ತಂತ್ರಾಂಶದಲ್ಲಿ ಕನ್ನಡ ಲಿಪಿಗಳಿಗೆ ಹೊಸತನ ನೀಡಲು ಲಿಪಿ ವಿನ್ಯಾಸಕಾರರು ಕೈಜೋಡಿಸಿ: KDA
ಬೆಂಗಳೂರು, ಫೆಬ್ರವರಿ 03: ಕನ್ನಡ ತಂತ್ರಾಂಶ ಲಿಪಿ ವಿನ್ಯಾಸದಲ್ಲಿ ವೈವಿಧ್ಯತೆ ಇಂದಿನ ಅಗತ್ಯವಾಗಿದ್ದು ಆಧುನಿಕ ಕಾಲಕಾಲಕ್ಕೆ ಹೊಂದಿಕೊಳ್ಳದೇ ಹೋದಲ್ಲಿ ಕನ್ನಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು, ಲಿಪಿ ವಿನ್ಯಾಸ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪರಿಣಿತರು ಪ್ರಾಧಿಕಾರದೊಂದಿಗೆ ಕೈ ಜೋಡಿಸಿ ಎಂದು ಕೋರಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಕನ್ನಡದಲ್ಲಿ ಹೊಸ ಲಿಪಿ ಅಭಿವೃದ್ಧಿಪಡಿಸುವ ಕುರಿತಾದ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಕನ್ನಡದಲ್ಲಿ ಹಲವಾರು ತಾಂತ್ರಿಕ ಪರಿಣಿತರು ಯುನಿಕೋಡ್ ನಲ್ಲಿ ವಿವಿಧ ಮಾದರಿಗಳ ಕನ್ನಡ ಲಿಪಿಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇವೆಲ್ಲವೂ ಸಾರ್ವಜನಿಕರಿಗೆ ಲಭ್ಯವಾದಲ್ಲಿ ಕನ್ನಡ ಲಿಪಿಗಳಿಗೆ ವೈವಿಧ್ಯತೆ ದೊರಕುವುದಿದ್ದು ತಂತ್ರಾಂಶದಲ್ಲಿ ಕನ್ನಡದ ಬಳಕೆ ಗಮನಾರ್ಹವಾಗಿ ಹೆಚ್ಚುತ್ತದೆ.

ಜನ ಸ್ನೇಹಿಯಾದ ಲಿಪಿಗಳ ವಿನ್ಯಾಸದ ಅಭಿವೃದ್ಧಿಯನ್ನು, ತಂತ್ರಾಂಶ ವ್ಯವಸ್ಥೆಯನ್ನು ಪೋಷಿಸುವ ಜವಾಬ್ದಾರಿ ಸರ್ಕಾರದ ಮೇಲಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈ ಹೊಣೆಗಾರಿಕೆಯನ್ನು ನಿರ್ವಹಿಸಲಿದೆ. ಲಿಪಿ ವಿನ್ಯಾಸ ಅಭಿವೃದ್ಧಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಪರಿಣಿತರು ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಕೈ ಜೋಡಿಸಬಹುದು ಎಂದು ಅವರು ಆಹ್ವಾನಿಸಿದ್ದಾರೆ.
ಕನ್ನಡ ಲಿಪಿ: ರಾಜ್ಯ ಸರ್ಕಾರಕ್ಕೆ ವರದಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಾಲತಾಣಗಳಲ್ಲಿ 2017ರಲ್ಲಿ ಏಕರೂಪ ಶಿಷ್ಟತೆಯ ವರದಿಯನ್ನು ಸಲ್ಲಿಸಿ ಗಮನಾರ್ಹ ಕೆಲಸ ಮಾಡಲಾಗಿದೆ. ಆಂಗ್ಲಭಾಷೆಯಲ್ಲಿ ಭಾವನೆಗಳನ್ನು ಕೂಡಾ ಲಿಪಿಯ ಮೂಲಕ ವ್ಯಕ್ತಪಡಿಸುವ ಅವಕಾಶ ಇದೆ. ಮೊಬೈಲ್ ತಂತ್ರಾಂಶ, ಕ್ಲೌಡ್ ತಂತ್ರಾಂಶಗಳಲ್ಲಿಯೂ ಹೊಸ ವಿನ್ಯಾಸಗಳ ಕನ್ನಡ ಲಿಪಿ ಬೇಕಿದೆ.

