ಗೋಲ್ಡನ್ ಅವರ್ ನೆರವಿನಿಂದ 45 ಲಕ್ಷ ರೂ. ಉಳಿಸಿಕೊಂಡ ನಿವೃತ್ತ ಆರ್ಮಿ ಅಧಿಕಾರಿ
ಬೆಂಗಳೂರು, ಜೂನ್. 30: ಸೈಬರ್ ವಂಚಕರ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡರೆ ತಕ್ಷಣ 'ಗೋಲ್ಡನ್ ಅವರ್' ಐಡಿಯಾ ನೀವು ಬಳಿಸಿ ಕಳೆದುಕೊಂಡ ಹಣವನ್ನು ವಾಪಸು ಪಡೆಯಬಹುದು. ಅಂತದ್ದೊಂದು ಸೌಲಭ್ಯವನ್ನು ಬೆಂಗಳೂರು ಪೊಲೀಸರು ಕಲ್ಪಿಸಿಕೊಟ್ಟಿದ್ದಾರೆ. ನಿವೃತ್ತ ಆರ್ಮಿ ಅಧಿಕಾರಿ ಸೈಬರ್ ವಂಚಕರ ಮೋಸದ ಜಾಲಕ್ಕೆ ಮರುಳಾಗಿ ಕಳೆದಕೊಂಡಿದ್ದ 45 ಲಕ್ಷ ರೂ. ಹಣವನ್ನು ವಾಪಸು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸೈಬರ್ ವಂಚನೆ ಜಾಲಕ್ಕೆ ಬಿದ್ದು ಮೋದ ಹೋಗುವ ಸಾರ್ವಜನಿಕರು'ಗೋಲ್ಡನ್ ಅವರ್' ಬಳಸಿ ಕಳೆದುಕೊಂಡಿದ್ದನ್ನು ಪಡೆಯಬಹುದಾಗಿದೆ. ಈ ಕುರಿತ ವಿವರ ಇಲ್ಲಿದೆ ನೋಡಿ.

ನಿವೃತ್ತ ಅಧಿಕಾರಿ ವಾಪಸು ಪಡೆದ ಕಥೆ
ಆರ್ಮಿಯ ಮೇಜರ್ ಜನರಲ್ ಆಗಿದ್ದ ಎನ್. ಕೆ. ಮಂಚಂದಾ, 2004 ರಲ್ಲಿ ನಿವೃತ್ತಿಯಾಗಿ ಯಲಹಂಕದಲ್ಲಿ ವಾಸವಾಗಿದ್ದರು. ಜೀವನೋಪಾಯಕ್ಕೆ ಎಸ್‌ಬಿಐ ಬ್ಯಾಂಕ್ ನಲ್ಲಿ ಉಳಿತಾಯದ ಹಣ ಇಟ್ಟುಕೊಂಡಿದ್ದರು. ಸೈಬರ್ ವಂಚಕನೊಬ್ಬ ನಿವೃತ್ತ ಮಿಲಿಟರಿ ಅಧಿಕಾರಿಗೆ ಕರೆ ಮಾಡಿ, ನಾವು ಬ್ಯಾಂಕ್ ನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಸಂಪೂರ್ಣ ವಿವರ ದಾಖಲಿಸಬೇಕಿದೆ.
ಮಂಗಳವಾರ ನಿಮ್ಮ ಕೆವೈಸಿ ವಿವರ ಸ್ಥಗಿತಗೊಳ್ಳಲಿದೆ. ನಾವು ನಿಮ್ಮ ವಿವರ ದಾಖಲಿಸಬೇಕಿದೆ ಎಂದು ನಂಬಿಸಿದ್ದಾರೆ. ಇದನ್ನು ನಂಬಿದ್ದ ನಿವೃತ್ತ ಅಧಿಕಾರಿ ಒಟಿಪಿ ಸಮೇತ ವಿವರ ನೀಡಿದ್ದರು. ಒಟಿಪಿ ನೀಡಿದ ಕೂಡಲೇ ಬ್ಯಾಂಕ್ ನಲ್ಲಿದ್ದ 45 ಲಕ್ಷ ರೂ. ಹಣ ಬೇರೆ ಖಾತೆಗೆ ವರ್ಗಾವಣೆಯಾಗಿತ್ತು. ಹೆಣ್ಣೂರು ಸಮೀಪ ಇರುವ ಬ್ಯಾಂಕ್ ಗೆ ತೆರಳಿದ್ದ ನಿವೃತ್ತ ಅಧಿಕಾರಿ ನಡೆದ ಘಟನೆಯನ್ನು ಬ್ಯಾಂಕ್ ಮ್ಯಾನೇಜರ್ ಗೆ ವಿವರಿಸಿದ್ದರು. ಮ್ಯಾನೇಜರ್ ನೀಡಿದ ಸಲಹೆ ಮೇರೆಗೆ ಸೈಬರ್ ಪೊಲೀಸ್ ಠಾಣೆಗೆ ನಿವೃತ್ತ ಮಿಲಟರಿ ಅಧಿಕಾರಿ ದೂರು ನೀಡಿದ್ದರು.

ಎರಡು ತಾಸಿನಲ್ಲಿ 45 ಲಕ್ಷ ವಾಪಸ್
ದೂರು ಸ್ವೀಕರಿಸಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ರಮೇಶ್ ರಾಮ್, ಕೇಸು ದಾಖಲಿಸಿಕೊಂಡು ಇಂದಿರಾನಗರ ಎಸ್ ಬಿಐ ಅಧಿಕಾರಿ ಜತೆ ಮಾತನಾಡಿ ಸೈಬರ್ ವಂಚಕರ ಖಾತೆಗೆ ಜಮೆ ಆಗಿದ್ದ 45 ಲಕ್ಷ ರೂ. ವಾಪಸು ಮರಳಿಸಿದ್ದರು. ಇಷ್ಟು ಪ್ರಕ್ರಿಯೆ ಕೇವಲ ಎರಡು ತಾಸಿನಲ್ಲಿ ಆಗದ್ದರಿಂದ ನಿವೃತ್ತ ಮಿಲಟರಿ ಅಧಿಕಾರಿ ಹಣ ವಾಪಸು ಕೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅದೇ ಎರಡು ತಾಸು ಆದ ಬಳಿಕ ದೂರು ನೀಡಿದ್ದರೂ, ನಿವೃತ್ತ ಅಧಿಕಾರಿ ಬ್ಯಾಂಕ್ ಖಾತೆಗೆ ಹಣ ವಾಪಸು ಬರುತ್ತಿರಿಲ್ಲ. ಸೈಬರ್ ವಂಚಕ ಜಾಲಕ್ಕೆ ಬೀಳುವ ಜನರಿಗೆ ಸಹಾಯವಾಗಲೆಂದು ಪೊಲೀಸರು ಪರಿಚಯಿಸಿರುವ ಗೋಲ್ಡನ್ ಹವರ್ ನೆರವಿನಿಂದ ಅಷ್ಟೂ ಹಣ ವಾಪಸು ಕೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಿವೃತ್ತ ಮಿಲಟರಿ ಅಧಿಕಾರಿಯಿಂದ ಪತ್ರ
ಬೆಂಗಳೂರು ಪೊಲೀಸರ ಕಾರ್ಯ ಶೈಲಿ ಹಾಗೂ ಸೈಬರ್ ವಂಚಕರ ಕೈ ಸೇರಿದ್ದ ಹಣ ವಾಪಸು ಕೊಡಿಸಿದ ಪೊಲೀಸರ ಕಾರ್ಯವನ್ನು ಶ್ಲಾಘಿಸಿ ನಿವೃತ್ತ ಮಿಲಟರಿ ಅಧಿಕಾರಿ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದ್ದಾರೆ. ಪೊಲೀಸರ 'ಗೋಲ್ಡನ್ ಅವರ್ ' ಬಳಕೆ ಮಾಡಿ ನಿವೃತ್ತ ಅಧಿಕಾರಿಯ ಹಣ ಉಳಿಸಿದ ಬೆಂಗಳೂರು ಪೊಲೀಸರ ಕಾರ್ಯ ಶೈಲಿಯನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಶ್ಲಾಘಿಸಿದ್ದಾರೆ.
Recommended Video

ಗೋಲ್ಡನ್ ಅವರ್ ಬಳಕೆ ಹೇಗೆ
ಉಡುಗೊರೆ ಬಂದಿದೆ, ನಿಮ್ಮ ಕೆವೈಸಿ ಬದಲಾವಣೆ ಮಾಡಬೇಕಿದೆ ಎಂಬ ನೆಪದಲ್ಲಿ ಸೈಬರ್ ವಂಚಕರು ಕರೆ ಮಾಡಿದರೆ ಅವನ್ನು ಮೊದಲು ತಿರಸ್ಕರಿಸಿ. ಒಂದು ವೇಳೆ ಆಕಸ್ಮಿಕ ಸೈಬರ್ ವಂಚಕರ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡರೆ, ತಲೆ ಕೆಡಿಸಿಕೊಂಡು ಕಾಲಾಹರಣ ಮಾಡಬೇಡಿ. ಕೂಡಲೇ ಸಮೀಪದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿ. ಬೆಂಗಳೂರಿನ ಎಲ್ಲಾ ಪೊಲೀಸ್ ವಿಭಾಗಗಳಲ್ಲೂ ಸೈಬರ್ ಪೊಲೀಸ್ ಠಾಣೆಗಳಿವೆ. ಘಟನೆ ನಡೆದ ಎರಡು ತಾಸಿನೊಳಗೆ ನೀವು ಸೈಬರ್ ಪೊಲೀಸರಿಗೆ ದೂರು ನೀಡಿದರೆ, ಸೈಬರ್ ವಂಚಕರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುವುದನ್ನು ಪೊಲೀಸರು ತಡೆದು ವಾಪಸು ಕೊಡಲಿಸಲಿದ್ದಾರೆ. ಎರಡು ತಾಸು ಮೀರಿದ ಬಳಿಕ ಪ್ರಯತ್ನ ಮಾಡುವುದು ವಿಫಲ. ಒಂದು ವೇಳೆ ಸೈಬರ್ ಪೊಲೀಸ್ ಠಾಣೆಗೆ ಹೋಗಲು ತಡವಾಗುವಂತಿದ್ದಲ್ಲಿ ಬೆಂಗಳೂರು ಪೊಲೀಸರ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಕೂಡಲೇ ಪ್ರಥಮ ಮಾಹಿತಿ ನೀಡಿದರೂ ಸಾಕು. ಆನಂತರ ಪೊಲೀಸ್ ಠಾಣೆಗೆ ದೂರು ನೀಡುವ ಮೂಲಕ ಗೋಲ್ಡನ್ ಅವರ್ ಸೌಲಭ್ಯ ಪಡೆಯಬಹುದು. ಘಟನೆ ನಡೆದ ಎರಡು ತಾಸಿನ ಒಳಗೆ ದೂರನ್ನು ನೀಡಬೇಕು. ಇಲ್ಲವೇ ಪ್ರಥಮ ವರ್ತಮಾನ ಮಾಹಿತಿಯನ್ನು ಪೊಲೀಸ್ ನಿಯಂತ್ರಣ ಕಚೇರಿಗೆ ನೀಡಬೇಕು.












Click it and Unblock the Notifications