'ಅವನ ಬದುಕಿಗೆ ಪವಿತ್ರಾ ಗೌಡ ಶನಿ..ಹೆಣ್ಣು-ಹೆಂಡದ ಚಟದಿಂದ ದರ್ಶನ್ ಹೀಗಾದ'
ಬೆಂಗಳೂರು, ಜೂನ್ 15: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಖ್ಯಾತ ನಟ ದರ್ಶನ್ ಬಂಧನವಾಗಿದೆ. ಇದರಿಂದ ಅವರ ಅಭಿಮಾನಿಗಳಿಗೂ ಮಾತ್ರವಲ್ಲದೇ ನಟನ ಆಪ್ತರಿಗೂ ಬೇಸರವಾಗಿದೆ. ದರ್ಶನ್‌ಗೆ ನಟಗೆ ಮೊಟ್ಟಮೊದಲು ಬಣ್ಣ ಹಚ್ಚಿದ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ, ದರ್ಶನ್ ಬಂಧನದ ಬಗ್ಗೆ ಮಾತನಾಡಿದ್ದು, ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅಡ್ಡಂಡ ಕಾರ್ಯಪ್ಪ ಅವರು, ದರ್ಶನ್ ಹಲವು ವರ್ಷಗಳಿಂದ ನನ್ನ ಸಂಪರ್ಕಕ್ಕೆ ಸಿಗಲಿಲ್ಲ. ನಾನು ರಂಗಾಯಣದ ಡೈರೆಕ್ಟರ್ ಆಗಿದ್ದಾಗ ಪ್ರಯತ್ನಿಸಿದ್ದೆ. ಅತಿಥಿಯಾಗಿ ಕರೆಯಲು ಪ್ರಯತ್ನಿಸಿದ್ದೆ. ನಮಗೆ ಸಿಗಲಿಲ್ಲ ಅವರು. ನಾನು ಬೆಂಗಳೂರಿಗೆ ಹೋಗಿ ಸಹ ಭೇಟಿಯಾಗಲು ಪ್ರಯತ್ನಿಸಿದೆ. ಆಗಲೂ ಸಹ ಸಿಗಲಿಲ್ಲ. ಅವರು ಒತ್ತಡದಲ್ಲಿದ್ದರು ಅಂತಾ ನಾನೇನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ಅವನ ನಡವಳಿಕೆಗಳು ತೀರಾ ಕೆಟ್ಟಿದ್ದವು. ಹೆಂಡ ಮತ್ತು ಹೆಣ್ಣು ಅವನನ್ನು ಪ್ರಪಾತಕ್ಕೆ ತಳ್ಳಿದೆ. ಹೆಂಡ ಮತ್ತು ಹೆಣ್ಣು ಎರಡೂ ಕೂಡ ಒಬ್ಬ ಮನುಷ್ಯನನ್ನು ಹಾಳು ಮಾಡುತ್ತದೆ. ಅದೇ ರೀತಿ ಇದೇ ಅವನನ್ನು ಹಾಳು ಮಾಡಿದೆ. ತನ್ನ ತಪ್ಪನ್ನು ಅವನು ಒಪ್ಪಿಕೊಳ್ಳಬೇಕು ಎಂದು ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಆಗ್ರಹಿಸಿದರು.
ಮಾತು ಮುಂದುವರಿಸಿದ ಅವರು, ಅವನ ಅಭಿಮಾನಿಗಳಿಗೆ ಕಿವಿಮಾತು. ಅಂಧಾಭಿಮಾನಿಗಳಾಗಬೇಡಿ. ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ಮತ್ತೆ ಟ್ರೋಲ್ ಮಾಡಬೇಡಿ. ಯಾರೋ ಒಬ್ಬರು ದರ್ಶನ್ ಬಗ್ಗೆ ಒಳ್ಳೆಯದು ಕೆಟ್ಟದು ಮಾತನಾಡಿದಾಗ ನೀವು ಟ್ರೋಲ್ ಮಾಡಬೇಡಿ. ದೇವರಲ್ಲಾ ಯಾರೂ ಮನುಷ್ಯರೇ, ನಮ್ಮ ಬಿ.ವಿ ಕಾರಂತರನ್ನು ಕೂಡ ಜೈಲಿಗೆ ಹಾಕಿದ್ದರು. ಸನ್ನಿವೇಶಗಳು ಬರುತ್ತದೆ. ಅವುಗಳನ್ನು ಎದುರಿಸಬೇಕು. ಕಾನೂನಿಗೆ ತಲೆಬಾಗಬೇಕು ಎಂದರು.

ದರ್ಶನ್ ಬದುಕಿಗೆ ಪವಿತ್ರಾ ಗೌಡ ಶನಿಯಾಗಿ ಬಂದಳು-ಅಡ್ಡಂಡ ಕಾರ್ಯಪ್ಪ
ಅವನಿಗೆ ಶನಿಯಾಗಿ ಬಂದಿದ್ದೇ ಪವಿತ್ರಾ ಗೌಡ. ಆಕೆ ದರ್ಶನ್ ಬದುಕಿಗೆ ಶನಿಯಾಗಿ ಬಂದಳು. ಅವಳು ಮದುವೆಯಾಗಿ, ಅವಳಿಗೊಂದು ಮಗು ಇದೆ. ಡಿವೋರ್ಸ್ ಆಗಿ ಅವಳ ಬದುಕನ್ನು ನೋಡಿಕೊಂಡು ಬಂದಳು. ಅವಳು ಗಂಡನನ್ನು ಬಿಟ್ಟು ಬಂದಳು. ಗಂಡನು ಬಿಟ್ಟ. ದರ್ಶನ್ಗೂ ಒಂದು ಹೆಂಡತಿ ಇದ್ದಾಳಲ್ಲ. ಸ್ಫುರದ್ರೂಪಿ ಮಗ ಇದ್ದಾನಲ್ಲ. ಇದು ಖಾಸಗಿ ಲೈಫ್ ಅಂತಾ ಹೇಳ್ತಾರೆ. ಒಬ್ಬ ನಟ ಏನು ಬೇಕಾದರೂ ಮಾಡಬಹುದಾ..? ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications