ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆ ಸಂಜೆ ನಡೆದ ಘಟನೆ ಎಂದೂ ಮರೆಯಲಾರೆ!

By ಇಕ್ರಂ ಅಹ್ಮದ್ ಖಾನ್, ಬೆಂಗಳೂರು
|
Google Oneindia Kannada News

ಸೂರ್ಯ ಅಸ್ತಂಗತನಾದ ಮೇಲೆ ಬೆಂಗಳೂರು ಮಹಿಳೆಯರ ಪಾಲಿಗೆ ಮಾತ್ರವಲ್ಲ ಪುರುಷರ ಪಾಲಿಗೂ ಸುರಕ್ಷಿತವಲ್ಲ. ಯಾವ ಹೊತ್ತಿನಲ್ಲಿ, ಯಾರ ರೂಪದಲ್ಲಿ ಅಪಾಯ ಬಂದೊದಗುತ್ತದೋ ಬ್ರಹ್ಮ ಕೂಡ ನಿಖರವಾಗಿ ಹೇಳಲಾರ. ಯಾವುದೋ ನೆವ ಹೇಳಿಕೊಂಡು ನಾಗರಿಕರನ್ನು ಸುಲಿಯುವ ಅಪಾಯಕಾರಿ ಟ್ರೆಂಡ್ ಬೆಂಗಳೂರಿನಲ್ಲಿ ಆರಂಭವಾಗಿದೆ. ಇಂಥದೊಂದು ಅಪಾಯಕ್ಕೆ ಸಿಲುಕಿ, ಪೊಲೀಸರ ಸಕಾಲದ ಸಹಾಯದಿಂದಾಗಿ ಪಾರಾಗಿಬಂದ ವ್ಯಕ್ತಿಯೊಬ್ಬರ ನೈಜ ಘಟನೆಯ ವಿವರ ಮುಂದಿದೆ.

"ಬೆಂಗಳೂರಿನ ಬೇಗೂರು ರಸ್ತೆಯಲ್ಲಿ ವಾಸಿಸುತ್ತಿರುವ ನನ್ನ ಹೆಸರು ಇಕ್ರಂ ಅಹ್ಮದ್ ಖಾನ್. ನನ್ನ ಕಚೇರಿ ಕೋರಮಂಗಲದಲ್ಲಿದ್ದು, ಪ್ರತಿದಿನ ಸಂಜೆ 8 ಗಂಟೆಯ ಸುಮಾರಿಗೆ ಮನೆಗೆ ಕಾರಿನಲ್ಲಿ ಮರಳುತ್ತೇನೆ. ಸೆಪ್ಟೆಂಬರ್ 13, ಶನಿವಾರ ಸಂಜೆ 8 ಗಂಟೆ ಸುಮಾರಿಗೆ ನಡೆದ ಆ ಘಟನೆ ನನ್ನನ್ನು ಜರ್ಜರಿತನನ್ನಾಗಿ ಮಾಡಿದೆ. ಇಂದು ಕೂಡ ಕಣ್ಣು ಮುಚ್ಚಿದರೆ ಆ ಘಟನೆಯೇ ಕಣ್ಣಮುಂದೆ ಬಂದು ಕಾಡುತ್ತದೆ. ಮರೆಯಲು ಯತ್ನಿಸಿದರೂ ಭೂತದಂತೆ ಕಾಡುತ್ತಿರುವ ಆ ಘಟನೆಯ ವಿವರ ಮುಂದಿದೆ.

Rowdies thrash Bangalorean for no reason

ಅಂದು ಸಂಜೆ ಕಾರಿನಲ್ಲಿ ಮರಳುತ್ತಿದ್ದಾಗ ಬೊಮ್ಮನಹಳ್ಳಿ ಜಂಕ್ಷನ್ ನಲ್ಲಿ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ನನ್ನ ಕಾರಿನ ಮುಂದೆ ಬಂದು ಒಂದೇಸವನೆ ಕಿರುಚಲು ಪ್ರಾರಂಭಿಸಿದ. ನನ್ನ ಕಾರಿನ ಹಿಂದಿನ ಗಾಲಿ ಆತನ ಕಾಲಿನ ಮೇಲೆ ಹರಿಯಿತೆಂದು ಬೊಬ್ಬೆಹೊಡೆಯಲು ಪ್ರಾರಂಭಿಸಿದ. ಆ ತರಹ ಆಗಿರುವುದು ನನಗೆ ತಿಳಿದಂತೆ ಘಟಿಸಿರಲಿಲ್ಲ. ಆದರೆ, ಆತನ ಬೈಗುಳಗಳಿಂದ ಅವಾಕ್ಕಾದೆ. ಅಷ್ಟರಲ್ಲಿ ಎರಡು ಬೈಕುಗಳ ಮೇಲಿದ್ದ ಇನ್ನೂ ಐದು ಜನ ಆತನನ್ನು ಸೇರಿಕೊಂಡರು.

ಕಾರಿನಿಂದ ಇಳಿದು ಹೊರಬರದಿದ್ದರೆ ಪೊಲೀಸರನ್ನು ಕರೆಯುವುದಾಗಿ ಬೆದರಿಸಹತ್ತಿದರು. ಇದಕ್ಕೆ ಜಗ್ಗದ ನಾನು ಬೇಕಿದ್ದರೆ ಪೊಲೀಸರನ್ನು ಕರೆಯಿರಿ ಎಂದು ಆಗ್ರಹಿಸಿದೆ. ಸಿಗ್ನಲ್ ದಾಟಿಸಿ ಕಾರನ್ನು ನಿಲ್ಲಿಸಿ ಆತನ ಕಾಲನ್ನು ನೋಡಿದಾಗ ಆತನಿಗೇನೂ ಆಗಿರಲಿಲ್ಲ. 'ಸುಮ್ನೆ ಯಾಕೆ ತೊಂದರೆ ಕೊಡ್ತೀರಿ' ಎಂದು ಪ್ರಶ್ನಿಸಿದಾಗ ಎಲ್ಲ ಕಡೆಯಿಂದ ನನಗೆ ಹೊಡೆಯಲು ಆರಂಭಿಸಿದರು. ನನ್ನಿಂದ ಹಣ ಸುಲಿಯಲು ಈ ಗ್ಯಾಂಗ್ ಮಾಡಿದ ಪ್ಲಾನ್ ಎಂದು ತಿಳಿಯಲು ನನಗೆ ಹೆಚ್ಚು ಸಮಯ ಹಿಡಿಯಲಿಲ್ಲ. [ಅಡ್ಡಾಡುವ ಒಂಟಿ ಮಹಿಳೆಯರಿಗೆ ಬೆಂಗಳೂರು ಸೇಫ್]

ನನಗೆ ಕಪಾಳಕ್ಕೆ ಹೊಡೆದಿದ್ದಕ್ಕೆ ನನ್ನ ಕನ್ನಡಕ ಕೆಳಗೆ ಬಿದ್ದು ಪುಡಿಪುಡಿಯಾಯಿತು. ನನಗೆ ದೃಷ್ಟಿದೋಷವಿದ್ದಿದ್ದರಿಂದ ತುಂಬಾ ತೊಂದರೆಯಾಯಿತು. ಒಬ್ಬ ಪಾದಚಾರಿ ಅವರನ್ನು ತಡೆಯಲು ಯತ್ನಿಸಿದರೂ, ಅವರು ಆತನಿಗೂ ಒದೆ ನೀಡಿದರು. ನಂತರ, ಇದ್ದಕ್ಕಿದ್ದಂತೆ ಅವರ ವರಸೆ ಬದಲಾಗಲು ಪ್ರಾರಂಭಿಸಿತು. 'ನಾವು ರೌಡಿಗಳು. ನಾವು ಹೇಳಿದ ಹಾಗೆ ಕೇಳದಿದ್ದರೆ ಇನ್ನಷ್ಟು ಒದೆ ಬೀಳುತ್ತವೆ. ಬೇರೆ ಕಡೆ ಹೋಗಿ ಸೈಲೆಂಟಾಗಿ ನಾವುನಾವು ಮಾತಾಡಿಕೊಂಡು ಸೆಟ್ಲ್ ಮಾಡಿಕೊಳ್ಳೋಣ' ಎಂದು ನನ್ನನ್ನು ನನ್ನ ಕಾರಿನಲ್ಲಿ ತಳ್ಳಲು ಪ್ರಾರಂಭಿಸಿದರು.

ಇದನ್ನೆಲ್ಲ ಗಮನಿಸುತ್ತ ಒಬ್ಬನಿಗೆ ಅವರ ಹುನ್ನಾರದ ವಾಸನೆ ಬಡಿದಿತ್ತು. ಕಾರಿನಲ್ಲಿ ಅವರೊಂದಿಗೆ ಹೋಗದಂತೆ ನನ್ನನ್ನು ಎಚ್ಚರಿಸಿದ. ತಲೆಯೋಡಿಸಿ ಪೊಲೀಸರಿಗೆ ಫೋನ್ ಮಾಡಿದ. ನನ್ನ ಅದೃಷ್ಟವೋ ಏನೋ, ಬೊಮ್ಮನಹಳ್ಳಿಯಲ್ಲಿಯೇ ಡ್ಯೂಟಿ ಮಾಡುತ್ತಿದ್ದ ಎರಡು ಸ್ಟಾರ್ ಇದ್ದ ಪೊಲೀಸನೊಬ್ಬ ಆಗಮಿಸಿದ. ಇಂಥ ಅದೆಷ್ಟು ಘಟನೆಗಳನ್ನು ಅವರು ನೋಡಿದ್ದರೋ, ನನ್ನ ಮೇಲೆ ಹಲ್ಲೆ ಮಾಡಿದವರನ್ನು ತರಾಟೆಗೆ ತೆಗೆದುಕೊಳ್ಳಲು ಪೊಲೀಸ್ ಆರಂಭಿಸಿದರು. ಅಪಾಯದ ಅರಿವಾಗುತ್ತಿದ್ದಂತೆ ಒಬ್ಬಬ್ಬರೇ ಕಾಲುಕಿತ್ತರು. [ಬದುಕಿ ಬರಲಿಲ್ಲ ಬೆಂಗಳೂರಿನ ಸಾಹಸಿ ಪೇದೆ]

ಪುಣ್ಯವಶಾತ್ ನನ್ನ ಲ್ಯಾಪ್ ಟಾಪ್ ಮತ್ತು ಮೊಬೈಲ್ ಕಾರಲ್ಲೇ ಬಿಟ್ಟು ಲಾಕ್ ಮಾಡಿದ್ದರಿಂದ ಅವು ಕಳೆದುಹೋಗಲಿಲ್ಲ. ಆದರೆ, ಕನ್ನಡಕ ಪುಡಿಪುಡಿಯಾಗಿದ್ದರಿಂದ ಕಾರಿನಲ್ಲಿ ಮನೆ ಹೇಗೆ ತಲುಪುವುದೋ ಎಂದು ದಿಗಿಲಾಗಿತ್ತು. ಅಲ್ಲಿ ನೆರೆದವರು, ಇವರೆಲ್ಲ ಒಂದೇ ಗ್ಯಾಂಗಿನ ರೌಡಿಗಳು. ಅಮಾಯಕರನ್ನು ಅಪಾಯಕ್ಕೆ ಸಿಲುಕಿಸಿ ಹಣ ಕೀಳುವುದೇ ಇವರ ದಂಧೆಯಾಗಿದೆ ಎಂದು ಮಾತಾಡಲು ಆರಂಭಿಸಿದರು. ಅವರು ನನ್ನಿಂದ ಏನೂ ಕೀಳದಿದ್ದರೂ ಈ ಘಟನೆಯಿಂದ ನಾನು ತೀರ ಜರ್ಜರಿತನಾಗಿದ್ದೇನೆ.

ಈ ಘಟನೆಯನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕೆಂದೇ ನಾನು ಫೇಸ್ ಬುಕ್ಕಿನಲ್ಲಿ ಈ ಘಟನೆಯ ವಿವರ ಬರೆದಿದ್ದೇನೆ. ದುರಾದೃಷ್ಟವಶಾತ್ ನನ್ನ ಕನ್ನಡಕ ಒಡೆದಿದ್ದರಿಂದ ಯಾರನ್ನೂ ಗುರುತಿಸುವ ಪರಿಸ್ಥಿತಿಯಲ್ಲಿ ನಾನಿಲ್ಲ. ಯಾವುದೇ ಕಾರಣವಿಲ್ಲದೆ ಅಮಾಯಕರನ್ನು ಬಡಿದು ಹಣ ಕೀಳುವ ಇಂಥವರಿಂದ ಇನ್ನೆಷ್ಟು ಜನ ಸಂಕಷ್ಟ ಎದುರಿಸಬಹುದು ಪೊಲೀಸ್ ಇಲಾಖೆ ಚಿಂತಿಸಲಿ. ಮನೆಯನ್ನು ಬೇಗನೆ ತಲುಪಿದರೆ ಸಾಕು ಎಂದುಕೊಂಡಿದ್ದರಿಂದ ದೂರನ್ನು ಕೂಡ ದಾಖಲಿಸಲಿಲ್ಲ. ಆದರೆ, ಇಂಥ ಘಟನೆ ಮತ್ತೆ ಮರುಕಳಿಸದಂತೆ ಪೊಲೀಸರು ದುಷ್ಟರನ್ನು ಮಟ್ಟಹಾಕಲಿ."

English summary
Bangalore residents beware! Ikram Amhed Khan, a Bangalore resident, has shared horrible experience he experienced near Bommanahalli. Few rowdy elements thrashed him for no reason and had plan to extort money from him. Bangalore city police should notice such incidents and book the miscreants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X