Viral Video: ರಷ್ಯಾದ ಬಾಲಕಿ ಬಾಯಲ್ಲಿ ಕನ್ನಡ ಕವಿತೆ! ಕೇಳೋಕೆ ಎಷ್ಟೊಂದು ಸೊಗಸು: ನೆಟ್ಟಿಗರು ಹೇಳಿದ್ದೇನು?
Video Viral News: ಇತ್ತೀಚೆಗೆ ವಿದೇಶಿ ಮಹಿಳೆಯೊಬ್ಬರು ಬೆಂಗಳೂರು ತೊರೆಯುವಾಗ ಕಣ್ಣೀರ ವಿದಾಯ ಹೇಳಿದ್ದರು. ಕನ್ನಡಿಗರು, ಬೆಂಗಳೂರು ಹಾಗೂ ಭಾರತದ ಕುರಿತು ಹೆಮ್ಮೆಯ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಇದೀಗ ರಷ್ಯಾದ ಬಾಲಕಿಯೊಬ್ಬಳು ಬೆಂಗಳೂರಿನಲ್ಲಿ ಕನ್ನಡ ಕವಿತೆ ಹಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಕೆಗೆ ಇಲ್ಲಿನ ಭಾರತೀಯ ಸಹಪಾಠಿಗಳು ಇದ್ದಾರೆ. ಕೆಲವೇ ವರ್ಷಗಳಿಂದ ಇಲ್ಲಿದ್ದು, ಕನ್ನಡ ಕಲಿತು ಕನ್ನಡೇತರರಿಗೆ ಬಾಲಕಿ ಮಾದಿಯಾಗಿದ್ದಾಳೆ.
ಬೆಂಗಳೂರಿನಲ್ಲಿರುವ ಅಕ್ಕಪಕ್ಕದ ರಾಜ್ಯಗಳ ಜನರು ಇಲ್ಲಿಯೇ ವಾಸಿಸಿ, ನೆಲೆ ಕಂಡುಕೊಂಡರು ಸಹಿತ ಒಂದಕ್ಷರ ಕನ್ನಡ ಮಾತನಾಡಲು ಖ್ಯಾತೆ ತೆಗೆಯುತ್ತಾರೆ. ಕೆಲವರು ಜಾಗ ಕೊಟ್ಟ ಕನ್ನಡಿಗರನ್ನೆ ಕೆಣಕಿ ತೆಗಳುತ್ತಾರೆ. ಹೀಗಿದ್ದಾಗ ರಷ್ಯಾದ ಬಾಲಕಿ ಇಲ್ಲಿನ ಕನ್ನಡ ಸಹಪಾಠಿಗಳ ಜೊತೆಗೆ ಸೈಕಲ್‌ನಲ್ಲಿ ತುಳಿಯುತ್ತಲೇ ಕನ್ನಡ ಕವಿತೆ ಹಾಡಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡಿಗರಿಂದ ಬಾಲಕಿ ಹಾಡಿಗೆ ಶ್ಲಾಘನೆ
ನೆರೆಹೊರೆಯ ಸ್ನೇಹಿತೆಯರ ಜೊತೆಗೆ ಸೈಕಲ್ ತುಳಿಯುತ್ತಾ ರಷ್ಯಾದ ಹುಡುಗಿ 'ಬಣ್ಣದ ಹಕ್ಕಿ...ಹಾರಲು ಹಕ್ಕಿ' ಎಂದು ಕನ್ನಡ ಕವಿತೆಯನ್ನು ಹಾಡುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಕನ್ನಡಿಗರ ಮನಸ್ಸನ್ನು ಗೆದ್ದ ಈ ವಿಡಿಯೋ ಅನ್ನು ಆ ಬಾಲಕಿ ತಾಯಿ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಭಾರತಕ್ಕೆ ಬಂದು ಮೂರು ವರ್ಷಗಳಾಗಿರುವುದು ಗೊತ್ತಾಗುತ್ತದೆ. ವಿಡಿಯೋ ಆರಂಭಕ್ಕೂ ಮುನ್ನ 2022 ರ ಹಳೆಯ ಫೋಟೋ ಸಹ ಅವರು ಹಂಚಿಕೊಂಡಿದ್ದು, ರಷ್ಯಾದಿಂದ ಭಾರತಕ್ಕೆ ಸ್ಥಳಾಂತರಗೊಂಡಿದ್ದಾಗಿ ತಿಳಿಸಿದ್ದಾರೆ. ಜೊತೆಗೆ ಮುಗ್ಧ ಈ ಬಾಲಕಿಯರ ಸ್ನೇಹವನ್ನು ಸಹ ಬಹಿರಂಗಗೊಳಿಸಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಬಾಲಕಿ ತಾಯಿ ವಿಡಿಯೋ ಮೇಲೆ 'ಭಾರತದಲ್ಲಿ 3 ವರ್ಷಗಳು. ಗೆಳತಿಯರು, ಸಹಪಾಠಿಗಳು & 3 ವರ್ಷಗಳ ಸ್ನೇಹ' ವೆಂದು ಹೇಳಿಕೊಂಡಿದ್ದಾರೆ. ಮೂರು ವರ್ಷಗಳಿಗೂ ಹೆಚ್ಚು ಕಾಲ ಸಹಪಾಠಿಗಳು ಮತ್ತು ಆಪ್ತ ಸ್ನೇಹಿತರಾದ ಇಬ್ಬರು ಬಾಲಕಿಯರು ಹಾಡಿದ ಹಾಡು ಹರಿದಾಡುತ್ತಿದೆ. ವೀಡಿಯೊ ಪ್ರಾರಂಭವಾಗುವ ಮೊದಲು 2022, 2023 ಹಾಗೂ 2025ರ ಫೋಟೋಗಳು ಕಾಣಿಸುತ್ತವೆ. ನಂತರ ಬಣ್ಣದ ಹಕ್ಕಿ ಹಾಡು ಹಾಡುವ ವಿಡಿಯೋ ಪ್ರಸಾರವಾಗುತ್ತದೆ.
