ಬೆಂಗಳೂರಿನಲ್ಲೂ ಸಂಚರಿಸಲಿದೆ ಸಬ್ ಅರ್ಬನ್ ರೈಲು

ಶನಿವಾರ ಬಾಣಸವಾಡಿ ರೈಲು ನಿಲ್ದಾಣದಲ್ಲಿ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಖರ್ಗೆ, ರೈಲು ವಿಕಾಸ ನಿಗಮ ಸ್ಥಾಪಿಸುವ ಕುರಿತು ಭಾರತೀಯ ರೈಲು ತಂತ್ರಜ್ಞಾನ ಮತ್ತು ಆರ್ಥಿಕ ಸೇವೆಗಳ (ರೈಟ್ಸ್) ಸಂಸ್ಥೆ ಈಗಾಗಲೇ ವರದಿ ಸಿದ್ಧಪಡಿಸಿದೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಪಾಲುದಾರಿಕೆಯಲ್ಲಿ ಈ ವಿಕಾಸ ನಿಗಮ ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಸುಮಾರು, 10,000 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಮುಂಬೈ ರೈಲು ವಿಕಾಸ ನಿಗಮದ ಮಾದರಿಯಲ್ಲಿ ಈ ಯೋಜನೆ ಜಾರಿಯಾಗಲಿದೆ ಎಂದರು.
ಹೊಸ ಯೋಜನೆ ಘೋಷಣೆ ಇಲ್ಲ : ಫೆ.12ರಂದು ಮಂಡಿಸಲಿರುವ ರೈಲ್ವೆ ಬಜೆಟ್ ಬಗ್ಗೆ ಮಾಹಿತಿ ನೀಡಿದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ತಾವು ಪೂರ್ಣ ಪ್ರಮಾಣದ ರೈಲ್ವೆ ಬಜೆಟ್ ಮಂಡಿಸುತ್ತಿಲ್ಲ, ಲೇಖಾನುದಾನ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದರು.
ಲೇಖಾನುದಾನ ಮಂಡಿಸುವುದರಿಂದ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಕಡಿಮೆ ಇದೆ. ಸ್ಥಗಿತಗೊಂಡ ಯೋಜನೆಗಳಿಗೆ ಮರುಜೀವ ನೀಡಲು ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದರು. [ಖರ್ಗೆಯನ್ನು ಎರಡು ಹೆಜ್ಜೆ ನಡೆಸಿದ ಇಬ್ಬರ ಅಮಾನತು]
ಯೋಜನೆಗಳಿಗೆ ಭೂಮಿ ಅಗತ್ಯವಿದೆ : ಕರ್ನಾಟಕದಲ್ಲಿ 16 ಯೋಜನೆಗಳಿಗೆ ಭೂಮಿಯ ಅಗತ್ಯವಿದೆ ಎಂದು ಖರ್ಗೆ ಹೇಳಿದ್ದಾರೆ. ರಾಜ್ಯದಲ್ಲಿ 23,125 ಕೋಟಿ ರೂ. ವೆಚ್ಚದ 26 ರೈಲ್ವೆ ಯೋಜನೆಗಳು ಅನುಷ್ಠಾನದ ವಿವಿಧ ಹಂತದಲ್ಲಿವೆ. ಇವುಗಳಲ್ಲಿ 16 ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲುದಾರಿಕೆಯಲ್ಲಿ ನುಷ್ಠಾನಗೊಳ್ಳುತ್ತಿದ್ದು, ಇದಕ್ಕೆ ಅಗತ್ಯವಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.
ರಾಜ್ಯಕ್ಕೆ 10 ರೈಲು ಕೊಡುಗೆ : ರೈಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಕರ್ನಾಟಕಕ್ಕೆ ಹತ್ತು ಹೊಸ ರೈಲುಗಳನ್ನು ಕೊಡುಯಾಗಿ ನೀಡಲಾಗಿದೆ. ಮಾರ್ಚ್ ಅಂತ್ಯದೊಳಗೆ ಇನ್ನಷ್ಟು ಹೊಸ ರೈಲುಗಳ ಸಂಚಾರ ಆರಂಭವಾಗುವ ಸಾಧ್ಯತೆಯಿದೆ ಎಂದರು.












Click it and Unblock the Notifications