ತಮಿಳುನಾಡಿನತ್ತ ಮುಖ ಮಾಡಿವೆಯೇ ರಾಜ್ಯದ ಐಟಿ ಕಂಪನಿಗಳು? ಏನು ಕಾರಣ?
ಬೆಂಗಳೂರು, ಏ. 9: ರಾಜ್ಯದಲ್ಲಿ ಇತ್ತೀಚೆಗೆ ಉದ್ಭವಿಸಿರುವ ಕೋಮು ಸೂಕ್ಷ್ಮ ವಾತಾವರಣದಿಂದಾಗಿ ಹಲವು ಐಟಿ ಕಂಪನಿಗಳು ಬೇರೆ ರಾಜ್ಯಗಳತ್ತ ಮುಖ ಮಾಡಿವೆ ಎಂಬ ವದಂತಿಗಳು ಹರಿದಾಡುತ್ತಿವೆ. ಕರ್ನಾಟಕದಿಂದ ತಮಿಳುನಾಡಿಗೆ ಐಟಿ ಕಂಪನಿಗಳು ವಲಸೆ ಬರುವ ಆಸಕ್ತಿ ತೋರಿವೆ ಎಂದು ತಮಿಳುನಾಡಿನ ಸಚಿವರೊಬ್ಬರು ಹೇಳಿಕೆಯನ್ನೂ ನೀಡಿದ್ದರು. ಅದಕ್ಕೆ ಇಂಬುಕೊಡುವಂತೆ ಮಾಧ್ಯಮವೊಂದರ ವರದಿ ಪ್ರಕಟವಾಗಿದೆ. ದಿ ಪ್ರಿಂಟ್ ಜಾಲತಾಣದ ವರದಿಯನ್ನು ನಂಬುವುದಾದರೆ ಕರ್ನಾಟಕದ ಹಲವು ಐಟಿ ಕಂಪನಿಗಳು ತಮಿಳುನಾಡಿನತ್ತ ಮುಖ ಮಾಡಲು ನಿರ್ಧರಿಸಿವೆ ಎನ್ನಲಾಗಿದೆ.
ತಮಿಳುನಾಡು ಸರಕಾರದ ಮೂಲಗಳು ಹಾಗೂ ಸಚಿವ ಹೇಳಿಕೆಗಳನ್ನ ಆಧರಿಸಿ ದಿ ಪ್ರಿಂಟ್ ನಲ್ಲಿ ಪ್ರಕಟವಾದ ವರದಿಯಲ್ಲಿ, ಈಗಾಗಲೇ ಹಲವು ಐಟಿ ಕಂಪನಿಗಳು ಕರ್ನಾಟಕವನ್ನು ತೊರೆದು ತಮಿಳುನಾಡಿನತ್ತ ಹೋಗತೊಡಗಿವೆಯಂತೆ. ಆದರೆ, ನಿರ್ದಿಷ್ಟವಾಗಿ ಯಾವ ಕಾರಣಕ್ಕೆ ಕರ್ನಾಟಕದಿಂದ ಹೊರಗೆ ಹೋಗುತ್ತಿರುವುದಾಗಿ ಆ ಕಂಪನಿಗಳು ತಿಳಿಸಿಲ್ಲ ಎಂದೂ ಈ ವರದಿಯಲ್ಲಿ ಬರೆಯಲಾಗಿದೆ.
'ಐಟಿ ಕಂಪನಿಗಳು ತಮಿಳುನಾಡಿಗೆ ಬರಲು ಬಹಳ ಆಸಕ್ತಿ ತೋರಿಸುತ್ತಿವೆ. ನಮ್ಮ ಸರಕಾರವನ್ನ ಸಂಪರ್ಕಿಸುತ್ತಿದ್ದಾರೆ. ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ನಾವು ಸಿದ್ಧರಿದ್ದೇವೆ' ಎಂದು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು ಹೇಳಿದರೆಂದು ದಿ ಪ್ರಿಂಟ್ ವರದಿ ಮಾಡಿದೆ. ಆದರೆ ಕರ್ನಾಟಕದ ಐಟಿ ಕಂಪನಿಗಳು ತಮಿಳುನಾಡಿನತ್ತ ಆಸಕ್ತಿ ತೋರಿವೆಯಾ ಎಂಬುದನ್ನು ಹೇಳಲು ಸಚಿವರು ನಿರಾಕರಿಸಿದ್ದಾರೆ.

ಕರ್ನಾಟಕದಲ್ಲಿ ಇತ್ತೀಚೆಗೆ ಕೋಮುಸೌಹಾರ್ದತೆಗೆ ಧಕ್ಕೆ ತರುವ ಹಲವು ಘಟನೆಗಳು, ಬೆಳವಣಿಗೆಗಳು ನಡೆಯುತ್ತಿವೆ. ಉಡುಪಿ ಕಾಲೇಜೊಂದರಲ್ಲಿ ಶುರುವಾದ ಹಿಜಾಬ್ ವಿವಾದ ಈಗ ಹಿಂದೂ ಮುಸ್ಲಿಮ್ ಸಮುದಾಯಗಳ ನಡುವಿನ ಸೌಹಾರ್ದತೆಯನ್ನ ಕದಡುವಂತೆ ಮಾಡಿದೆ. ಹಿಜಾಬ್ ವಿವಾದದ ಬಳಿಕ ಕೆಲವೆಡೆ ಹಿಂದೂ ದೇವಸ್ಥಾನಗಳ ಬಳಿ ಮುಸ್ಲಿಮರಿಗೆ ವ್ಯಾಪಾರಾವಕಾಶ ನಿರಾಕರಿಸುವ ಪ್ರವೃತ್ತಿ ಬೆಳೆದಿದೆ. ಹಲಾಲ್ ಮಾಂಸದ ವಿರುದ್ಧ ಅಭಿಯಾನ, ಹಿಂದೂ ಹಬ್ಬ ಹರಿದಿನಗಳಂದು ಮಾಂಸ ಮಾರಾಟ ನಿಷೇಧ ಮಾಡುತ್ತಿರುವುದೂ ಹಿಂದೂ ಮುಸ್ಲಿಮ್ ಭೇದದ ಒಂದು ಭಾಗ ಎಂದೇ ಭಾವಿಸಲಾಗಿದೆ. ಆದರೆ, ಐಟಿ ಕಂಪನಿಗಳು ಈ ಕಾರಣಕ್ಕೆ ಕರ್ನಾಟಕವನ್ನು ತೊರೆದು ಹೋಗುತ್ತಿವೆಯಾ ಎಂಬುದು ಗೊತ್ತಿಲ್ಲ. ಆದರೆ, ಸ್ಥಳ ಬದಲಾವಣೆ ಮಾಡಲು ಈ ಕಂಪನಿಗಳು ಚಿಂತಿಸಿವೆ ಎಂಬ ವರದಿಗಳು ನಿಜ ಎನ್ನಲಾಗುತ್ತಿದೆ.
ರಾಜಕೀಯ ಮತ್ತು ಸಾಮಾಜಿಕ ಸೂಕ್ಷ್ಮ ಬೆಳವಣಿಗೆಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಬೇಗ ಸ್ಪಂದಿಸುವ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಶಾ ಅವರು ರಾಜ್ಯದಲ್ಲಿ ನೆಲಸಿರುವ ಕೋಮು ಸೂಕ್ಷ್ಮ ವಾತಾವರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಭೇದ ಹಾಗು ಕೋಮು ಪ್ರತ್ಯೇಕತೆ ಸಮಸ್ಯೆಗಳನ್ನ ಸಿಎಂ ಬಸವರಾಜ ಬೊಮ್ಮಾಯಿ ಅವರು ಪರಿಹರಿಸಬೇಕು ಎಂದು ಕಿರಣ್ ಮಜುಮ್‌ದಾರ್ ಕೋರಿದ್ಧಾರೆ.

