ಕಾಲು ಜಾರಿ ಬಿದ್ದ ಸಾಲುಮರದ ತಿಮ್ಮಕ್ಕ : ಬೆನ್ನಮೂಳೆಗೆ ಪೆಟ್ಟು ಆಸ್ಪತ್ರೆಗೆ ದಾಖಲು
ವೃಕ್ಷಮಾತೆ ಎಂದು ಪ್ರಸಿದ್ಧವಾಗಿರುವ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರು ತಮ್ಮ ಮನೆಯಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಬೆನ್ನುಮೂಳೆಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಸಂಜೆ ಬೆಂಗಳೂರಿನ ಮಂಜುನಾಥನಗರದಲ್ಲಿ ಕಾಲು ಜಾರಿ ಬಿದ್ದಿದ್ದು ಅವರನ್ನು ಜಯನಗರದ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಅವರು ಪರಿಸರದ ಮೇಲಿನ ಕಾಳಜಿಯಂದಲೇ ರಾಜ್ಯ, ದೇಶದಲ್ಲಿ ಜನಪ್ರಿಯರಾಗಿದ್ದಾರೆ. ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟಿದ್ದಲ್ಲದೆ ಅವುಗಳಿಗೆ ವರ್ಷಗಳಿಂದ ನೀರೆರೆದು ಮಕ್ಕಳಂತೆ ಬೆಳೆಸಿದ್ದಾರೆ. ಇದೀ ಕಾರಣಕ್ಕೆ ಅವರನ್ನು ಸಾಲುಮರದ ತಿಮ್ಮಕ್ಕ ಎಂದು ಜನಪ್ರಿಯರಾಗಿದ್ದಾರೆ.

ಸಾವಿರಾರು ಮರಗಳಿಗೆ ಜೀವ ನೀಡಿರುವ ಸಾಲುಮರದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಸದ್ಯ ಏರುಪೇರಾಗಿದೆ. ತಮ್ಮ ನಿವಾಸದಲ್ಲಿ ಜಾರಿ ಬೀಳುವ ಮೂಲಕ ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಅವರಿಗೆ ಉಸಿರಾಟದ ತೊಂದರೆ, ಮಂಡಿ ನೋವು ಸಹ ಕಾಣಿಸಿಕೊಂಡಿತ್ತು.
65 ವರ್ಷಗಳಿಂದ ಮರ ನೆಟ್ಟು ಪೋಷಣೆ
ಮನೆಯಲ್ಲಿ ಬಡತನ ಇದ್ದರೂ ತಿಮ್ಮಕ್ಕ ಅವರ ಪರಿಸರ ಪ್ರೀತಿ ಎಂದೂ ಕಡಿಮೆಯಾಗಲಿಲ್ಲ. ಕಳೆದ 65 ವರ್ಷಗಳಿಂದ ಅವರು ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ದಾಖಲೆಗಳ ಪ್ರಕಾರ ಇದುವರೆಗೂ 8 ಸಾವಿರ ಮರ ನೆಟ್ಟಿದ್ದಾರೆ ಎಂದು ಹೇಳಲಾಗಿದೆ. ಅವರು ಅಂದು ನೆಟ್ಟ ಗಿಡಗಳು ಇಂದು ಸಾವಿರಾರು ಪಕ್ಷಿಗಳಿಗೆ ಆಸರೆಯಾಗಿದೆ. ಪರಿಸರಕ್ಕೆ ಅವರು ಕೊಟ್ಟ ಕೊಡುಗೆಯನ್ನು ಗುರುತಿಸಿ ಕೇಂದ್ರ ಸರ್ಕಾರ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.












Click it and Unblock the Notifications