ನೇಮಕಾತಿ ಪ್ರಕರಣ: ಪೊಲೀಸ್ ಇಲಾಖೆ ಕ್ರಮವನ್ನು ಎತ್ತಿಹಿಡಿದ ಹೈಕೋರ್ಟ್, ಏನದು?, ಇಲ್ಲಿದೆ ಮಾಹಿತಿ
ಬೆಂಗಳೂರು, ಅಕ್ಟೋಬರ್, 28: ಕ್ರಿಮಿನಲ್ ಕೇಸ್ ಬಾಕಿ ಇದ್ದ ಮಾಹಿತಿ ಪೊಲೀಸ್ ಪೇದೆ ನೇಮಕಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಬಹಿರಂಗಪಡಿಸದ ಹಿನ್ನೆಲೆಯಲ್ಲಿ ಸಂಭಾವ್ಯ ಆಯ್ಕೆ ಪಟ್ಟಿಯಿಂದ ಅಭ್ಯಥಿಯ ಹೆಸರು ಕೈಬಿಟ್ಟ ಪೊಲೀಸ್ ಇಲಾಖೆಯ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಅಲ್ಲದೆ, ಆ ರೀತಿ ಮಾಹಿತಿ ನೀಡದೇ ಇರುವುದು ತಪ್ಪು, ಹಾಗಾಗಿ ಇಲಾಖೆ ಕ್ರಮ ಸರಿಯಾಗಿಯೇ ಇದೆ ಎಂದು ಆದೇಶಿಸಿದೆ.
ಬೀದರ್ ಜಿಲ್ಲೆಯ ಎಕ್ಲೂರುವಾಡಿಯ ನಾರಾಯಣ ಜಾಮದಾರ್ ಪೊಲೀಸ್ ಇಲಾಖೆಯ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಮತ್ತು ಕೆ.ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ.

ಹೈಕೋರ್ಟ್ ಆದೇಶವೇನು?
ಅಕ್ರಮ ಕೂಟ ಸೇರಿದ, ದರೋಡೆ, ಹಲ್ಲೆ, ಕೊಲೆ ಯತ್ನ ಮತ್ತು ಜೀವ ಬೆದರಿಕೆ ಆರೋಪ ಸಂಬಂಧ ಅರ್ಜಿದಾರ ಅಭ್ಯರ್ಥಿ ವಿರುದ್ಧ 2018ರಲ್ಲಿ ದೂರು ದಾಖಲಾಗಿದೆ. ಈ ಪ್ರಕರಣದಿಂದ ಅರ್ಜಿದಾರರೂ ಖುಲಾಸೆಯಾಗಿದ್ದರೂ ಅರ್ಜಿ ಸಲ್ಲಿಸಿದ್ದ ದಿನದಂದು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿಯಿತ್ತು. ಈ ಮಾಹಿತಿಯನ್ನು ನೇಮಕಾತಿ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಬಹಿರಂಗಪಡಿಸಿರಲಿಲ್ಲ. ಆದರೆ, ಈ ಮಾಹಿತಿ ನೀಡುವುದು ಕಡ್ಡಾಯ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಅರ್ಜಿ ಸಲ್ಲಿಕೆಯಾದ ನಂತರ ಪೊಲೀಸ್ ಇಲಾಖೆ ನಡೆಸಿದ್ದ ಪರಿಶೀಲನೆ ವೇಳೆ ಅರ್ಜಿದಾರ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಇದೇ ಕಾರಣಕ್ಕಾಗಿ ಅವರನ್ನು ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಿಲ್ಲ. ಅರ್ಜಿದಾರ ಅಭ್ಯರ್ಥಿಯು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿ, ಆ ಸಂಬಂಧ ದೊಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದ ಸಂದರ್ಭದಲ್ಲಿ ಅಂತಹ ಅಭ್ಯರ್ಥಿಯನ್ನು ಆಯ್ಕೆಗೆ ಪರಿಗಣಿಸುವುದಿಲ್ಲ.
ಅವರ ನಂತರ ಮರಿಟ್ ಹೊಂದಿದ ಅಭ್ಯರ್ಥಿಯನ್ನು ಆಯ್ಕೆಗೆ ಪರಿಗಣಿಸಲಾಗುವುದು ಎಂಬುದಾಗಿ ನೇಮಕಾತಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು 2015ರ ಡಿಸೆಂಬರ್ 4ರಂದು ಹೊರಡಿಸಿದ್ದ ನೋಟಿಫಿಕೇಷನ್‌ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದರು. ಆದ್ದರಿಂದ ಆಯ್ಕೆ ಪಟ್ಟಿಯಿಂದ ಅರ್ಜಿದಾರರ ಹೆಸರು ಕೈ ಬಿಟ್ಟಿರುವ ಪೊಲೀಸ್ ಇಲಾಖೆಯ ಕ್ರಮ ಸೂಕ್ತವಾಗಿದೆ ಎಂದು ತಿಳಿಸಿದ ಹೈಕೋರ್ಟ್, ಅರ್ಜಿ ವಜಾಗೊಳಿಸಿದೆ.
ಅರ್ಜಿದಾರರ ಪರ ವಕೀಲರು ವಾದಿಸಿ, ಬಾಕಿಯಿರುವ ಕ್ರಿಮಿನಲ್ ಪ್ರಕರಣದ ಮಾಹಿತಿಯನ್ನು ತಿಳಿಸುವ ಅಗತ್ಯವಿಲ್ಲ. ಹಾಗಾಗಿ, ಆ ಕುರಿತ ಮಾಹಿತಿಯನ್ನು ಮರೆಮಾಚಿದ ಸಂಗತಿಯೇ ಉದ್ಭವಿಸುವುದಿಲ್ಲ. ಮೇಲಾಗಿ, ಅರ್ಜಿ ಸಲ್ಲಿಕೆ ವೇಳೆ ವಿಚಾರಣೆಗೆ ಬಾಕಿಯಿತ್ತು ಎನ್ನಲಾದ ಕ್ರಿಮಿನಲ್ ಪ್ರಕರಣದಿಂದ ಈಗಾಗಲೇ ಅರ್ಜಿದಾರರು ಖುಲಾಸೆಯಾಗಿದ್ದಾರೆ. ಆದ್ದರಿಂದ ನೇಮಕಾತಿ ಪ್ರಕ್ರಿಯೆಗೆ ಅರ್ಜಿದಾರರನ್ನು ಪರಿಗಣಿಸಲು ಆದೇಶಿಸಬೇಕು ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ
ನಾರಾಯಣ ಜಾಮದಾರ್ ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಪೊಲೀಸ್ ಪೇದೆ (ಕೆಎಸ್‌ಆರ್‌ಪಿ), ಪೊಲೀಸ್ ಪೇದೆ ಐಆರ್‌ಬಿ ಶ್ರೇಣಿಯ ಉದ್ಯೋಗದ ನೇಮಕಾತಿ ಕೋರಿ 2020ರ ಜೂನ್ 16ರಂದು ಅರ್ಜಿ ಸಲ್ಲಿಸಿದ್ದರು. ಲಿಖಿತ ಪರೀಕ್ಷೆಯಲ್ಲಿ 100 ಅಂಕಗಳಿಗೆ 71 ಅಂಕ ಪಡೆದಿದ್ದರು. ಸಂಭಾವ್ಯ ಆಯ್ಕೆ ಪಟ್ಟಿಯಲ್ಲಿ ಅರ್ಜಿದಾರರದ್ದು 63ನೇ ಕ್ರಮ ಸಂಖ್ಯೆಯಾಗಿತ್ತು. ಆದರೆ, ಅರ್ಜಿ ಸಲ್ಲಿಸಿದ್ದ ದಿನಾಂಕದಂದು ಅರ್ಜಿದಾರನ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿಯಿತ್ತು.
ಈ ಮಾಹಿತಿಯನ್ನು ಅರ್ಜಿ ಸಲ್ಲಿಕೆ ವೇಳೆ ಮರೆ ಮಾಚಿಸಿದ್ದಾರೆ ಎಂಬ ಕಾರಣಕ್ಕೆ ಎರಡನೇ ಸಂಭಾವ್ಯ ಆಯ್ಕೆ ಪಟ್ಟಿಯಲ್ಲಿ ಆತನ ಹೆಸರು ಕೈ ಬಿಡಲಾಗಿತ್ತು. ಈ ಕುರಿತು 2021ರ ಜೂನ್ 9ರಂದು ನೇಮಕಾತಿ ಪ್ರಾಧಿಕಾರ ಹಿಂಬರಹ ನೀಡಿತ್ತು. ಅದನ್ನು ರದ್ದುಪಡಿಸಬೇಕು ಹಾಗೂ ತಮ್ಮನ್ನು ನೇಮಕಾತಿಗೆ ಪರಿಗಣಿಸುವಂತೆ ನೇಮಕಾತಿ ಪ್ರಾಧಿಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅರ್ಜಿದಾರರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಅರ್ಜಿಯನ್ನು ವಜಾಗೊಳಿಸಿ 2022ರ ಜುಲೈ 19ರಂದು ಕೆಎಟಿ ಆದೇಶಿಸಿತ್ತು. ಇದರಿಂದ ನಾರಾಯಣ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.












Click it and Unblock the Notifications