ಕನ್ನಡದ ಕೀಲಿಮಣೆಯ ವಿನ್ಯಾಸದಲ್ಲಿಯೂ ಒಂದು ಸಮಾನತೆ ಬೇಕಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಒಂದು ಸಂಹಿತೆಯನ್ನೇ ರೂಪಿಸಬೇಕಿದೆ. ಈ ಕುರಿತಂತೆ ಸಮಿತಿಯು ಸರ್ಕಾರಕ್ಕೆ ಶೀಘ್ರವೇ ಸಮಗ್ರ ವರದಿ ಸಲ್ಲಿಸಲಿದೆ ಎಂದು ಅವರು ವಿವರಿಸಿದರು.
ಸಭೆಯಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಪರಿಣಿತರಾದ ಜಿ.ಎನ್.ಮೋಹನ್, ಮಧು ವೈ.ಎನ್, ಮಂಜುನಾಥ ಆರ್. ಆರ್., ಎನ್.ರವಿಕುಮಾರ್ ಮತ್ತು ಡಾ.ಸಂತೋಷ ಹಾನಗಲ್ಲ ಮತ್ತಿತರರು ಹಾಜರಿದ್ದರು.
ಫೆ.7-9ವರೆಗೆ ಕನ್ನಡ ಪ್ರವೇಶ, ಕಾವ, ಜಾಣ ಪರೀಕ್ಷೆ
ಈ ವರ್ಷ ಕನ್ನಡ ಸಾಹಿತ್ಯ ಪರಿಷತ್ತು 2024-25ರ ಸಾಲಿನ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳನ್ನು ಇದೇ ವರ್ಷ ಫೆಬ್ರವರಿ 7ರಿಂದ 9ರವರೆಗೆ ಒಟ್ಟು ಮೂರು ದಿನಗಳ ಕಾಲ ರಾಜ್ಯದ 18 ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.
ಅರ್ಹ ಅಭ್ಯರ್ಥಿಗಳಿಗೆ ಮೇಲ್ಕಂಡ ಪರೀಕ್ಷೆಗಳ ಪ್ರವೇಶ ಪತ್ರಗಳನ್ನು ನೊಂದಾಯಿತ ಅಂಚೆ ಮೂಲಕ ಕಳುಹಿಸಲಾಗಿದೆ. ಫೆ.1ರ ನಂತರ ಪ್ರವೇಶ ಪತ್ರ ತಲುಪದಿದ್ದರೆ ಈ ಬಗ್ಗೆ ಅಭ್ಯರ್ಥಿಗಳು ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-೧೮ ಇಲ್ಲಿ ವಿಚಾರಿಸಬಹುದು. 080 26612991, 26623584 ಕ್ಕೆ ಸಂಪರ್ಕಿಸಬೇಕು.
ಅಭ್ಯರ್ಥಿಗಳು ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಗಳ ವಿಳಾಸವನ್ನು ಅಂತರ್ಜಾಲ ತಾಣ www.kasapa.in ಮೂಲಕ ಪಡೆದುಕೊಳ್ಳಬಹುದು ಎಂದು ಕಸಾಪ ಪ್ರಕಟಣೆ ತಿಳಿಸಿದೆ.
ಜನ ಸಾಮಾನ್ಯರಲ್ಲಿ ಅದರಲ್ಲಿಯೂ ವಿಶೇಷವಾಗಿ ಕನ್ನಡ ಯುವಜನತೆಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಆಸಕ್ತಿ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಬಿ.ಎಂ.ಶ್ರೀಯವರು ರೂಪಿಸಿದ ಮುಖ್ಯ ಯೋಜನೆ ಕನ್ನಡ ಸಾಹಿತ್ಯ ಪರೀಕ್ಷೆಗಳು. 1940ರ ಜೂನ್ ತಿಂಗಳಿನಿಂದ 'ಕನ್ನಡ ಅಣುಗ', ಕನ್ನಡ ಕಾವ, ಕನ್ನಡ ಜಾಣ ಪರೀಕ್ಷೆಗಳು ಆರಂಭವಾದವು.
1948ರಲ್ಲಿ 'ಅಣುಗ'ವನ್ನು ಕೈ ಬಿಡಲಾಯಿತು. 1966ರಲ್ಲಿ 'ಕನ್ನಡ ರತ್ನ' ಪರೀಕ್ಷೆ ಆರಂಭವಾಗಿದೆ. 1992ರಲ್ಲಿ ಕನ್ನಡ ಪ್ರವೇಶ ಆರಂಭವಾಯಿತು. ಈ ಎಲ್ಲಾ ಪರೀಕ್ಷೆಗಳು ಲಕ್ಷಾಂತರ ಕನ್ನಡಿಗರಲ್ಲಿ ಭಾಷೆ ಮತ್ತು ಸಾಹಿತ್ಯದ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications