ಕಸ ವಿಚಾರವಾಗಿ ಜಗಳ: ನಿವೃತ್ತ ಎಎಸ್ಐ ಮತ್ತು ಕುಟುಂಬದ ವಿರುದ್ಧ ಎಫ್ಐಆರ್
ಬೆಂಗಳೂರು, ಫೆ. 17: ಕಸ ಹಾಕುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದಿರುವ ಮಾರಾಮಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಪ್ರಕರಣ ಸಂಬಂಧ ನಿವೃತ್ತ ಎಎಸ್ಐ ಅವರ ಮತ್ತು ಕುಟುಂಬ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪೀಣ್ಯದ ಚನ್ನನಾಯಕನಪಾಳ್ಯದಲ್ಲಿ ಅನಿತಾ ಎಂಬುವರು ಮೂರು ವರ್ಷದ ಹಿಂದೆ ಗಾರ್ಮೆಂಟ್ಸ್ ತೆಗೆದಿದ್ದರು. ಗಾರ್ಮೆಂಟ್ಸ್‌ಗೆ ಹೊಂದಿಕೊಂಡಂತೆ ಎಎಸ್ಐ ಅವರ ಖಾಲಿ ನಿವೇಶನವಿತ್ತು. ಗಾರ್ಮೆಂಟ್ಸ್ ಪ್ರಾರಂಭವಾದ ಬಳಿಕ ನಿವೃತ್ತ ಎಎಸ್ಐ ಮನೆ ಮುಂದೆ ಸ್ಥಳೀಯರು ಕಸ ಹಾಕುತ್ತಿದ್ದರು. ಇದರಿಂದ ಕುಪಿತಗೊಂಡಿದ್ದ ಎಎಸ್ಐ ಕಸ ಹಾಕುವರ ಮೇಲೆ ಜಗಳ ಮಾಡುತ್ತಿದ್ದರು.
ಮಾರಾಮಾರಿ: ಗಾರ್ಮೆಂಟ್ಸ್‌ನಿಂದ ನಮ್ಮ ಖಾಲಿ ನಿವೇಶನದಲ್ಲಿ ಕಸ ತುಂಬಲಾಗುತ್ತಿದೆ ಎಂದು ಆರೋಪಿಸಿ ಇತ್ತೀಚೆಗೆ ನಿವೃತ್ತ ಎಎಸ್ಐ ಜವರೇಗೌಡ, ಪುತ್ರ ಆನಂದ್ ಮತ್ತು ಮಗಳು ಕೋಮಲ ಜಗಳ ಮಾಡಿದ್ದಾರೆ. ಮನೆ ಎದುರೇ ಗಾರ್ಮೆಂಟ್ಸ್ ಮಾಲಕಿ ಅನಿತಾರನ್ನು ಎಳೆದಾಡಿ ಹಲ್ಲೆ ಮಾಡಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಇದರ ನಡುವೆ ಗಾರ್ಮೆಂಟ್ಸ್ ಮಾಲಕಿ ಅನಿತಾ ಮಂತ್ರಾಲಯಕ್ಕೆ ತೆರಳಿದ್ದರು. ಈ ವೇಳೆ ಗಾರ್ಮೆಂಟ್ಸ್ ಮುಂದೆ ನಿಂಬೆಹಣ್ಣು ಮತ್ತು ಅರಶಿನ, ಕುಂಕುಮ ಹಾಕಿ ವಾಮಾಚಾರ ಮಾಡಲಾಗದೆ. ಇದೇ ವಿಚಾರವಾಗಿ ಪುನಃ ಅನಿತಾ ಮೇಲೆ ಜಗಳ ನಡೆದಿದ್ದು, ಜವರೇಗೌಡ ಕುಟುಂಬ ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ. ಇದರಿಂದ ನೊಂದ ಅನಿತಾ ಪೀಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನಾಧರಿಸಿ ನಿವೃತ್ತ ಎಎಸ್ಐ ಜವರೇಗೌಡ ಮತ್ತು ಕುಟುಂಬ ಸದಸ್ಯರ ವಿರುದ್ಧ ಎಫ್ಐಅರ್ ದಾಖಲಾಗಿದೆ.
ಈ ನಡುವೆ ಗಾರ್ಮೆಂಟ್ಸ್ ಅನ್ನು ಬೇರಡೆ ಶಿಫ್ಟ್ ಮಾಡಲು ಅನಿತಾ ತಯಾರಿ ನಡೆಸಿದ್ದು ಇದರ ನಡುವೆಯೂ ಕಸ ಹಾಕುವ ವಿಚಾರವಾಗಿ ನಿರಂತರ ಜಗಳ ನಡೆದಿದೆ. ಕಸದ ವಿಚಾರವಾಗಿ ನಡೆದ ಜಗಳ ಇದೀಗ ವಾಮಾಚಾರದವರೆಗೂ ತಲುಪಿ ಠಾಣಾ ಮೆಟ್ಟಿಲೇರಿದೆ.
ತಂದೆಯ ತಿಥಿ ದಿನವೇ ಮಗಳ ಸಾವು:
ತಂದೆಯ ಪುಣ್ಯ ತಿಥಿ ದಿನವೇ ಗ್ಯಾಸ್ ಸೋರಿಕೆಯಾಗಿ ಮಗಳು ಸಾವನ್ನಪ್ಪಿರುವ ದಾರುಣ ಘಟನೆ ಕುಮಾರಸ್ವಾಮಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಂದೆಯ ತಿಥಿ ಕಾರ್ಯಕ್ಕೆ ಮಾಂಸದ ಊಟ ತಯಾರಿಸಲು ಅಡುಗೆ ಸಿಲಿಂಡರ್ ಅನ್ನು ಕುಟುಂಬಸ್ಥರು ತರಿಸಿದ್ದರು. ಚಿಕ್ಕ ಮನೆಯಲ್ಲಿಯೇ ಅಡುಗೆ ಸಿಲಿಂಡರ್ ಇಟ್ಟು ಅಡುಗೆ ತಯಾರಿ ಮಾಡಲಾಗುತ್ತಿತ್ತು. ಈ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟಿಸಿದೆ. ಪರಮೇಶ್ವರಿ (42) ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಉಳಿದ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಮಾರಸ್ವಾಮಿ ಬಡಾವಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.












Click it and Unblock the Notifications