ಬಿಬಿಎಂಪಿ: ಶಾಲೆಯಿಂದ ಹೊರಗುಳಿದ 6,936 ಮಕ್ಕಳ ಮರಳಿ ಕರೆತರಲು CRT ಶಿಫಾರಸುಗಳು
ಬೆಂಗಳೂರು, ಮಾರ್ಚ್ 12: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಶಾಲೆಗಳಿಂದ ಹೊರಗುಳಿದ ವಿದ್ಯಾರ್ಥಿಗಳ ಪತ್ತೆ ಕಾರ್ಯ (ಸಮೀಕ್ಷೆ) ನೆಡೆದಿದೆ. ಇಲ್ಲಿ ನಗರದ ಎಂಟು ವಲಯಗಳ ವ್ಯಾಪ್ತಿಯಲ್ಲಿ 6,936 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಬಿಬಿಎಂಪಿ ಅಧಿಕೃತಪಡಿಸಿದೆ. ಹಾಗಾದರೆ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಏನು ಮಾಡಬೇಕೆಂದು ಚೈಲ್ಡ್ ರೈಟ್ಸ್ ಟ್ರಸ್ಟ್ ಶಿಫಾರಸುಗಳನ್ನು ಮಾಡಿದೆ. ಟ್ರಸ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ಪತ್ರ ಬರೆದಿದೆ.
ಬಿಬಿಎಂಪಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ 1,08,203 ಮಕ್ಕಳಲ್ಲಿ 6,936 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಇದು ಅತ್ಯಂತ ಆತಂಕಕಾರಿ ವಿಷಯವಾಗಿದೆ. ಇದು ಮಕ್ಕಳ ಶಿಕ್ಷಣಕ್ಕಾಗಿ ದುಡಿಯುತ್ತಿರುವವರಿಗೆ ಅತ್ಯಂತ ಕಳವಳ ಹುಟ್ಟಿಸುತ್ತದೆ. ರಾಜ್ಯದ ರಾಜಧಾನಿಯಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಈ ಸಂಖ್ಯೆಯು ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣದ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ತಕ್ಷಣದ ಗಮನ ಮತ್ತು ಕ್ರಮದ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ಮಕ್ಕಳ ಪರವಾಗಿ ಟ್ರಸ್ಟ್ ನಿರ್ದೇಶಕ ನಾಗಸಿಂಹ ಜಿ.ರಾವ್ ಅವರು ವಿವರಿಸಿದ್ದಾರೆ.

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ 28 ಪ್ರತಿಮಗುವೂ ಶಿಕ್ಷಣದ ಹಕ್ಕನ್ನು ಹೊಂದಿದೆ ಎಂದು ತಿಳಿಸುತ್ತದೆ ಅದೇ ರೀತಿ, ಭಾರತೀಯ ಸಂವಿಧಾನದ ಪರಿಚ್ಛೇದ 21A 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ಖಾತರಿಪಡಿಸುತ್ತದೆ. ಶಿಕ್ಷಣದ ಹಕ್ಕು (RTE) ಕಾಯಿದೆ, 2009, ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವ ಮಹತ್ವ ತಿಳಿಸಿದೆ.
ಕಾನೂನುಗಳ ಮಧ್ಯೆ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದೇಗೆ?
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 1992ರಲ್ಲಿ ಸಹಿ ಮಾಡಿರುವ ನಮ್ಮ ದೇಶ ಮಕ್ಕಳ ಬದುಕು, ರಕ್ಷಣೆ ,ಅಭಿವೃದ್ಧಿ ಹಾಗೂ ಭಾಗವಹಿಸುವ ಹಕ್ಕುಗಳನ್ನು ಎತ್ತಿ ಹಿಡಿಯಲು ಬದ್ಧವಾಗಿದೆ. ಇಷ್ಟೆಲ್ಲಾ ಕಾನೂನುಗಳಿದ್ದರೂ ಇಷ್ಟೊಂದು ಸಂಖ್ಯೆಯಲ್ಲಿ ಮಕ್ಕಳು ಶಾಲೆಯಿಂದ ಹೇಗೆ ಹೊರಗುಳಿದರು? ಮಕ್ಕಳು ಶಾಲೆಗೆ ಬರುತ್ತಿಲ್ಲ ಎಂದು ತಿಳಿದೊಡನೇ ಆ ಮಕ್ಕಳನ್ನು ಶಾಲೆಗೆ ಕರೆದು ಕೊಂಡು ಬರುವ ಪ್ರಯತ್ನಗಳು ಯಾಕಾಗಿ ಆಗಲಿಲ್ಲ? ಹಾಜರಾತಿ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿಲ್ಲವೇ? ಅಥವಾ ಈ ಮಕ್ಕಳು ಶಾಲೆಗೆ ದಾಖಲಾಗಿಯೇ ಇಲ್ಲವೇ? ವಲಸೆ ಬಂದಿರುವ ಕುಟುಂಬಗಳ ಮಕ್ಕಳೇ ಇವರು ? ಈ ಎಲ್ಲಾ ಪ್ರಶ್ನೆಗಳು ಸೃಷ್ಟಿಯಾಗುತ್ತವೆ.

2030 ರೊಳಗೆ ಮಕ್ಕಳಿಗೆ ಶಿಕ್ಷಣ ಕೊಡಿಸುವ ಸವಾಲು
ಇದಷ್ಟೇ ಅಲ್ಲದೇ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ (SDG) 4, ಎಲ್ಲರಿಗೂ ಜೀವಮಾನದ ಕಲಿಕೆಯ ಅವಕಾಶಗಳು ದೊರಕಬೇಕು ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಬೇಕು. 2030 ರೊಳಗೆ ರಾಷ್ಟ್ರದ ಪ್ರತಿ ಮಕ್ಕಳಿಗೂ ಶಿಕ್ಷಣವನ್ನು ನೀಡುವ ಸವಾಲು ನಮ್ಮ ಸರ್ಕಾರದ ಮುಂದಿದೆ. ಸುಸ್ಥಿರ ಅಭಿವೃದ್ಧಿ ಗುರಿ 4 ಅನ್ನು ಮುಟ್ಟಲು ಪ್ರತಿ ಮಗುವಿಗೆ ಅವರ ಹಿನ್ನೆಲೆ ಅಥವಾ ಪರಿಸ್ಥಿತಿಯನ್ನು ಲೆಕ್ಕಿಸದೆ ಗುಣಮಟ್ಟದ ಶಿಕ್ಷಣ ನೀಡುವ ಸಂಘಟಿತ ಪ್ರಯತ್ನದ ಅಗತ್ಯವಿದೆ. ಇಲ್ಲದಿದ್ದರೆ ಅಂತರಾಷ್ಟ್ರೀಯ ಸಮುದಾಯದೆದುರು ಅವಮಾನ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಸದ್ಯದಲ್ಲಿ ಇಷ್ಟೊಂದು ಮಕ್ಕಳು ಶಾಲೆಯಿಂದ ಹೊರಗೇಕೆ ಇದ್ದಾರೆ? ಪೋಷಕರಿಗೆ ಶಿಕ್ಷಣದ ಅರಿವಿಲ್ಲವೇ? ಈ ಮಕ್ಕಳಲ್ಲಿ ಎಷ್ಟು ಮಕ್ಕಳು ಬಾಲ ಕಾರ್ಮಿಕ ಪದ್ದತಿಗೆ ಒಳಗಾಗಿದ್ದಾರೆ ? ಎಷ್ಟು ಹೆಣ್ಣು ಮಕ್ಕಳು ಬಾಲ್ಯವಿವಾಹಕ್ಕೆ ತುತ್ತಾಗಿದ್ದಾರೆ? ಈ ಮಕ್ಕಳ ಅರೋಗ್ಯ ಹೇಗಿದೆ ಎಂಬುದರ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಮಕ್ಕಳನ್ನು ಶಾಲೆಗೆ ಕರೆತರಲು ಶಿಫಾರಸ್ಸುಗಳು, ಪಟ್ಟಿ
* ಶಾಲೆ, ಶಿಕ್ಷಣದ ಮಹತ್ವ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ಹಮ್ಮಿಕೊಳ್ಳಬೇಕು.
* ಶಾಲೆಯಿಂದ ಹೊರಗಿರುವ ಮಕ್ಕಳನ್ನು ಪತ್ತೆ ಮಾಡಲು ಸಮುದಾಯ ಹಾಗೂ ಸ್ವಯಂ ಸೇವಾಸಂಸ್ಥೆಗಳ ಸಹಕಾರ ಪಡೆದುಕೊಳ್ಳಬೇಕು.
* ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಒಟ್ಟಾಗಿ ಕ್ರಿಯಾಯೋಜನೆ ರೂಪಿಸಬೇಕು.
* ಮಕ್ಕಳು ಏಕೆ ಶಾಲೆಯಿಂದ ಹೊರಗುಳಿದಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ವಿಶ್ಲೇಷಣೆ ಮಾಡಬೇಕು. ತಜ್ಞರಿಂದ ಸಲಹೆ ಸಹಕಾರ ಪಡೆದುಕೊಳ್ಳಿ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಲು ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಬೇಕು.
* ವಿಶೇಷ ಅನುದಾನಗಳಡಿ ಶಾಲೆಗಳಲ್ಲಿ ಸೌಕರ್ಯಗಳನ್ನು ಹೆಚ್ಚಿಸಬೇಕು.
* ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸುವ ಕಾಯ್ದೆ 'ಕಿಶೋರ ಮತ್ತು ಬಾಲಕಾರ್ಮಿಕರ (ನಿಯಂತ್ರಣ -ನಿಷೇದ) ಕಾಯ್ದೆಯನ್ನು ಸೂಕ್ತವಾಗಿ ಜಾರಿಗೊಳಿಸಬೇಕು.
ಇನ್ನೂ ಶಾಲೆಯಿಂದ ಹೊರಗಿರುವ ಮಕ್ಕಳನ್ನು ಗುರುತಿಸಿ ಸರ್ಕಾರಕ್ಕೆ ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಬೇಕು. ರಾಜ್ಯದ ರಾಜಧಾನಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮಸ್ಯೆಯನ್ನು ಪರಿಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ ಎಂದು ಟ್ರಸ್ಟ್ ನಿರ್ದೇಶಕರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಬಿಬಿಎಂಪಿಯಿಂದ ಮಹತ್ವದ ಸರ್ವೇ
14 ವರ್ಷದೊಳಗಿನ ಮಕ್ಕಳು ಕನಿಷ್ಠ 8 ವರ್ಷ ಶಿಕ್ಷಣ ಕಲಿಯುವುದು ಮೂಲಭೂತ ಹಕ್ಕು. ಹೀಗಾಗಿ ಈ ವಯಸ್ಸಿನವರು ಯಾರೋಬ್ಬರು ಶಾಲೆಯಿಂದ ಹೊರಗುಳಿಯಬಾರದು ಎಂಬ ಕಾರಣಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಳೆದ ಫೆಬ್ರವರಿಯಿಂದ ಸರ್ವೇ ಆರಂಭಿಸಿತ್ತು. ಬೆಂಗಳೂರಿನ ಎಂಟು ವಲಯಗಳ ವ್ಯಾಪ್ತಿಯಲ್ಲಿ ಸರ್ವೇಗಾಗಿ ಎಲ್ಲ ವಯಗಳಿಗೆ ಒಬ್ಬೊಬ್ಬ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.
ಈ ಸರ್ವೆ ನಡೆದಿದ್ದು, ಎಂಟು ವಲಯಗಳ ವ್ಯಾಪ್ತಿಯ ಬಿಬಿಎಂಪಿ ಶಾಲೆಗಳಲ್ಲಿ ಕಲಿಯುತ್ತಿರುವ ಒಟ್ಟು 1,08,203 ಮಕ್ಕಳನ್ನು ಗುರುತಿಸಲಾಗಿದೆ. ಇದರಲ್ಲಿ 6936 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬುದು ಸರ್ವೇಯ ವರದಿ ತಿಳಿಸಿದೆ. ಈ ವರದಿಗೆ ಚೈಲ್ಡ್ ರೈಟ್ಸ್ ಟ್ರಸ್ಟ್ ಕಳವಳ ವ್ಯಕ್ತಪಡಿಸಿದ್ದು, ಶಿಕ್ಷಣ ವಂಚಿತ ಮಕ್ಕಳನ್ನು ಮರಳಿ ಶಾಲೆಗಳಿಗೆ ಹೇಗೆ ಕರೆತರಬೇಕು ಎಂಬುದರ ಕುರಿತು ಸರ್ಕಾರಕ್ಕೆ ಪತ್ರ ಮುಖೇನ ಶಿಫಾರಸು ಮಾಡಿದೆ.












Click it and Unblock the Notifications