ಶ್ರೀರಾಮನವಮಿ ಪ್ರಯುಕ್ತ ಬೆಂಗಳೂರಿನ ತ್ಯಾಗರಾಜನಗರದಲ್ಲಿ ಅಪರೂಪದ ‘ಪುಷ್ಪಯಾಗ’
ಬೆಂಗಳೂರು: ಶ್ರೀ ರಾಮನವಮಿಯ ಪವಿತ್ರ ದಿನವಾದ ಮಾರ್ಚ್ 27ರಂದು ನಗರದ ತ್ಯಾಗರಾಜನಗರದಲ್ಲಿರುವ ಸುಮಾರು 150 ವರ್ಷಗಳ ಇತಿಹಾಸವುಳ್ಳ ಶ್ರೀ ಅಭಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ (ಶ್ರೀವಜ್ರಕ್ಷೇತ್ರ) ಅತ್ಯಂತ ಅಪರೂಪದ 'ಪುಷ್ಪಯಾಗ' ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಭಗವಂತನಿಗೆ ಅತ್ಯಂತ ಪ್ರಿಯವಾದ ವಿವಿಧ ಬಗೆಯ ಸುವಾಸಿತ ಪುಷ್ಪಗಳನ್ನು ಸಮರ್ಪಿಸುವ ಮೂಲಕ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸುವುದು ಈ ಯಾಗದ ವಿಶೇಷತೆಯಾಗಿದೆ.
ಪುಷ್ಪಯಾಗ ಎಂದರೆ ಸಾಮಾನ್ಯವಾಗಿ ಯಜ್ಞಕುಂಡಕ್ಕೆ ಹೂವುಗಳನ್ನು ಅರ್ಪಿಸುವುದಲ್ಲ, ಬದಲಾಗಿ ಶಾಸ್ತ್ರೋಕ್ತವಾಗಿ ಮಂತ್ರಪೂರ್ವಕವಾಗಿ ಭಗವಂತನಿಗೆ ವಿವಿಧ ಪುಷ್ಪಗಳನ್ನು ಸಮರ್ಪಿಸುವ ಒಂದು ವಿಶಿಷ್ಟ ಪದ್ಧತಿ. ನಾವು ಮಾಡುವ ಎಲ್ಲ ಕಾರ್ಯಗಳೂ ಹೂವಿನ ಹಾರ ಎತ್ತಿದಂತೆ ಸುಲಭವಾಗಿ ಸಿದ್ಧಿಸಲಿ ಎಂಬ ಸಂಕಲ್ಪದೊಂದಿಗೆ ಈ ಪೂಜೆಯನ್ನು ನಡೆಸಲಾಗುತ್ತದೆ. ಭಕ್ತಿಯಿಂದ ಅರ್ಪಿಸುವ ಪ್ರತಿಯೊಂದು ಹೂವು ಇಲ್ಲಿ ಸುವರ್ಣ ಪುಷ್ಪಕ್ಕೆ ಸಮಾನ ಎಂಬ ನಂಬಿಕೆಯಿದ್ದು, ಇದು ಭಕ್ತರಲ್ಲಿ ವಿಶೇಷ ಆಧ್ಯಾತ್ಮಿಕ ಸಂತೃಪ್ತಿಯನ್ನು ನೀಡುತ್ತದೆ.

ಈ ಪುಷ್ಪಯಾಗದಲ್ಲಿ ಕಮಲ, ಕುಮುದ, ಕೇದಗೆ, ಮರುಗ, ದವನ, ತುಳಸಿ, ಮಲ್ಲಿಗೆ, ಸೇವಂತಿಗೆ ಮತ್ತು ಗುಲಾಬಿ ಸೇರಿದಂತೆ ಅಸಂಖ್ಯಾತ ಸುಗಂಧ ಭರಿತ ಪುಷ್ಪಗಳನ್ನು ಬಳಸಲಾಗುತ್ತದೆ. ಜಗನ್ನಾಥದಾಸರ 'ಹರಿಕಥಾಮೃತಸಾರಾ' ಕೃತಿಯಲ್ಲಿ ಉಲ್ಲೇಖಿಸಿರುವಂತೆ, ವಿಭಿನ್ನ ಪುಷ್ಪಗಳಲ್ಲಿ ವಿಭಿನ್ನ ದೇವರುಗಳು ವಾಸಿಸುತ್ತಾರೆ ಎಂಬ ತತ್ವದ ಆಧಾರದ ಮೇಲೆ ಈ ಪೂಜಾ ಕೈಂಕರ್ಯ ನಡೆಯಲಿದೆ. ಐದು ವಿಭಿನ್ನ ಬಣ್ಣಗಳ ಹೂವಿನ ರಾಶಿಗೆ ವಿಶೇಷ ಪೂಜೆ ಮತ್ತು ಅರ್ಚನೆ ಮಾಡಿ, ನಂತರ ಅದನ್ನು ಪಟ್ಟಾಭಿ ರಾಮನಿಗೆ ಅರ್ಪಿಸಲಾಗುತ್ತದೆ.