ಅಲ್ಲದೇ, ಈ ಪರಿಸ್ಥಿತಿ ಹೀಗೇ ಮುಂದುವರಿದರೆ ಐಟಿಬಿಪಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ತನ್ನ ಸ್ಥಾನವನ್ನು ಕಳೆದುಕೊಳ್ಳಬೇಕಾಗಬಹುದು ಎಂದೂ ಅವರು ಆತಂಕ ತೋಡಿಕೊಂಡಿದ್ದಾರೆ.
ತೊಂಬತ್ತರ ದಶಕದಿಂದಲೂ ಬೆಂಗಳೂರು ಭಾರತದ ಸಿಲಿಕಾನ್ ಸಿಟಿ ಎನಿಸಿದೆ. ಇಲ್ಲಿರುವ ತಂತ್ರಜ್ಙಾನ ಕಂಪನಿಗಳ ಸಮೂಹವು ವಿಶ್ವದಲ್ಲೇ ನಾಲ್ಕನೇ ಅತಿ ಬೃಹತ್ ಎನ್ನಲಾಗಿದೆ. ಆಟೊಮೊಬೈಲ್, ಬಯೋಟೆಕ್ನಾಲಜಿ ಇತ್ಯಾದಿ ವಿವಿಧ ಉದ್ದಿಮೆಗಳು ಕರ್ನಾಟಕದಲ್ಲಿವೆ. ಐಟಿ ವಲಯ ಶುರುವಾಗುವುದಕ್ಕೆ ಮುಂಚೆಯೇ ಅಗ್ರಗಣ್ಯ ಸಂಸ್ಥೆಗಳಿಗೆ ಕರ್ನಾಟಕವೇ ಮನೆಯಾಗಿದೆ. ಬಿಇಎಂಎಲ್, ಹೆಚ್‌ಎಎಲ್, ಎಚ್ಎಂಟಿ, ಬಿಎಚ್ಇಎಲ್, ಎನ್‌ಜಿಇಎಫ್, ಮೈಕೋ ಇತ್ಯಾದಿ ಬೃಹತ್ ಹಾಗು ಪ್ರಮುಖ ಎಂಜಿನಿಯರಿಂಗ್ ಕಂಪನಿಗಳಿಗೆ ಕರ್ನಾಟಕವೇ ನೆಲಬೀಡಾಗಿತ್ತು.

ಐಟಿ, ಬಯೋಟೆಕ್ನಾಲಜಿ, ಆಹಾರ ಸಂಸ್ಕರಣೆ, ಏರೋಸ್ಪೇಸ್ ಇತ್ಯಾದಿ ಕ್ಷೇತ್ರಗಳಿಗೆ ರಾಜ್ಯದಲ್ಲಿ ಪ್ರತ್ಯೇಕವಾದ ವಿಶೇಷ ಆರ್ಥಿಕ ವಲಯ ಸ್ಥಾಪಿಸಲಾಗಿದೆ. ಹಲವು ವರ್ಷಗಳ ನಿರಂತರವಾಗಿ ಕಲ್ಪಿಸಲಾದ ಸೌಕರ್ಯಗಳಿಂದಾಗಿ ಇಂದು ಕರ್ನಾಟಕದಲ್ಲಿ ಒಳ್ಳೆಯ ಉದ್ದಿಮೆಯ ವಾತಾವರಣ ನಿರ್ಮಾಣವಾಗಿದೆ. ಈ ಹಂತದಲ್ಲಿ ಕೆಲವೊಂದು ಕೋಮು ಸಾಮರಸ್ಯ ಕೆದಕುವ ಘಟನೆಗಳಿಂದಾಗಿ ಐಟಿ ಕಂಪನಿಗಳು ಭಯಪಟ್ಟು ರಾಜ್ಯವನ್ನು ತೊರೆಯುವಂತಾದರೆ ಅದಕ್ಕಿಂತ ದುರವಸ್ತೆ ಮತ್ತೊಂದಿಲ್ಲ.
(ಒನ್ಇಂಡಿಯಾ ಸುದ್ದಿ)












Click it and Unblock the Notifications