ವರುಣನ ಹೊಡೆತಕ್ಕೆ ಬೆಂಗಳೂರು ನಿವಾಸಿಗಳು ತತ್ತರ: ಹೇಗಿದೆ ಇಂದಿನ ಸಿಲಿಕಾನ್ ಸಿಟಿ ಸ್ಥಿತಿ..?
ಬೆಂಗಳೂರು, ಸೆಪ್ಟೆಂಬರ್ 09: ಗುರುವಾರ ಮುಂಜಾನೆಯಿಂದ ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣ ಬೆಂಗಳೂರಿಗರಿಗೆ ಕೊಂಚ ನೆಮ್ಮದಿ ತಂದಿದೆ. ಹಿಂದಿನ ದಿನ ಮಳೆ ಸ್ವಲ್ಪ ಬಿಡುವು ಪಡೆದುಕೊಂಡಿದ್ದರಿಂದ ಜಲಾವೃತ ಪ್ರದೇಶಗಳಲ್ಲಿ ನೀರಿನ ಮಟ್ಟ ನಿಧಾನವಾಗಿ ಕಡಿಮೆಯಾಗಿದೆ. ಜಲಾವೃತಗೊಂಡ ಪ್ರದೇಶಗಳು ಮತ್ತು ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ನೀರನ್ನು ಹೊರಹಾಕಲು ಮತ್ತು ತಮ್ಮ ಮನೆ ಹಾಗೂ ನೆಲಮಾಳಿಗೆಯಿಂದ ಕೆಸರು ತೆಗೆಯಲು ಪ್ರಯತ್ನಿಸುತ್ತಿದ್ದಾರೆ.
ಹಾನಿಯನ್ನು ಸರಿಪಡಿಸುವ ಮೂಲಕ ಪೂರೈಕೆಯನ್ನು ಪುನಃಸ್ಥಾಪಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿರುವಾಗಲೂ ಕೆಲವು ಕೆಟ್ಟ ಪೀಡಿತ ಪ್ರದೇಶಗಳು ಕುಡಿಯುವ ನೀರು ಮತ್ತು ವಿದ್ಯುತ್ ಸರಬರಾಜು ಲಭ್ಯತೆಯಿಲ್ಲದೆ ಕತ್ತಲೆಯಲ್ಲಿಯೇ ಉಳಿದಿವೆ. ರಾಜಧಾನಿಯಲ್ಲಿ ಇನ್ನೂ ಎರಡು ದಿನ ಮಳೆ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಜನರ ಜೀವನಕ್ಕೆ ಐದಾರು ದಿನಗಳಿಂದ ಸುರಿಯುತ್ತಿರುವ ಮಳೆ ಕೊಳ್ಳಿ ಇಟ್ಟಿದೆ. ಜನರ ಬದುಕು ಬದುಕು ಮೂರಾಬಟ್ಟಿಯಾಗಿದೆ. ವಿಲ್ಲಾಗಳು ಕೆಸರು ಮಯವಾಗಿವೆ. ಕೆಲಸಕ್ಕೂ ಸಾಗಲಾಗದೆ ಮನೆಯಲ್ಲೂ ಇರಲಾಗದೆ ವರುಣನ ಹೊಡೆತಕ್ಕೆ ಜನ ನರಕ ಅನುಭವಿಸುವಂತಾಗಿದೆ. ಮನೆಗಳಿಗೆ ಮಳೆಯಾಸೂರು ದಾಳಿ ಮಾಡಿ ಜನ ಇನ್ನಿಲ್ಲಂದಂತೆ ಪರದಾಡುವಂತಾಗಿದೆ.

ಮನೆಗಳಿಗೆ ಮಳೆಯಾಸೂರು ದಾಳಿ
ಸದ್ಯ ನಗರದ ಬಹುತೇಕ ಭಾಗಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನಗಳ ಸುಗಮ ಸಂಚಾರಕ್ಕೆ ದಾರಿ ಮಾಡಲಾಗುತ್ತಿದೆ. ಹೊರ ವರ್ತುಲ ರಸ್ತೆ ಮತ್ತು ಮಾರತ್ತಹಳ್ಳಿ ಮತ್ತು ಸಮೀಪದ ಪ್ರದೇಶಗಳಲ್ಲಿ ಇನ್ನೂ ಕೆಲವೆಡೆ ನೀರಿನಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ, ಹೊಂಡಗಳು ನಗರದ ವಾಹನ ಸವಾರರನ್ನು ಅದರಲ್ಲೂ ದ್ವಿಚಕ್ರ ವಾಹನ ಸವಾರರನ್ನು ಕಾಡುತ್ತಲೇ ಇವೆ.
