Bengaluru Rain: ಬೆಂಗಳೂರಿನಲ್ಲಿ ಸುರಿದ ಮಳೆ ಸೃಷ್ಟಿಸಿದ ಅವಾಂತರಗಳು
ಬೆಂಗಳೂರು, ಆಗಸ್ಟ್ 4: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಸೃಷ್ಟಿಸಿದ ಅವಾಂತರಗಳು ಒಂದೆರೆಡಲ್ಲ. ರಾತ್ರೋರಾತ್ರಿ ಸುರಿದ ಧಾರಾಕಾರ ಮಳೆಗೆ ನಗರದ ಕೆಲವು ಪ್ರದೇಶದ ರಸ್ತೆಗಳಲ್ಲಿ ಸೊಂಟದ ಎತ್ತರಕ್ಕೆ ನೀರು ನಿಂತಿದೆ.
ಬೆಂಗಳೂರಿನ ಹಲವೆಡೆ ಮನೆಗಳು ಜಲಾವೃತಗೊಂಡಿದ್ದರೆ, ರಸ್ತೆ, ಗುಂಡಿಗಳು ಮತ್ತು ಮ್ಯಾನ್‌ಹೋಲ್‌ಗಳು ಆಪತ್ತಿಗಾಗಿ ಬಾಯಿ ತೆರೆದುಕೊಂಡು ಕಾದಿವೆ. ಮಳೆ ದುಸ್ಥಿತಿ ನಿರ್ವಹಣೆಯಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಕೆರಳಿರುವ ನೆಟ್ಟಿಗರು, ತಾವು ಎಂಥ ಸ್ಥಿತಿಯಲ್ಲಿ ಆಶ್ರಯ ಪಡೆಯುತ್ತಿದ್ದೇವೆ ಎಂಬುದನ್ನು ವ್ಯಂಗ್ಯವಾಗಿ ಹೇಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರ ಮತ್ತು ಆಡಳಿತ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಮಾರತ್ ಹಳ್ಳಿಯಲ್ಲಿ ಸತ್ತ ಮೀನುಗಳ ಚಿತ್ರ: ಬೆಂಗಳೂರಿನ ಮಾರತ್ತಹಳ್ಳಿ ಸೇತುವೆಯ ಕೊನೆಗೆ ಹತ್ತಿರದಲ್ಲಿರುವ ಕೆರೆಯಲ್ಲಿ ಸತ್ತಿರುವ ಮೀನುಗಳನ್ನು ಹೊರತೆಗೆದ ಸಾರ್ವಜನಿಕರು ಅದರ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನೊಂದು ಕಡೆ ಔಟರ್ ರಿಂಗ್ ರೋಡ್‌ನಲ್ಲಿ ಪ್ರಯಾಣಿಸುವ ಕಾರ್ಪೊರೇಟ್ ಉದ್ಯೋಗಿಗಳು ತಮ್ಮ ಮನೆಗೆ ವಾಪಸ್ ಹೋಗುವುದಕ್ಕೂ ಪರಿತಪಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ತಮ್ಮ ಆದಾಯ ತೆರಿಗೆ ದುಡ್ಡಿನಲ್ಲಿ ಸಾರ್ವಜನಿಕರನ್ನು ಸಂಕಷ್ಟಕ್ಕೆ ಸಿಲುಕಿಸುವ ನಿಟ್ಟಿನಲ್ಲಿ ಮೂಲಸೌಕರ್ಯಗಳನ್ನು ವಿನ್ಯಾಸಗೊಳಿಸಲು ಸರ್ಕಾರಕ್ಕೆ ನಾಗರಿಕರು ಧನ್ಯವಾದ ತಿಳಿಸುವ ಮೂಲಕ ವ್ಯಂಗ್ಯ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಳೆೆಯ ಅಬ್ಬರ: ಹೊರಮಾವು ಬಳಿಯ ಸಾಯಿ ಲೇಔಟ್, ಚೋಳನಾಯಕನಹಳ್ಳಿ, ರಾಮಮೂರ್ತಿ ನಗರ, ಬಿಳೇಕಹಳ್ಳಿ, ವಿಜಿನಾಪುರ, ಪೈ ಲೇಔಟ್, ಭೀಮಯ್ಯ ಲೇಔಟ್, ಎಚ್‌ಬಿಆರ್ ಲೇಔಟ್, ಆರ್‌ಆರ್ ನಗರ, ಮಾರುತಿ ನಗರ, ಸಹಕಾರನಗರ, ಎಂಎಸ್ ಪಾಳ್ಯ, ಸಾರಾಯಿಪಾಳ್ಯ, ಗ್ರೀನ್‌ಪಾಳ್ಯ, ಗ್ರೀನ್‌ಪಾಳ್ಯ, ಸದಾಶಿವನಗರ ಮತ್ತು ಚಿಕ್ಕಪೇಟೆ, ಫಾತಿಮಾ ಲೇಔಟ್‌ನಲ್ಲಿ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ದೂರುಗಳು ಬಂದಿವೆ.

ಬೆಂಗಳೂರಿನಲ್ಲಿ ಶೇ.124ರಷ್ಟು ಅಧಿಕ ಮಳೆ: ಕಳೆದ ಏಳು ದಿನಗಳಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ವರ್ಷ ಶೇ.124ರಷ್ಟು ಅಧಿಕ ಮಳೆಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಪ್ರಕಾರ, ಜುಲೈ 28 ಮತ್ತು ಆಗಸ್ಟ್ 3ರ ನಡುವೆ 396.2 ಮಿಮೀ ಮಳೆ ದಾಖಲಾಗಿದೆ. ದಕ್ಷಿಣ ಬೆಂಗಳೂರು ಈ ಅವಧಿಯಲ್ಲಿ 168.5 ಮಿಮೀ ಮಳೆಯಾಗಿದ್ದರೆ, ಸಾಮಾನ್ಯ ಪ್ರದೇಶಗಳಲ್ಲಿ 38.3 ಮಿ. ಮೀ. ವಿರುದ್ಧ ಮಳೆಯಾಗಿದೆ.












Click it and Unblock the Notifications