ಬೆಂಗಳೂರು ಕಾವೇರಿ ನೀರು ಕಲುಷಿತ: 60 ಕುಟುಂಬಗಳು ಅಸ್ವಸ್ಥ: ರೀಲ್ಸ್ ಮಿನಿಸ್ಟರ್ ಎಂದು ಆರ್.ಅಶೋಕ್ ತರಾಟೆ
ಬೆಂಗಳೂರು: ಬೆಂಗಳೂರಿನ ಕಸ ವಿಲೇವಾರಿ ಟೆಂಡರ್ ನೀಡುತ್ತಿದ್ದಂತೆ ಸಾಕಷ್ಟ ಭ್ರಷ್ಟಾಚಾರ ಆರೋಪ ಕೇಳಿ ಬಂದವು. ನಿತ್ಯ ಸಾವಿರಾರು ಟನ್ ಕಸ್ ಸಂಸ್ಕರಣೆ ಆಗದೇ ಉಳಿಯುತ್ತಿದೆ.ಇದರಿಂದ ಕಸದ ಸಮಸ್ಯೆ ತೀವ್ರಗೊಳ್ಳುವ ಆತಂಕ ಎದುರಾಗಿದೆ. ಮತ್ತೊಂದೆಡೆ ಕುಡಿಯುವ ಕಾವೇರಿ ನೀರಿನಲ್ಲಿ 'ಕೊಲಿಫಾರ್ಮ್ ಬ್ಯಾಕ್ಟೀರಿಯಾ' ಕಂಡು ಬಂದಿದೆ. ನೀರು ಕುಡಿದ ಹತ್ತಾರು ಕುಟುಂಬಗಳು ಅನಾರೋಗ್ಯಕ್ಕೆ ಉತ್ತಾಗಿವೆ. 'ರೀಲ್ಸ್ ಮಂತ್ರಿ ಕೃಷ್ಣ ಬೈರೇಗೌಡ ಅವರೆ ನಿಮ್ಮ ಕ್ಯಾಮೆರಾ ಕಣ್ಣಿಗೆ ಬೆಂಗಳೂರಿನ ಈ ನರಕ ದರ್ಶನವಾಗುತ್ತಿಲ್ಲವೇ?' ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಬೆಂಗಳೂರಿನ ಸಮಸ್ಯೆ ಕುರಿತು ಪ್ರತಿಕ್ರಿಯಿಸಿರುವ ಅವರು, ಒಂದು ಕಡೆ ಹೆಚ್.ಎಸ್.ಆರ್. ಲೇಔಟ್‌ನಲ್ಲಿ ಕಲುಷಿತ ಕಾವೇರಿ ನೀರು ಕುಡಿದು 60ಕ್ಕೂ ಹೆಚ್ಚು ಕುಟುಂಬಗಳು ರೋಗಗ್ರಸ್ತವಾಗುತ್ತಿವೆ. ಮಕ್ಕಳು ಮಹಿಳೆಯರು ಆಸ್ಪತ್ರೆ ಸೇರಿದ್ದಾರೆ. ಕುಡಿಯುವ ನೀರಿನಲ್ಲಿ ಬರೋಬ್ಬರಿ 278 ಕೊಲಿಫಾರ್ಮ್ ಇದೆ. ಜನರ ಜೀವದ ಜೊತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಚೆಲ್ಲಾಟವಾಡುತ್ತಿದೆ. ಕಳೆದ ಜೂನ್ 6 ರಿಂದಲೇ ದೂರು ನೀಡುತ್ತಾ ಬಂದರೂ ಈ ಬಗ್ಗೆ ಖ್ಯಾರೆ ಎಂದಿಲ್ಲ ಎಂದು ಅವರು ದೂರಿದರು.

ಸಂಸ್ಕರಣೆ ಆಗದ 1,775 ಟನ್ ಕಸ
ಅಷ್ಟಲ್ಲದೇ ನಿತ್ಯ ರಾಜಧಾನಿಯಲ್ಲಿ 4105 ಟನ್ ಕಸ್ ಸಂಗ್ರಹಣೆ ಆಗುತ್ತದೆ. ಆ ಪೈಕಿ 1,775 ಟನ್ ಕಸ ಸಂಸ್ಕರಣೆಯಾಗದೇ ರಸ್ತೆ, ರಾಜಕಾಲುವೆ ಸೇರುತ್ತಿದೆ. ಇದರಿಂದ ಅನಾರೋಗ್ಯ ಸಮಸ್ಯೆ ಮಾತ್ರವಲ್ಲದೇ ಮಳೆಗಾಲದಲ್ಲಿ ಪ್ರವಾಹ ಸಮಸ್ಯೆ ಉಂಟಾಗುತ್ತದೆ. ಎಲ್ಲೆಂದರಲ್ಲಿ ಕಸ ಹಾಕಲಾಗುತ್ತದೆ ಎಂದರು.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ "ಬ್ರ್ಯಾಂಡ್ ಬೆಂಗಳೂರು" ಅಂದರೆ ಸಾರ್ವಜನಿಕರು ಕಲುಷಿತ ನೀರು ಕುಡಿದು ಸಾಯಬೇಕಾ? ಕಸದ ರಾಶಿಯಲ್ಲಿ ನರಳಬೇಕಾ?. ನಿಮ್ಮ ಹಿಂದಿನ ಬೆಂಗಳೂರು ಅಭಿವೃದ್ಧಿ ಮಂತ್ರಿಗಳು ಬಿಟ್ಟು ಹೋಗಿರುವ "ಸಾಕ್ಷಿ ಗುಡ್ಡೆ"ಯನ್ನು ಸರಿಪಡಿಸಲು ತಾವು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ಬರೀ ಅಧಿಕಾರಿಗಳನ್ನು ಬೈದು ರೀಲ್ಸ್ ಮಾಡಿ, ಜವಾಬ್ದಾರಿಯಿಂದ ನುಣುಚಿಕೊಂಡರೆ ಬೆಂಗಳೂರಿನ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ಗ್ಯಾರೆಂಟಿ ಸಮಿತಿ ಗಂಜಿ ಕೇಂದ್ರ?
ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ರಚನೆಯಾದ ಗ್ಯಾರಮಟಿ ಸಮಿತಿ ಅಂದರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಕಾಂಗ್ರೆಸ್‌ನ ಅತೃಪ್ತ ನಾಯಕರನ್ನು, ಕಾರ್ಯಕರ್ತರನ್ನ ಸಾಕುವ "ಗಂಜಿ ಕೇಂದ್ರ"ವೇ ಎಂದು ಸಿಎಂ ಡಿಕೆ ಶಿವಕುಮಾರ್ ಅವರನ್ನು ಆರ್.ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ. ಈ ಹಿಂದೆ ಇದೇ ಸಮಿತಿಯ ಪದಾಧಿಕಾರಿಗಳ ಮಾಸಿಕ ವೇತನ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಆಗಲೂ ಕಾಂಗ್ರೆಸ್ ವಿಪಕ್ಷ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅವರ ವೇತನ ಹಿಂಪಡೆಯುವಂತೆ, ಸಮಿತಿ ಕೈ ಬಿಡುವಂತೆ ಆಗ್ರಹಿಸಿದ್ದಾರೆ.
ಸತ್ತವರಿಗೂ ಗೃಹಲಕ್ಷ್ಮಿ ಯೋಜನೆ ಹಣ ತಲುಪುತ್ತಿರುವ ಮಹಾ ಹಗರಣದ ಬಯಲಾದ ನಡುವೆ, ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮತ್ತಷ್ಟು 'ಗ್ಯಾರೆಂಟಿ'ಗಳ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಲೂಟಿ ಹೊಡೆಯಲು ಸಮಿತಿ ಹೊರಟಿದೆ. ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ರಚಿಸಿದ್ದು 'ಗ್ಯಾರೆಂಟಿ ಸಮಿತಿಯೋ ಅಥವಾ ಜನಸಾಮಾನ್ಯರ ಹಣದಲ್ಲಿ ಪಕ್ಷದವರನ್ನು ಸಾಕುವ ಅಧಿಕೃತ "ಗಂಜಿ ಕೇಂದ್ರ"ವೋ? ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ಹಣವಿಲ್ಲದೆ ಅಭಿವೃದ್ಧಿ ಕಾರ್ಯಗಳು ನಿಂತಿವೆ. ಸರ್ಕಾರಿ ಶಾಲೆಗಳ ಮಕ್ಕಳು ಪಠ್ಯಪುಸ್ತಕ, ಸಮವಸ್ತ್ರಕ್ಕಾಗಿ ಕಾಯುತ್ತಿದ್ದಾರೆ. ಸರ್ಕಾರಿ ಶಾಲೆಗಳ ಕೊಠಡಿಗಳ ದುರಸ್ತಿಗೆ, ಮೊಟ್ಟೆಗೂ ದುಡ್ಡಿಲ್ಲದ ದುಸ್ಥಿತಿ ಇದೆ. ರಾಗಿ ಬೆಳೆದ ರೈತರು ಬೆಂಬಲ ಬೆಲೆ ಬಾಕಿಗಾಗಿ ಕಚೇರಿ ಅಲೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಣವನ್ನು ಪಕ್ಷದ ನಿರುದ್ಯೋಗಿ ಸಾರ್ವಜನಿಕರು, ಅತೃಪ್ತ ನಾಯಕರಿಗೆ ಉದ್ಯೋಗವನ್ನು ಬಳಸಿಕೊಳ್ಳುತ್ತಿದ್ದಾರೆ ಅತ್ಯಂತ ನಾಚಿಕೆಗೇಡು ಎಂದು ಲೇವಡಿ ಮಾಡಿದರು.
ಹೊಸ ಗ್ಯಾರೆಂಟಿ ಸಮಿತಿ ರಚಿಸುವುದು ದೂರದ ಮಾತು, ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ, ಈಗಿರುವ ನಾಲಾಯಕ್ ಗ್ಯಾರೆಂಟಿ ಸಮಿತಿಗಳನ್ನು ಕೂಡ ತಕ್ಷಣವೇ ವಿಸರ್ಜನೆ ಮಾಡಬೇಕು. ಅವರಿಗೆ ಕೊಟ್ಟಿರುವ ಸಂಬಳ, ಸವಲತ್ತು ವಾಪಸ್ಸು ಪಡೆಯುವಂತೆ ಅವರು ಆಗ್ರಹಿಸಿದ್ದಾರೆ.













Click it and Unblock the Notifications