ಪ್ರವಾಹ ಪೀಡಿತ ಪ್ರದೇಶಗಳು ಮತ್ತು ಅಪಾರ್ಟ್‌ಮೆಂಟ್‌ಗಳ ಕೆಲವು ನಿವಾಸಿಗಳು, ಸಂಬಂಧಿಕರು ಅಥವಾ ಸ್ನೇಹಿತರ ಸ್ಥಳಗಳು ಅಥವಾ ಹೋಟೆಲ್‌ಗಳಂತಹ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಇನ್ನೂ ಕೆಲವರು ಶುಚಿಗೊಳಿಸುವ ಕಾರ್ಯವನ್ನು ಮಾಡುವ ಮೂಲಕ ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ.

'ಮತ್ತೆ ಮಳೆಯಾಗದೇಯಿದ್ದರೆ ಸಾಕು'
"ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರಿಂದ, ನಾನು ನನ್ನ ಮನೆಯನ್ನು ಪರೀಕ್ಷಿಸಲು ಮತ್ತು ಅದನ್ನು ಸ್ವಚ್ಛಗೊಳಿಸಲು ಬಂದಿದ್ದೇನೆ. ಆದರೆ ನೀರನ್ನು ತೆಗೆದುಹಾಕಲು ಪಂಪ್‌ಗಳ ಕೊರತೆಯಿದೆ. ಏಕೆಂದರೆ ಅವುಗಳಿಗೆ ಹಾಗೂ ಕೆಸರು ತೆಗೆಯಲು ಕಾರ್ಮಿಕರಿಗೆ ಈಗ ಉತ್ತಮ ಬೇಡಿಕೆಯಿದೆ. ವಿದ್ಯುತ್ ಕಡಿತವೂ ಇದೆ. ನಾವು ಇನ್ನೂ ಹೆಚ್ಚು ಮಳೆಯನ್ನು ನಿರೀಕ್ಷಿಸುವುದಿಲ್ಲ" ಎಂದು ಯೆಮಲೂರು ಬಳಿಯ ನಿವಾಸಿಯೊಬ್ಬರು ಹೇಳಿದ್ದಾರೆ.
ಮಾರತ್ತಹಳ್ಳಿಯ ಮತ್ತೋರ್ವ ನಿವಾಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದು, ಇದೇ ರೀತಿಯ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ, ಇನ್ನು ಮುಂದೆ ಭಾರಿ ಮಳೆಯಾಗುವುದಿಲ್ಲ ಎಂದು ಭಾವಿಸುತ್ತೇವೆ, ಆದರೂ ಬೆಳಗ್ಗೆಯಿಂದ ಮೋಡ ಮತ್ತು ತುಂತುರು ಮಳೆಯಾಗಿದೆ. ಪ್ರವಾಹದ ನೀರಿನಲ್ಲಿ ನೆಲಮಾಳಿಗೆಯಲ್ಲಿ ಮುಳುಗಿರುವ ಅಪಾರ್ಟ್‌ಮೆಂಟ್‌ಗಳ ಜನರೇಟರ್‌ಗಳು ಮತ್ತು ಪವರ್ ಬ್ಯಾಕ್‌ಅಪ್ ಉಪಕರಣಗಳು ಬಹುತೇಕ ಹಾನಿಗೊಳಗಾಗಿವೆ. ಅಲ್ಲದೆ, ಅಧಿಕಾರಿಗಳ ಪ್ರಕಾರ ನೆಲಮಾಳಿಗೆಯಲ್ಲಿ ಇನ್ನೂ ಜಲಾವೃತವಾಗಿರುವ ಅಪಾರ್ಟ್‌ಮೆಂಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡುವುದು ಸುರಕ್ಷಿತವಲ್ಲ.

