ರಂಗಶಂಕರದಲ್ಲಿ ನೋಡಿ ಆಂಟನ್ ಚೆಕಾಫ್ 'ಚೆರಿ ತೋಟ'
ಬೆಂಗಳೂರು, ಮೇ.20: ರಂಗಶಂಕರದ ಕನ್ನಡ ನಾಟಕೋತ್ಸವದ ಅಂಗವಾಗಿ ಬೆಂಗಳೂರು ಥಿಯೇಟರ್ ಕಂಪನಿ, ಆಂಟನ್ ಚೆಕಾಫ್ ನ 'ದಿ ಚೆರ್ರಿ ಆರ್ಚರ್ಡ್' ನಾಟಕದ ಕನ್ನಡಾನುವಾದ, ಚೆರ್ರಿ ತೋಟ ನಾಟಕವನ್ನು, ಇದೇ ಮೇ 26 ರ ಸಂಜೆ 7:30 ಕ್ಕೆ ಪ್ರದರ್ಶಿಸುತ್ತದೆ.
ರಷ್ಯಾದ ಮಹಾನ್ ಲೇಖಕ, ನಾಟಕಕಾರ ಆಂಟನ್ ಚೆಕಾಫ್ 1904 ರಲ್ಲಿ ಬರೆದ ತನ್ನ ಕೊನೆಯ ನಾಟಕ 'ದಿ ಚೆರ್ರಿ ಆರ್ಚರ್ಡ್' ವಿಶ್ವದ ಶ್ರೇಷ್ಟ ನಾಟಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಬದಲಾದ ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ತೋರಬಹುದಾದ ಪಲ್ಲಟಗಳು, ಸ್ಥಿತ್ಯಂತರಗಳನ್ನು ಒಂದು ಚೆರ್ರಿ ತೋಟದ ಪ್ರತಿಮೆಯ ಮೂಲಕ ಹೆಣೆದಿರುವ ಚೆಕಾಫ್‌ನ ಈ ನಾಟಕ ತನ್ನ ದೇಶ, ಕಾಲಗಳನ್ನು ಮೀರಿ ಪ್ರಸ್ತುತವಾಗಿದೆ.
ನಾಟಕದ ಬಗ್ಗೆ: ನಾಟಕದ ಕೇಂದ್ರವಾದ ಚೆರ್ರಿ ತೋಟ, ಹಲವು ಪ್ರತಿಮೆಗಳ ಸಂಕೇತವಾಗಿ ಕಾಣುತ್ತದೆ. ಬಾಲ್ಯದ ಸುಂದರ ನೆನಪುಗಳ ಪ್ರತೀಕವಾಗಿ ಒಮ್ಮೆ ಚೆರ್ರಿ ತೋಟ ಕಂಡರೆ, ಪರಿಸರ-ಪೃಕೃತಿಯ ಸುಂದರ ದೃಶ್ಯವಾಗಿ ಕೂಡ ಕಾಣುತ್ತದೆ. ಅಷ್ಟೇ ಅಲ್ಲದೆ, ಶತಮಾನಗಳ ಕಾಲ ಜನಸಮುದಾಯದಲ್ಲಿ ಬೇರು ಬಿಟ್ಟಿರುವ ನಂಬಿಕೆಯಾಗಿ ಕೂಡ ಚೆರ್ರಿ ತೋಟ ಗೋಚರಿಸುತ್ತದೆ.
ಹೀಗೆ ಹಲವು ಧ್ವನಿಗಳನ್ನು, ಹಲವು ಅರ್ಥಗಳನ್ನು ಹೊಮ್ಮಿಸುತ್ತಾ ಸಾಗುವ ನಾಟಕ, ಭಾರತದಂತ ಭಿನ್ನ ವ್ಯವಸ್ಥೆಯಲ್ಲೂ ಪ್ರಸ್ತುತವಾಗಿ ಕಾಣುವ ಮೂಲಕ ಸಾರ್ವಕಾಲಿಕ ಶ್ರೇಷ್ಟ ನಾಟಕವೆಂದೆನಿಸಿಕೊಳ್ಳುತ್ತದೆ.
ಒಂದು ಕಡೆ ಜಮೀನ್ದಾರಿ ಪದ್ದತಿಯ ಪಾಳೇಗಾರೀ ಮೌಲ್ಯಗಳನ್ನು ಉಳಿಸಿಕೊಳ್ಳುತ್ತ, ಪೋಷಿಸುತ್ತಾ, ಮತ್ತೊಂದು ಕಡೆ ಉದಾರೀಕರಣ, ಮುಕ್ತ ಮಾರುಕಟ್ಟೆಯ ಬಂಡವಾಳಷಾಹಿ ವ್ಯವಸ್ಥೆಗೆ ತನ್ನನ್ನು ತೆರೆದುಕೊಳ್ಳುತ್ತ, ಸಮಾಜವಾದದ ಕನಸನ್ನೂ ಕಾಣುತ್ತ ಸಾಗುತ್ತಿರುವ ಭಾರತದ ಪರಿಸ್ಥಿತಿಯಲ್ಲಿ, ಚೆರ್ರಿ ತೋಟವನ್ನು ಗಟ್ಟಿ ಬೇರು ಬಿಟ್ಟ ಸಾಮಾಜಿಕ ವ್ಯವಸ್ಥೆಯೊಂದರ ಪ್ರತೀಕವಾಗಿ ನೋಡಲು ನಾವು ಪ್ರಯತ್ನಿಸಿದ್ದೇವೆ.
ಬೆಂಗಳೂರು ಥಿಯೇಟರ್ ಕಂಪನಿ: ಮೂರು ನಾಲ್ಕು ಗೆಳೆಯರು ಸೇರಿ, ಕನ್ನಡ ರಂಗಭೂಮಿಯಲ್ಲಿ ಉತ್ತಮ ನಾಟಕಗಳ ರಚನೆ, ನಿರ್ಮಾಣ ಮತ್ತು ಕನ್ನಡ ರಂಗಭೂಮಿಯಲ್ಲಿ ವೃತ್ತಿ ಪರತೆ ಮೂಡಿಸುವಲ್ಲಿ ಇಟ್ಟ ಮೊದಲ ಹೆಜ್ಜೆ 'ಬೆಂಗಳೂರು ಥಿಯೇಟರ್ ಕಂಪನಿ'. ಈ ಯುವ ತಂಡದ ಮೊದಲ ಪ್ರಯತ್ನ 'ಚೆರ್ರಿ ತೋಟ'
ಚೆರ್ರಿ ತೋಟ
ಮೂಲ : ಆಂಟನ್ ಚೆಕಾಫ್
ಕನ್ನಡಕ್ಕೆ : ವೆಂಕಟೇಶ್ ಪ್ರಸಾದ್
ಪ್ರಸ್ತುತಿ : ಬೆಂಗಳೂರು ಥಿಯೇಟರ್ ಕಂಪನಿ
ವಿನ್ಯಾಸ ಮತ್ತು ನಿರ್ದೇಶನ : ವೆಂಕಟೇಶ್ ಪ್ರಸಾದ್
ಸ್ಥಳ : ರಂಗಶಂಕರ
ದಿನಾಂಕ ಮತ್ತು ಸಮಯ : 26/05/2015
ಸಂಜೆ 7.30ಕ್ಕೆ
ಟಿಕೆಟ್ ದರ : ರೂ. 100/-
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 99001 82400 ; 99722 55400
ವೆಬ್ ಸೈಟ್ : www.bookmyshow.com.
(ಒನ್ ಇಂಡಿಯಾ ಸುದ್ದಿ)













Click it and Unblock the Notifications