Bengaluru Rains : ಮುಂದಿನ ಮೂರು ದಿನ ಬೆಂಗಳೂರು ಕೂಲ್ ಕೂಲ್: ಮುಂದುವರೆಯುತ್ತೆ ವರುಣನ ಅರ್ಭಟ
ಬೆಂಗಳೂರು ಏಪ್ರಿಲ್ 4: ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ಸಿಲಿಕಾನ್ ಸಿಟಿ ಮಂದಿಗೆ ವರುಣ ತಂಪೆರೆದಿದ್ದಾನೆ. ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಬೆಂಗಳೂರು ಇಂದು ಕೂಲ್ ಕೂಲ್ ಆಗಿದೆ. ಇದರೊಂದಿಗೆ ನಗರದಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.
ಮಧ್ಯಾಹ್ನ ಬಿಸಿಲಿನ ಝಳಕ್ಕೆ ಬೆವರಿಳಿಸಿದ ಜನರಿಗೆ ಮಳೆರಾಯ ಸಂಜೆ ಹೊತ್ತಿಗೆ ಮಳೆ ಸುರಿಸಿ ಸ್ನಾನ ಮಾಡಿಸಿದ್ದಾನೆ. ನಿನ್ನೆ ಸಂಜೆ ನಗರದೆಲ್ಲೆಡೆ ಸುರಿದ ದಿಢೀರ್ ಮಳೆಯಿಂದಾಗಿ ವಾಹನ ಸಂಚಾರ ದಟ್ಟವಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ವಾಹನ ಸವಾರರು ಕಿರಿಕಿರಿಯನ್ನು ಅನುಭವಿಸುವಂತಾಯಿತು.

ವಿಜಯನಗರ, ರಾಜಾಜಿನಗರ, ಶಿವಾನಂದ ಸರ್ಕಲ್, ಮಲ್ಲೇಶ್ವರಂ, ವಿದ್ಯಾರಣ್ಯಪುರ, ಯಶವಂತಪುರ, ಕುರುಬರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಕೆ ಆರ್ ಮಾರ್ಕೆಟ್ , ಕಾರ್ಪೊರೇಷನ್, ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಮಳೆ ಸುರಿದಿದೆ.
ಎಚ್ಎಎಲ್ನಲ್ಲಿ 33.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 34.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 34.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಇನ್ನು ಚಾಮರಾಜನಗರದಲ್ಲಿ 1 ಸೆಂ. ಮೀ ಮಳೆ ಆಗಿರುವುದು ವರದಿ ಆಗಿದೆ. ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಉಳಿದಂತೆ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೈಸೂರು ಚಾಮರಾಜನಗರದಲ್ಲೂ ಮಳೆ
ಮೈಸೂರು ಮತ್ತು ಚಾಮರಾಜನಗರ ಅವಳಿ ಜಿಲ್ಲೆಗಳಲ್ಲಿ ಈ ವಾರ ಸುರಿದ ಮುಂಗಾರು ಪೂರ್ವ ಮಳೆ ಬೇಸರ ಮತ್ತು ಸಂತೋಷ ಎರಡನ್ನೂ ತಂದಿದೆ. ಅಕಾಲಿಕ ಮಳೆ ಬೆಳೆದು ನಿಂತಿದ್ದ ಹಲವಾರು ಬೆಳೆಗಳಿಗೆ ನೀರೆರಿದ್ದರೂ, ಬಿರುಗಾಳಿ ಸಹಿತ ಮಳೆಯಿಂದಾಗಿ ಬಾಳೆ, ತೋಟದ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಆದರೆ ಹಲವೆಡೆಯಾದ ತುಂತುರು ಮಳೆ ಅರಣ್ಯವಾಸಿಗಳಿಗೆ ನೆಮ್ಮದಿಯನ್ನು ತಂದಿದೆ. ಏಕೆಂದರೆ ಇದು ಕಾಡ್ಗಿಚ್ಚನ್ನು ನಿಭಾಯಿಸಲು ಸಹಾಯ ಮಾಡಿದೆ.
ಮುಂದಿನ ಮೂರು ದಿನ ರಾಜ್ಯದಲ್ಲಿ ಮಳೆ
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಾಮರಾಜನಗರ, ರಾಮನಗರ ಮತ್ತು ಕೋಲಾರ, ಕೊಡಗು, ಮೈಸೂರು ಜಿಲ್ಲೆಗಳ ಹಲವೆಡೆ ದಿನ ಬಿಟ್ಟು ದಿನ ಮುಂದಿನ ಏಪ್ರಿಲ್ 8ರವರೆಗೆ ಮಳೆ ಬರಲಿದೆ. ಇಷ್ಟು ಜಿಲ್ಲೆಗಳಲ್ಲಿ ನಿತ್ಯ ಬಿಸಿಲಿನ ದರ್ಶನವಿದ್ದರೂ ಸಹಿತ ಮಬ್ಬು ವಾತಾವರಣವು ಕಂಡು ಬರಲಿದೆ. ಸಂಜೆ ವೇಳೆಗೆ ಬಿಸಿಲು ಮರೆಯಾಗಿ ಗುಡುಗು ಮಿಂಚು ಸಹಿತ ಜೋರು ಮಳೆ ಅಬ್ಬರಿಸಲಿದೆ. ಗಾಳಿಯು ಸಹ ಈ ಅವಧಿಯಲ್ಲಿ ವೇಗವಾಗಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಕೇಂದ್ರ ಮಾಹಿತಿ ನೀಡಿದೆ.

ಏಪ್ರಿಲ್ 6 ರಿಂದ ಮೂರು ದಿನ ಉತ್ತರ ಒಳನಾಡಿನ ಬೀದರ್, ಬಾಗಲಕೋಟೆ, ಬೆಳಗಾವಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹಗುರ ಇಲ್ಲವೇ ಸಾಧಾರಣವಾಗಿ ಮಳೆ ಸುರಿಯಲಿದೆ. ಇನ್ನೂ ಕರಾವಳಿ ಭಾಗದಲ್ಲಿ ಏಪ್ರಿಲ್ 7ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಮಳೆ ಬಂದರೆ, ಮರುದಿನ ಏಪ್ರಿಲ್ 8 ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ವರುಣನ ದರ್ಶನವಾಗಲಿದೆ.












Click it and Unblock the Notifications