ಬೆಂಗಳೂರು; 300 ಬೈಕ್ ಟ್ಯಾಕ್ಸಿ ವಶಕ್ಕೆ ಪಡೆದ ಆರ್‌ಟಿಓ ಅಧಿಕಾರಿಗಳು
ಬೆಂಗಳೂರು, ಫೆಬ್ರವರಿ 06; ಬೆಂಗಳೂರು ನಗರದಲ್ಲಿ ಆರ್‌ಟಿಓ ಅಧಿಕಾರಿಗಳು ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದ 300 ಬೈಕ್ ವಶಕ್ಕೆ ಪಡೆದಿದ್ದಾರೆ. ಅಧಿಕಾರಿಗಳ ದೌರ್ಜನ್ಯ ನಿಲ್ಲಿಸುವಂತೆ ಬೈಕ್ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದರು.
ಆರ್‌ಟಿಓ ಅಧಿಕಾರಿಗಳು ಶುಕ್ರವಾರದಿಂದ ಬೆಂಗಳೂರು ನಗರದಲ್ಲಿ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಕೋರಮಂಗಲ ಆರ್‌ಟಿಓ ಕಚೇರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 130 ಬೈಕ್ ವಶಕ್ಕೆ ಪಡೆದರು.
ನಗರದಲ್ಲಿ ಹಲವಾರು ವರ್ಷಗಳಿಂದ ಮೊಬೈಲ್ ಅಪ್ಲಿಕೇಶನ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆಯನ್ನು ರ‍್ಯಾಪಿಡೋ ನೀಡುತ್ತಿದೆ. ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

"ಮೋಟರ್ ವೆಹಿಕಲ್ ಕಾಯ್ದೆ ಉಲ್ಲಂಘನೆ ಮಾಡಿ ಬಿಳಿ ಬಣ್ಣದ ನಂಬರ್ ಪ್ಲೇಟ್ ಹಾಕಿಕೊಂಡು ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದ 130 ಬೈಕ್ ವಶಕ್ಕೆ ಪಡೆದು ಕೇಸು ದಾಖಲು ಮಾಡಿದ್ದೇವೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಬೈಕ್ ಟ್ಯಾಕ್ಸಿ ಸೇವೆ ಬಳಸಬಾರದು ಎಂದು ಜನರಿಗೆ ಸಹ ಅರಿವು ಮೂಡಬೇಕು. ಇದು ಸುರಕ್ಷಿತವಲ್ಲ. ಒಂದು ವೇಳೆ ಸಂಚಾರದ ವೇಳೆ ಅಪಘಾತವಾದರೆ ವಿಮೆ ಸೌಲಭ್ಯವೂ ಸಿಗುವುದಿಲ್ಲ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೈಕ್ ಟ್ಯಾಕ್ಸಿ ಸೇವೆಯನ್ನು ವಿರೋಧಿಸುತ್ತಿರುವ ಟ್ಯಾಕ್ಸಿ, ಆಟೋ ಡ್ರೈವರ್‌ಗಳು ಈ ಸೇವೆಯನ್ನು ರುದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಸಹ ತೀರ್ಮಾನಿಸಿದ್ದಾರೆ. ಎರಡು ದಿನದಲ್ಲಿ ನಗರದಲ್ಲಿ 300 ಬೈಕ್ ಟ್ಯಾಕ್ಸಿಗಳನ್ನು ವಶಕ್ಕೆ ಪಡೆಯಲಾಗಿದೆ
ಪೀಸ್ ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ರಘು ನಾರಾಯಣ ಗೌಡ ಮಾತನಾಡಿ, "ನಗರದಲ್ಲಿ ಅಕ್ರಮವಾಗಿ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದ 300 ಬೈಕ್ ವಶಕ್ಕೆ ಪಡೆಯಲಾಗಿದೆ. ಈ ಸೇವೆ ನಿಲ್ಲಿಸುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅಕ್ರಮ ಟ್ಯಾಕ್ಸಿ ಸೇವೆ ನಿಲ್ಲಿಸುವಂತೆ ಸಹ ಒತ್ತಾಯಿಸಲಾಗಿದೆ" ಎಂದರು.