ಬೆಂಗಳೂರಿನಲ್ಲಿ ಕೇವಲ ಮೂರು ವರ್ಷಗಳಿಂದ ಇರುವ ಒಬ್ಬ ರಷ್ಯನ್ ಹುಡುಗಿ ತನ್ನ ಸ್ಥಳೀಯ ಸ್ನೇಹಿತೆ ಜೊತೆಗೆ ಕನ್ನಡ ಕವಿತೆ ಸೊಗಸಾಗಿ ಹಾಡಿದ್ದಾರೆ. ಕೇಳಲು ಎಷ್ಟು ಸುಂದವೆನಿಸುತ್ತದೆ. ಇಲ್ಲಿ ವಿದೇಶಿಯರು ಸಹ ಕನ್ನಡ ಕಲಿತಿದ್ದಾರೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಭಾಷೆಯ ಬಗ್ಗೆ ಹೆಚ್ಚಿನ ಪ್ರೀತಿ ಮತ್ತು ಸಹಾನುಭೂತಿ ಹರಡಲು ಕೆಲವು ನೆಪ ಹುಡುಕುತ್ತಾರೆ. ಇಲ್ಲಿಯೇ ವರ್ಷಗಳಿಂದ ಕನ್ನಡ ತಾತ್ಸಾರ ಮಾಡಿದವರನ್ನು ನೆಟ್ಟಿಗರು ದೂರಿದ್ದಾರೆ.
ವಿಡಿಯೋ ನೀಡಿದ ನೆಟ್ಟಿಗರು ಹೇಳಿದ್ದೇನು?
ಮಕ್ಕಳಿಗೆ, ಹೊಸಬರಿಗೆ ಕನ್ನಡ ಭಾಷಾ ಕಲಿಕೆಗೆ, ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಹಾಗೂ ಅದಕ್ಕೆ ಸಹಾಯ ಮಾಡಲು ಶಾಲೆಗಳು ಮತ್ತು ಪರಿಸರದ ಪಾತ್ರದ ಬಗ್ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಮಕ್ಕಳು ಉಚ್ಚಾರಣೆಯ ಬಗ್ಗೆ ಚಿಂತಿಸದೇ ಸರಾಗವಾಗಿ ಹಾಡುವುದು ನೋಡಿದರೆ ಸರಳ ಕನ್ನಡ ಭಾಷೆ ಕಲಿಯುವುದು ಸುಲಭ ಎಂದು ಕನ್ನಡೇತರರು ಕುರಿತು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಹೊಸ ತಲೆಮಾರಿನ ವಲಸಿಗರು ಅದನ್ನು ಕಲಿಯುವಂತೆ ಇಲ್ಲಿನ ಶಾಲೆಗಳಲ್ಲಿ ರಾಜ್ಯ ಸರ್ಕಾರ ಕನ್ನಡ ಭಾಷೆಯ ಕಲಿಕೆ ಕಡ್ಡಾಯಗೊಳಿಸಬೇಕು ಎಂದು ಮತ್ತೊಬ್ಬರು ಆಗ್ರಹಿಸಿದ್ದಾರೆ. 'ನಾನು 2 ವರ್ಷದವನಿದ್ದಾಗ ಮಾತೃಭಾಷೆಯ ಜೊತೆಗೆ ಕನ್ನಡ ಭಾಷೆ ಸಹ ಕಲಿತಿದ್ದೇನೆ. ಬೆಂಗಳೂರಲ್ಲಿ ಹೆಚ್ಚಿನ ವಲಸಿಗರಿದ್ದಾರೆ. ಐಟಿ ಕೇಂದ್ರಗಳಲ್ಲಿ, ಕನ್ನಡ ಮಾತನಾಡುವವರ ಜೊತೆಗೆ ಕೆಲಸ ಮಾಡುತ್ತಾರೆ. ಅವರಿಗೆ ಕನ್ನಡ ಕಲಿಸುವುದು ಕಷ್ಟವೇನಲ್ಲ. ನೆಪ ಹೇಳದೇ ಕನ್ನಡ ಕಲಿಯಲು ಮನಸ್ಸು ಮಾಡಬೇಕಷ್ಟೆ ಎಂದು ನೆಟ್ಟಿಗರು ತಿಳಿಸಿದ್ದಾರೆ.












Click it and Unblock the Notifications