ಕ್ಷೇತ್ರದಲ್ಲಿ ಪ್ರತಿ ವರ್ಷ ರಾಮನವಮಿಯ ದಿನ ಬೇರೆ ಬೇರೆ ಬಗೆಯ ಪುಷ್ಪಗಳಿಂದ ಯಾಗವನ್ನು ಮಾಡುತ್ತೇವೆ. ಇದರ್ಥ ಯಾಗದ ಕುಂಡಕ್ಕೆ ಹೂವನ್ನು ಅರ್ಪಿಸುವುದಿಲ್ಲ. ಇದನ್ನು ಮಂತ್ರಪೂರ್ವಕವಾಗಿ ಭಗವಂತನಿಗೆ ಅರ್ಪಿಸಲಾಗುತ್ತದೆ. ಇದರಿಂದ ಮಹತ್ವದ ಫಲವೂ ಲಭಿಸುತ್ತದೆ. ನಾವು ಭಕ್ತಿಯಿಂದ ಅರ್ಪಿಸುವ ಒಂದೊಂದು ಪುಷ್ಪವೂ ಸುವರ್ಣ ಪುಷ್ಪಕ್ಕೆ ಸಮ. ಐದು ಬಣ್ಣಗಳ ಹೂವಿನ ರಾಶಿಗೆ ಪೂಜೆ, ಅರ್ಚನೆ ಮಾಡಿ ಪಟ್ಟಾಭಿರಾಮನಿಗೆ ಅರ್ಪಿಸಲಾಗುವುದು. ಇದೊಂದು ರೀತಿ ಕೆರೆಯ ನೀರನು ಕೆರೆಗೆ ಚೆಲ್ಲಿದಂತೆ. ಭಗವಂತ ನಮಗೆ ದಯಪಾಲಿಸಿದ ಅನನ್ಯ ರೀತಿಯ ಪುಷ್ಪಗಳನ್ನು ಮತ್ತೆ ಅವನಿಗೆ ಸಮರ್ಪಿಸುವ ಯಜ್ಞವಿದು ಎನ್ನುತ್ತಾರೆ ದೇವಸ್ಥಾನದ ಆಡಳಿತ ಮಂಡಳಿಯ ಡಾ. ವಾದಿರಾಜ್ ಆಚಾರ್.
ಪುಷ್ಪಯಾಗ ನಡೆಯುವ ಸ್ಥಳ
ಶ್ರೀ ಅಭಯ ಲಕ್ಷ್ಮೀನರಸಿಂಹ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ತ್ಯಾಗರಾಜನಗರದ 7ನೇ ಅಡ್ಡ ರಸ್ತೆಯಲ್ಲಿರುವ ದೇವಸ್ಥಾನದ ಆವರಣದಲ್ಲಿ ಜರುಗಲಿದೆ. ಈ ಸುಂದರ ಕಾರ್ಯಕ್ರಮದ ವೀಕ್ಷಣೆ ಹಾಗೂ ಚಿತ್ರೀಕರಣಕ್ಕೆ ಭಕ್ತರಿಗೆ ಮತ್ತು ಮಾಧ್ಯಮಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಭಕ್ತರು ದೇವಸ್ಥಾನದ ಪದಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. (ಮೊಬೈಲ್ ಸಂಖ್ಯೆ: ವಾದಿರಾಜ್ ಆಚಾರ್ 9448850552/ ನರಹರಿ ಆಚಾರ್ 7019475877)












Click it and Unblock the Notifications