ಬೈಕ್ ಟ್ಯಾಕ್ಸಿಗಳಿಂದ ನಮ್ಮ ಆದಾಯಕ್ಕೆ ಕುತ್ತು ಬರುತ್ತಿದೆ. ಅಕ್ರಮವಾಗಿ ಟ್ಯಾಕ್ಸಿ ಸೇವೆ ಒದಗಿಸಲು ಅಧಿಕಾರಿಗಳು ಹೇಗೆ ಅವಕಾಶ ನೀಡಿದ್ದಾರೆ?. ತಕ್ಷಣ ಈ ಸೇವೆಗಳನ್ನು ನಿಲ್ಲಿಸಬೇಕು ಎಂದು ಆಟೋ ಚಾಲಕರು ಒತ್ತಾಯಿಸಿದ್ದಾರೆ.
ಚಾಲಕರ ಪ್ರತಿಭಟನೆ; ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿರುವ ಚಾಲಕರು ಕೋರಮಂಗಲ ಆರ್‌ಟಿಓ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು 10,500 ರೂ. ತನಕ ದಂಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದರೂ ಕಂಪನಿ ಬೈಕ್‌ಗಳನ್ನು ನೀಡುತ್ತಿಲ್ಲ. ಚಾಲಕರೇ ಬೈಕ್ ಇಟ್ಟುಕೊಂಟು ಟ್ಯಾಕ್ಸಿ ಸೇವೆ ನೀಡಬೇಕು. ಕೆಲವರು ಬಿಳಿ ಬಣ್ಣದ ನಂಬರ್ ಪ್ಲೇಟ್ ಹಾಕಿಕೊಂಡು ಟ್ಯಾಕ್ಸಿ ಸಂಚಾರ ನಡೆಸುತ್ತಿದ್ದಾರೆ. ಇದರ ವಿರುದ್ಧ ಆರ್‌ಟಿಓ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಆಟೋ ಮತ್ತು ಟ್ಯಾಕ್ಸಿ ಚಾಲಕರು ಆರ್‌ಟಿಓ ಅಧಿಕಾರಿಗಳಿಗೆ ಸಹಾಯ ಮಾಡಲು ನಕಲಿ ಬುಕ್ಕಿಂಗ್ ಮಾಡುತ್ತಿದ್ದಾರೆ. ನಾವು ಯಾವುದೇ ಅಕ್ರಮ ನಡೆಸುತ್ತಿಲ್ಲ. ಕಡಿಮೆ ಬೆಲೆಯಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನರು ಸಂಚಾರ ನಡೆಸಲು ಸಹಕಾರ ನೀಡುತ್ತಿದ್ದೇವೆ ಎಂದು ಬೈಕ್ ಟ್ಯಾಕ್ಸಿ ಚಾಲಕರು ಹೇಳಿದ್ದಾರೆ.
ಆರ್‌ಟಿಓ ಅಧಿಕಾರಿಗಳು 10,500 ರೂ. ದಂಡ ಹಾಕಿದರೂ ಯಾವುದೇ ಸರಿಯಾದ ರಶೀದಿ ನೀಡುತ್ತಿಲ್ಲ. ಒಂದು ಚಿಕ್ಕ ಪೇಪರ್ ಪೀಸ್‌ನಲ್ಲಿ ಬರೆದು ಸಹಿ ಹಾಕಿ ಕೊಡುತ್ತಿದ್ದಾರೆ. ಇದನ್ನು ಯಾವ ಮಾನ್ಯತೆ ಹೊಂದಿರುವ ರಶೀದಿ ಎಂದು ಪರಿಗಣಿಸಬೇಕು? ಎಂದು ಬೈಕ್ ಚಾಲಕರು ಪ್ರಶ್ನಿಸಿದ್ದಾರೆ.
ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಬೇಕು ಎಂದು ಆಟೋ ಚಾಲಕರು ಹೈಕೋರ್ಟ್‌ಗೆ ಸಹ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದು ಕಡೆ ಬೈಕ್ ಟ್ಯಾಕ್ಸಿ ಸೇವೆಗೆ ಕಾನೂನು ಬದ್ಧ ಅನುಮತಿ ನೀಡಬೇಕು ಎಂದು ಸಹ ಅರ್ಜಿ ಸಲ್ಲಿಕೆಯಾಗಿದೆ.












Click it and Unblock the Notifications