರಾಜಕೀಯ ನಾಯಕರು ಡಿವಿ ಸದಾನಂದಗೌಡರನ್ನು ಸಂಪರ್ಕಿಸಿದ್ದಾರೆ ಎಂಬ ಸುದ್ದಿ ಪ್ರಸಾರವಾಗಿದ್ದು, ಇದನ್ನು ನಾನು ಅಲ್ಲಗಳೆಯುವುದಿಲ್ಲ ಎಂದರು. ಬಿಜೆಪಿ ನಾಯಕರು ನನ್ನ ಜೊತೆ ಸಭೆ ಕೂಡ ನಡೆಸಿದ್ದಾರೆ. ಇಂದು ನನ್ನ ಜನ್ಮದಿನ, ಕುಟುಂಬದವರೊಂದಿಗೆ ಚರ್ಚಿಸಿ ಮಂಗಳವಾರ ನಿರ್ಧಾರ ಪ್ರಕಟಿಸುತ್ತೇನೆ ಎಂದು ಗೌಡರು ಮಾಹಿತಿ ನೀಡಿದ್ದಾರೆ.
ಯಡಿಯೂರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ
ಇದೇ ವೇಳೆ ರಾಜ್ಯದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ನಾನು ಬಹಿರಂಗಪಡಿಸಲು ಬಯಸುವ ಕೆಲವು ವಿಷಯಗಳಿವೆ, ಅದರ ಬಗ್ಗೆ ನಾಳೆ ಮಾತನಾಡುತ್ತೇನೆ. ಪಟ್ಟಿಯಲ್ಲಿ ಒಕ್ಕಲಿಗರ ಹೆಸರಿದ್ದರೂ ಟಿಕೆಟ್ ನಿರಾಕರಿಸಿದ್ದಕ್ಕೆ ಬೇಸರವಾಗಿದೆ. ಟಿಕೆಟ್ ಕೊಡಿಸುವ ಭರವಸೆ ನೀಡಿದವರು ನನ್ನ ಪರ ನಿಲ್ಲಲಿಲ್ಲ. ಕೆಲವರ ಸ್ವಾರ್ಥಕ್ಕಾಗಿ ಶಿಕ್ಷೆ ಅನುಭವಿಸಬೇಕಾಗಿದೆ ಎಂದು ಡಿವಿಎಸ್ ತಿಳಿಸಿದರು.
ಯಡಿಯೂರಪ್ಪನವರು ತಮ್ಮ ಆಪ್ತ ಸಹಾಯಕಿ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡುವ ಬಗ್ಗೆ ಹಠ ಹಿಡಿದಿದ್ದಾರೆ. ಸ್ಥಳೀಯ ಮುಖಂಡರ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಸಚಿವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಬೆಂಗಳೂರು ಉತ್ತರಕ್ಕೆ ಸ್ಥಳಾಂತರಿಸಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಲಾಗಿದೆ.
ಈ ಹಿಂದೆ ಡಿಸಿ ಸದಾನಂದಗೌಡು ಲೋಕಸಭಾ ಚುನಾವಣೆ ಸ್ಪರ್ಧಿಸಲ್ಲ ಎಂದು ನಿವೃತ್ತಿ ಕುರಿತು ಮಾತನಾಡಿದ್ದರು. ಆದಾದ ಬಳಿಕ ಚುನಾವಣೆ ಸ್ಪರ್ಧೆ ಬಗ್ಗೆ ಒಲವು ಹೊಂದಿದ್ದ ಅವರು ತಮಗೆ ಬೆಂಗಳೂರು ಉತ್ತರದಲ್ಲಿ ಸ್ಪರ್ಧೆಗೆ ಒತ್ತಡ ಇದೆ ಎಂದು ಆಕಾಂಕ್ಷೆ ವ್ಯಕ್ತಪಡಿಸಿದ್ದರು. ತಾವು ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು.












Click it and Unblock the Notifications