ಸಚಿವರ ಮುಂದೆ ಅಳಲು ತೋಡಿಕೊಂಡ ಟೆಕ್ ಕಂಪನಿಗಳು
ಪ್ರವಾಹದ ಕಾರಣದಿಂದಾಗಿ ಭಾಗಶಃ ಅಥವಾ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುವ ಕಾರುಗಳು ಮತ್ತು ಬೈಕ್‌ಗಳಂತಹ ತಮ್ಮ ವಾಹನಗಳನ್ನು ಸ್ವಚ್ಚಗೊಳಿಸುವ ಕಾರ್ಯದಲ್ಲಿ ಮಾಲೀಕರು ಪ್ರಯತ್ನಿಸುತ್ತಿರುವುದು ಈ ಪ್ರದೇಶಗಳ ಭಾಗಗಳಲ್ಲಿ ಸಾಮಾನ್ಯ ದೃಶ್ಯವಾಗಿದೆ. ಮುಂದಿನ 48 ಗಂಟೆಗಳ ಕಾಲ ನಗರದಲ್ಲಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇನ್ನೂ ಮುಂದಿನ ಎರಡು ದಿನಗಳವರೆಗೆ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಇತ್ತೀಚೆಗೆ ಉಂಟಾಗಿರುವ ಪ್ರವಾಹದ ಸಂಕಷ್ಟಕ್ಕೆ ಸಿಲುಕಿರುವ ತಂತ್ರಜ್ಞಾನ ಕಂಪನಿಗಳು ಬುಧವಾರ ಕರ್ನಾಟಕ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದು, ಮಳೆ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಟೆಕ್ ಕಂಪನಿಗಳಿಗೆ ಸಚಿವರ ಭರವಸೆ
ಅಭೂತಪೂರ್ವ ಮಳೆಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಸಚಿವ ಅಶ್ವಥ್ ನಾರಾಯಣ್ ಅವರು ಕರೆದ ಸಭೆಯಲ್ಲಿ, ಹಲವಾರು ಐಟಿ ಕಂಪನಿಗಳ ಪ್ರತಿನಿಧಿಗಳು ತಾವು ಎದುರಿಸುತ್ತಿರುವ ಸಂಕಷ್ಟಗಳು ಮತ್ತು ಆಗಿರುವ ನಷ್ಟವನ್ನು ಹೇಳಿಕೊಂಡರು. ಇದಕ್ಕೆ ಉತ್ತರಿಸಿದ ಸಚಿವರು, ಮುಂದಿನ ವರ್ಷದ ವೇಳೆಗೆ ಮಹದೇವಪುರ ವಲಯದಲ್ಲಿನ ಮೂಲಸೌಕರ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ನೆರವಾಗಲಿದೆ ಎಂದು ಭರವಸೆ ನೀಡಿದರು.
"ಬೆಂಗಳೂರು ಬ್ರಾಂಡ್" ಸ್ಥಾನಮಾನವನ್ನು ಉಳಿಸಿಕೊಳ್ಳಲು ನಾರಾಯಣ್ ಅವರು ಟೆಕ್ ಕಂಪನಿಗಳ ಸಹಕಾರವನ್ನು ಕೋರಿದರು. ಇನ್ನು ಮುಂದೆ ಪ್ರತಿ ತಿಂಗಳು ಉದ್ಯಮಿಗಳ ಕುಂದುಕೊರತೆಗಳನ್ನು ಪರಿಹರಿಸಲು ವರ್ಚುವಲ್ ಸಭೆ ನಡೆಸಲಾಗುವುದು," ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ. ಧಾರಾಕಾರ ಮಳೆ ಮತ್ತು ಪ್ರವಾಹವು ರಾಜಧಾನಿ ನಗರದಲ್ಲಿನ ಟೆಕ್ ಕಾರಿಡಾರ್ ಮೇಲೆ ಪರಿಣಾಮ ಬೀರಿದ ದಿನಗಳ ನಂತರ ಸಭೆಯು ನಡೆದಿತ್ತು. ಗೋಲ್ಡ್‌ಮನ್ ಸ್ಯಾಕ್ಸ್, ಇನ್ಫೋಸಿಸ್, ವೆಲ್ಸ್ ಫಾರ್ಗೋ, ವಿಪ್ರೋ, ಎಂಫಾಸಿಸ್, ಇಂಟೆಲ್, ಟಿಸಿಎಸ್, ಅಕ್ಸೆಂಚರ್, ಸೊನಾಟಾ ಸಾಫ್ಟ್‌ವೇರ್, ಫಿಲಿಪ್ಸ್, ಸೊಲೇಸ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications