Bengaluru Traffic: ರಾಗಿಗುಡ್ಡ ಡಬಲ್ ಡೆಕ್ಕರ್ ಫ್ಲೈ ಓವರ್ ಕ್ಲೋಸ್, ಟ್ರಾಫಿಕ್ ಜಾಮ್
ಬೆಂಗಳೂರು, ಫೆಬ್ರವರಿ 12: ಬೆಂಗಳೂರು ನಗರದ ವಿವಿಧ ಭಾಗದಲ್ಲಿ ಬುಧವಾರ ಭಾರೀ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿದೆ. ವಿವಿಧ ಕಾರ್ಯಕ್ರಮ, ಕಾಮಗಾರಿಗಳ ಕಾರಣ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಬೆಂಗಳೂರು ನಗರ ಸಂಚಾರಿ ಪೊಲೀಸರು ರಾಗಿಗುಡ್ಡ-ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವಿನ ಡಬಲ್ ಡೆಕ್ಕರ್ ಫ್ಲೈ ಓವರ್ ಮುಚ್ಚಿದ್ದಾರೆ.
ಈ ಕುರಿತು ಸಂಚಾರಿ ಪೊಲೀಸರು ಸಾಮಾಜಿಕ ಜಾಲತಾದಲ್ಲಿ ಮಾಹಿತಿ ನೀಡಿದ್ದು, ವಾಹನ ಸವಾರರು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಬೆಳಗ್ಗೆ ಫ್ಲೈ ಓವರ್‌ನಲ್ಲಿ ಹೆಚ್.ಎಸ್.ಆರ್ ಲೇಔಟ್ ಕಡೆ ಹೋಗುವ ಮಾರ್ಗ ಮುಚ್ಚಲಾಗಿತ್ತು. ಈಗ ಸಂಪೂರ್ಣ ಫ್ಲೈ ಓವರ್ ಬಂದ್ ಮಾಡಲಾಗಿದೆ. ಫ್ಲೈ ಓವರ್ ಮೂಲಕ ಸಾಗುವ, ಅಕ್ಕಪಕ್ಕದ ಮಾರ್ಗದಲ್ಲಿ ಸಂಚಾರ ನಡೆಸುವ ವಾಹನ ಸವಾರರು ಈ ಬಗ್ಗೆ ತಿಳಿದು ಸಂಚಾರ ನಡೆಸಲು ಮನವಿ ಮಾಡಲಾಗಿದೆ.

'ಸಂಚಾರಿ ಪೊಲೀಸರು ಹೆಚ್.ಎಸ್.ಆರ್ 14 ನೇ ಮುಖ್ಯ ರಸ್ತೆಯಲ್ಲಿ ಬಿಎಂಆರ್‌ಸಿಎಲ್‌ನ ಲಾಂಚಿಂಗ್ ಗಿರ್ಡರ್‌ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ರಾಗಿಗುಡ್ಡ ಡಬಲ್ ಡೆಕ್ಕರ್ ರಸ್ತೆಯನ್ನು ಮುಚ್ಚಲಾಗಿದ್ದು, ದಯವಿಟ್ಟು ಸಹಕರಿಸಿ' ಎಂದು ಪೋಸ್ಟ್ ಹಾಕಿದ್ದಾರೆ.
ಡಬಲ್ ಡೆಕ್ಕರ್ ಫ್ಲೈ ಓವರ್‌ನಲ್ಲಿ ಒಂದು ಕಡೆ ಮಾತ್ರ ವಾಹನಗಳು ಸಂಚಾರ ನಡೆಸುತ್ತಿವೆ. ಈ ಫ್ಲೈ ಓವರ್‌ನ ಮೇಲೆ ಆರ್. ವಿ. ರಸ್ತೆ-ಬೊಮ್ಮಸಂದ್ರ (ನಮ್ಮ ಮೆಟ್ರೋ ಹಳದಿ) ಮೆಟ್ರೋ ರೈಲು ಹಾದು ಹೋಗುತ್ತದೆ. ಮಾರ್ಗದಲ್ಲಿ ಇನ್ನೂ ರೈಲು ಸಂಚಾರ ಆರಂಭವಾಗಿಲ್ಲ. ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿವೆ.
ಸಂಚಾರಿ ಪೊಲೀಸರು ಇಂದು ಬೆಳಗ್ಗೆ ಬಿಎಂಆರ್‌ಸಿಎಲ್ ಲಾಂಚಿಂಗ್ ಗಿರ್ಡರ್‌ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ, ಹೊರ ವರ್ತುಲ ರಸ್ತೆಯ ಮೇಲ್ಸೇತುವೆಯ ಹೆಚ್.ಎಸ್.ಆರ್. ಲೇಔಟ್ 14 ನೇ ಮುಖ್ಯ ರಸ್ತೆಯಿಂದ 19ನೇ ಮುಖ್ಯ ರಸ್ತೆಯ ಎರಡೂ ದಿಕ್ಕುಗಳಲ್ಲಿ ಸಂಚಾರಕ್ಕೆ ಮುಚ್ಚಲಾಗಿದೆ. ಅದು ದುರಸ್ತಿಯಾಗುವವರೆಗೆ ಎರಡೂ ದಿಕ್ಕಿನ ಸರ್ವೀಸ್ ರಸ್ತೆಯಲ್ಲಿ ಮಾತ್ರ ವಾಹನಗಳನ್ನು ಬಿಡಲಾಗುತ್ತದೆ. ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಲಿದೆ ಎಂದು ಹೇಳಿದ್ದರು.
ರಾಗಿಗುಡ್ಡ ಡಬಲ್ ಡೆಕ್ಕರ್ ಫ್ಲೈ ಓವರ್‌ನ ಒಂದು ರಸ್ತೆ ಹೆಚ್. ಎಸ್. ಆರ್. ಲೇಔಟ್ ಕಡೆಗೆ ಸಾಗುತ್ತದೆ. ಆದ್ದರಿಂದ ಆಗುವ ವಾಹನ ದಟ್ಟಣೆಯನ್ನು ತಡೆಯಲು ಈಗ ಫ್ಲೈ ಓವರ್ ಮುಚ್ಚಲಾಗಿದ್ದು, ಜಯನಗರದಿಂದ ಬಿಟಿಎಂ, ಸಿಲ್ಕ್ ಬೋರ್ಡ್ ಕಡೆ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
ಮತ್ತೊಂದು ಕಡೆ ವಿವಿಧ ಕಾರ್ಯಕ್ರಮಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಏಷ್ಯಾದ ಅತಿದೊಡ್ಡ ವಾಯುಯಾನ ಪ್ರದರ್ಶನವಾದ ಏರೋ ಇಂಡಿಯಾ 2025 ಸಿಲಿಕಾನ್ ಸಿಟಿಯಾದ ಬೆಂಗಳೂರಿನಲ್ಲಿ ನಡೆಯುತ್ತಿದೆ.
ಏರೋ ಇಂಡಿಯಾದ 15ನೇ ಆವೃತ್ತಿಗೆ ಈಗಾಗಲೇ ಚಾಲನೆ ಸಿಕ್ಕಿದೆ. ಫೆಬ್ರವರಿ 14ರ ತನಕ ಯಲಹಂಕ ವಾಯುನೆಲೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಆದ್ದರಿಂದ ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಆರಂಭವಾಗಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 'ಇನ್ವೆಸ್ಟ್ ಕರ್ನಾಟಕ 2025'ರಲ್ಲಿಯೂ ಪಾಲ್ಗೊಳ್ಳಲು ಅನೇಕ ಜನರು ತೆರಳುತ್ತಿದ್ದು, ಸಂಚಾರ ಸಮಸ್ಯೆ ಇದೆ.












Click it and Unblock the Notifications