ಬೆಂಗಳೂರಿನಲ್ಲಿ ಮೂರು ದಿನ ಮಳೆ ಸಾಧ್ಯತೆ
ಬೆಂಗಳೂರು, ಅ.9 : ಉದ್ಯಾನನಗರಿ ಬೆಂಗಳೂರಿನಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಬನ್ನೇರುಘಟ್ಟ ಸಮೀಪದ ಅರಕೆರೆಯ ಕೆರೆ ಕಟ್ಟೆ ಒಡೆದುಹೋಗಿದೆ. ನಗರದಲ್ಲಿ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಬುಧವಾರ ಬೆಳಗ್ಗೆ ಸುಮಾರು 5 ಗಂಟೆ ಸುಮಾರಿಗೆ ಬನ್ನೇರುಘಟ್ಟ ಸಮೀಪದ ಅರಕೆರೆಯ ಕಟ್ಟೆ ಒಡೆದು ಹೋಗಿದ್ದು, ಇದರಿಂದಾಗಿ ಕೆರೆಯ ಕೆಳಭಾಗದ ಬಡಾವಣೆಗಳ ರಸ್ತೆಗಳಿಗೆ ನೀರು ನುಗ್ಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.

ಕೆರೆಯ ನೀರು ಮನೆಗಳಿಗೂ ನುಗ್ಗಿದ್ದು, ಜನರು ಮುಂಜಾನೆಯಿಂದ ನೀರನ್ನು ಹೊರಹಾಕಲು ಹರ ಸಾಹಸ ಪಡುತ್ತಿದ್ದಾರೆ. ಕೆರೆಯ ನೀರಿನ ಜೊತೆಗೆ ಚರಂಡಿ ನೀರು ಮನೆಗಳಿಗೆ ನುಗ್ಗಿದ್ದು, ಬಡಾವಣೆಗಳಲ್ಲಿ ಕೆಟ್ಟವಾಸನೆ ಹಬ್ಬಿದೆ. ಆದರೂ, ಸ್ಥಳಕ್ಕೆ ಯಾವುದೇ ಜನಪ್ರತಿನಿಧಿಗಳು ಆಗಮಿಸಿಲ್ಲ.
ಮೂರು ದಿನ ಮಳೆ ಸಾಧ್ಯತೆ : ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಮಳೆ ಮುಂದುದರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮುಂತಾದ ಕಡೆ ಮಂಗಳವಾರ ಬೆಳಗ್ಗೆ ಗುಡುಗುಸಹಿತವಾಗು ಸುಮಾರು ಎರಡು ತಾಸು ಮಳೆ ಸುರಿದಿದೆ. ಕೋಲಾರ ಜಿಲ್ಲೆಯಲ್ಲಿ ಅತ್ಯಧಿಕ 21 ಮಿ.ಮೀ. ಸರಾಸರಿ ಮಳೆ ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 18.9 ಮಿ.ಮೀ. ಮಳೆಯಾಗಿದೆ.
ಒಳನಾಡು ಪ್ರದೇಶದಲ್ಲಿ ಸುಮಾರು ಮೂರು ವಾರಗಳಿಂದ ಶುಷ್ಕ ವಾತಾವರಣ ಇತ್ತು. ಮುಂಗಾರು ಮಾರುತಗಳು ನಿರ್ಗಮನದ ಸಂದರ್ಭದಲ್ಲಿ ಸುತ್ತಲಿನ ತೇವಾಂಶವನ್ನು ಸೆಳೆದುಕೊಂಡಿದ್ದರಿಂದ ಮೋಡಗಳು ಸೃಷ್ಟಿಯಾಗಿವೆ. ಇದು ಮಳೆಗೆ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ












Click it and Unblock the Notifications