RCB Stampede: ಡಿಸಿಎಂ, ಪರಮೇಶ್ವರ್ ರಾಜೀನಾಮೆ ಕೊಟ್ಟರಷ್ಟೇ ಮೃತರ ಕುಟುಂಬಗಳಿಗೆ ನ್ಯಾಯ: ಅಶೋಕ್
ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಬಿಜೆಪಿ ಆರೋಪ ಮಾಡಿದೆ. ಈ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸೇತುವೆ ಕುಸಿದು ಜನ ಪ್ರಾಣ ಕಳೆದುಕೊಂಡರು. ಆಗೆಲ್ಲ ಘಟನೆಯ ಹೊಣೆ ಹೊತ್ತು ಬಿಜೆಪಿಯವರು ರಾಜೀನಾಮೆ ನೀಡಿದ್ದಾರ? ಎಂದು ಕೇಳಿದ್ದಾರೆ. ಇದಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ದೆಹಲಿ ಯಾತ್ರೆ ಮುಗಿಸಿಕೊಂಡು ಬಂದಾಗಿನಿಂದ ಕಾಲ್ತುಳಿತ ಪ್ರಕರಣವನ್ನ ಮುಚ್ಚಿಹಾಕಲು, ಜನರ ಗಮನ ಬೇರೆಡೆ ಸೆಳೆಯಲು ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ. ಸಿದ್ದರಾಮಯ್ಯನವರೇ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ದುರಂತಕ್ಕೂ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೂ ಅಥವಾ ಕುಂಭಮೇಳದಲ್ಲಿ ನಡೆದ ಕಾಲ್ತುಳಿತ ಘಟನೆಗೂ ಅಜಗಜಾಂತರ ವ್ಯತ್ಯಾಸ ಇದೆ. ಆಕಾಶಕ್ಕೂ ಭೂಮಿಗೂ ಇರುವ ಅಂತರ ಇದೆ. ಈ ರೀತಿಯ ಹೋಲಿಕೆ ಮಾಡುವುದು ಮೂರ್ಖತನ ಎನ್ನುವುದು ತಮಗೂ ಗೊತ್ತು ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಪೊಲೀಸರು ತರಾತುರಿಯ ವಿಜಯೋತ್ಸವ ಬೇಡ ಎಂದು ಲಿಖಿತ ರೂಪದಲ್ಲಿ ಎಚ್ಚರಿಕೆ ಕೊಟ್ಟ ಮೇಲೂ ತರಾತುರಿಯಲ್ಲಿ ವಿಜಯೋತ್ಸವ ಆಚರಣೆ ಮಾಡಿದ್ದು ಯಾರ ತೆವಲಿಗೆ? ಕಟು ಸತ್ಯವೇನಂದರೆ ಈ ಕಾಲ್ತುಳಿತ ಸರ್ಕಾರಿ ಪ್ರಾಯೋಜಿತ ಅಮಾಯಕರ ಹತ್ಯಾಕಾಂಡ. ಮತ್ತೊಬ್ಬರ ಸಾಧನೆಯ ಯಶಸ್ಸಿನ ದುರ್ಲಾಭ ಪಡೆಯುವ ಸರ್ಕಾರದ ಹಪಹಾಪಿಯಿಂದ ಸಂಭವಿಸಿರುವ ತಡೆಯಬಹುದಾಗಿದ್ದ ಅವಘಡ ಇದು ಎಂದು ದೂರಿದ್ದಾರೆ.
ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣ ಎರಡೂ ಕಡೆ ಕಾರ್ಯಕ್ರಮ ಇದ್ದಿದ್ದರಿಂದ ಇತರೆ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿ, ಕೆಎಸ್‌ಆರ್‌ಪಿ ತುಕಡಿಗಳು ನಿಯೋಜನೆ ಆಗಬೇಕಿತ್ತಲ್ಲವೇ? ಇನ್ನು ಮಾನವೀಯತೆಯ ಪ್ರಶ್ನೆಗೆ ಬರೋಣ. ದುರಂತ ಸಂಭವಿಸಿದ ನಂತರವಾದರೂ ಕ್ರೀಡಾಂಗಣದೊಳಗೆ ಸಂಭ್ರಮಾಚರಣೆ ಕೂಡಲೇ ಸ್ಥಗಿತಗೊಳಿಸಬೇಕಿತ್ತು. ಆದರೆ ಸೂತಕದ ಮನೆಯಾಗಿದ್ದ ಸಮಯದಲ್ಲಿ ಸ್ವತಃ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೈದಾನದೊಳಗಿನ ಸಂಭ್ರಮದಲ್ಲಿ ಭಾಗಿಯಾಗುವ ಮೂಲಕ ಮೃತಪಟ್ಟವರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ದುಃಖವಾಗಲಿ, ವಿಷಾದವಾಗಲಿ ಇರಲಿಲ್ಲ ಎನ್ನುವುದನ್ನ ಸಾಬೀತು ಪಡಿಸಿದರು ಎಂದು ಆರೋಪಿಸಿದ್ದಾರೆ.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಕಾರ್ಯಕ್ರಮದಲ್ಲಿ ಏನೂ ಅನಾಹುತ ಆಗಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮ ನಮ್ಮ ಜವಾಬ್ದಾರಿ ಅಲ್ಲ ಎನ್ನುವುದು ಲಜ್ಜೆಗೇಡಿತನ ಅಲ್ಲವೇ? ಭಾಷಣ ಮಾಡಲಿಲ್ಲ ಬೇಗ ಕಾರ್ಯಕ್ರಮ ಮುಕ್ತಾಯ ಮಾಡಿದೆವು ಎಂಬ ಹೇಳಿಕೆಗಳಿಂದ ದುರಂತ ಸಂಭವಿಸಿದ ನಂತರವೂ ಕಾರ್ಯಕ್ರಮ ನಡೆಸಿದ್ದನ್ನು ಸಮರ್ಥಿಸಿಕೊಂಡಿರುವುದು ನಾಚಿಗೇಡಿನ ಸಂಗತಿ ಅಲ್ಲವೇ? ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಕೇವಲ ಪ್ರಚಾರದ ತೆವಲಿಗೆ ಎಲ್ಲ ಶಿಷ್ಟಾಚಾರವನ್ನು ಬದಿಗೊತ್ತಿ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ 11 ಯುವಕರ ಸಾವಿಗೆ ಕಾಂಗ್ರೆಸ್ ಸರ್ಕಾರ ನೇರ ಕಾರಣ ಎಂದು ಆರೋಪ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಎಸ್‌ಐಟಿ ತನಿಖೆಯಾಗಲಿ ಅಥವಾ ಮ್ಯಾಜಿಸ್ಟ್ರೇಟ್ ತನಿಖೆ ಆಗಲಿ ಅದು ಸರ್ಕಾರಕ್ಕೆ ಕ್ಲೀನ್ ಚಿಟ್ ಕೊಡುವ ಕುತಂತ್ರವಷ್ಟೇ. 11 ಜನ ಅಮಾಯಕ ಯುವಕರ ಸಾವಿನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಬೇಜವಾಬ್ದಾರಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದು, ನ್ಯಾಯ ಕೇಳುವುದು ಪ್ರತಿಪಕ್ಷವಾಗಿ ನಮ್ಮ ಕರ್ತವ್ಯ. ಇದರಲ್ಲಿ ರಾಜಕೀಯ ಮಾಡುವ ಉದ್ದೇಶವಾಗಲಿ, ಅಗತ್ಯವಾಗಲಿ ನಮಗಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಅವರು ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹನ್ನೊಂದು ಜನರ ಸಾವಿಗೆ ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜಿನಾಮೆ ಕೊಡಬೇಕು. ಆಗ ಮಾತ್ರ ಸರ್ಕಾರ ಈ ದುರಂತಕ್ಕೆ ಹೊಣೆ ಹೊತ್ತಂತಾಗುತ್ತದೆ ಎಂದು ಅಶೋಕ್ ಆಗ್ರಹಿಸಿದ್ದಾರೆ.












Click it and Unblock the Notifications