• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಡಿನ ಯುವ ಜನರಿಗೆ ಪುನೀತ್ ಎಂದಿಗೂ ದಾರಿದೀಪ: ಸಿದ್ದರಾಮಯ್ಯ

|
Google Oneindia Kannada News

ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ನುಡಿನಮನ ಅರ್ಪಿಸುವ ಸಲುವಾಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ "ಪುನೀತ ನಮನ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುನೀತ್ ಬಗ್ಗೆ ದೀರ್ಘವಾಗಿ ಭಾಷಣ ಮಾಡಿ ತಮ್ಮ ಮನದಾಳ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಭಾಷಣದ ಪೂರ್ಣಪಾಠ ಇಲ್ಲಿದೆ...

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಡಾ|| ರಾಜ್‌ಕುಮಾರ್ ಅವರ ಕುಟುಂಬ ಸದಸ್ಯರು, ದಕ್ಷಿಣ ಭಾರತ ಚಿತ್ರರಂಗದ ನಟ, ನಟಿಯರು, ರಾಜ್ಯ ಸರ್ಕಾರದ ಸಚಿವರು, ಶಾಸಕರು, ಅಪಾರ ಸಂಖ್ಯೆಯ ಅಭಿಮಾನಿಗಳು ಭಾಗವಹಿಸಿದ್ದರು.

ಮುಂದೊಂದು ದಿನ ನಾವೆಲ್ಲಾ ಇಂಥದ್ದೊಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುತ್ತದೆ ಎಂಬ ನಿರೀಕ್ಷೆಯನ್ನೇ ನಾನು ಮಾಡಿರಲಿಲ್ಲ. ಪುನೀತ್ ಅವರು ಬಹುಬೇಗ ನಮ್ಮನ್ನೆಲ್ಲ ಅಗಲಿದ್ದಾರೆ. ನಟನೊಬ್ಬ ಅಗಲಿದಾಗ ಸಹಜವಾಗಿ ಆತನ ಅಭಿಮಾನಿಗಳು ದುಃಖ ವ್ಯಕ್ತಪಡಿಸುತ್ತಾರೆ, ಆದರೆ ಪುನೀತ್ ಅವರು ನಿಧನರಾದಾಗ ಇಡೀ ರಾಜ್ಯದಲ್ಲಿ ಎಲ್ಲರೂ ತಮ್ಮ ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡಂತೆ ನೋವು ಅನುಭವಿಸಿದ್ದಾರೆ. ಎಲ್ಲರಿಗೂ ಇಂತಹಾ ಗೌರವ, ಪ್ರೀತಿ ಸಿಗುವುದು ಕಡಿಮೆ. ಇದರಿಂದ ಪುನೀತ್ ಅವರು ಕನ್ನಡ ನಾಡಿನ ಜನರ ಹೃದಯಕ್ಕೆ ಎಷ್ಟು ಆತ್ಮೀಯರಾಗಿದ್ದರು ಎಂಬುದು ಕಂಡುಬರುತ್ತಿದೆ.

ನಿಧನದ ಸುದ್ದಿ ಕೇಳಿದಾಗ ನಾನು ಮೊದಲು ನಂಬಲಿಲ್ಲ

ನಿಧನದ ಸುದ್ದಿ ಕೇಳಿದಾಗ ನಾನು ಮೊದಲು ನಂಬಲಿಲ್ಲ

ಪುನೀತ್ ಅವರು ಕೇವಲ ಒಬ್ಬ ನಟನಾಗಿ ಅಷ್ಟೇ ಅಲ್ಲದೆ ನಯ, ವಿನಯ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಅಪರೂಪದ ವ್ಯಕ್ತಿಯಾದುದ್ದರಿಂದ ನಾಡಿನ ಪ್ರತಿಯೊಬ್ಬರ ಮನಸು ಗೆಲ್ಲಲು ಸಾಧ್ಯವಾಯಿತು. ಪುನೀತ್ ಅವರ ನಿಧನದ ಸುದ್ದಿ ಕೇಳಿದಾಗ ನಾನು ಮೊದಲು ನಂಬಲಿಲ್ಲ. ಅಷ್ಟೊಂದು ಗಟ್ಟಿಮುಟ್ಟಾದ, ದೇಹದಾಡ್ಯತೆ ಹೊಂದಿದ್ದ ವ್ಯಕ್ತಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿಧನರಾಗಲು ಹೇಗೆ ಸಾಧ್ಯ ಎಂದು ದಿಗ್ಭ್ರಮೆಯಾಯಿತು. ಅವರ ಸಾವಿನ ಸುದ್ದಿ ನಿಜವೆಂದು ಖಾತ್ರಿಯಾದಾಗ ನನ್ನ ಮನೆಯ ಸದಸ್ಯರೊಬ್ಬರನ್ನು ಕಳೆದುಕೊಂಡಷ್ಟು ದುಃಖ ಮನಸನ್ನು ಆವರಿಸಿತ್ತು.

ರಾಜ್ ಕುಮಾರ್ ಕುಟುಂಬದೊಂದಿಗೆ ತುಂಬಾ ಆತ್ಮೀಯ ಸಂಬಂಧ

ರಾಜ್ ಕುಮಾರ್ ಕುಟುಂಬದೊಂದಿಗೆ ತುಂಬಾ ಆತ್ಮೀಯ ಸಂಬಂಧ

ನನಗೆ ಮೊದಲಿಂದಲೂ ದಿವಂಗತ ರಾಜ್ ಕುಮಾರ್ ಅವರ ಕುಟುಂಬದೊಂದಿಗೆ ತುಂಬಾ ಆತ್ಮೀಯ ಸಂಬಂಧವಿದೆ. ರಾಜ್ ಕುಮಾರ್ ಅವರು ನಮ್ಮ ಮೈಸೂರು, ಚಾಮರಾಜನಗರ ಜಿಲ್ಲೆಯವರು. ನನ್ನನ್ನು ಯಾವಾಗ ಕಂಡರೂ ನಮ್ಮ ಕಾಡಿನವರು ನೀವು, ಬನ್ನಿ, ಬನ್ನಿ ಎಂದು ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು, ಉಪಚರಿಸುತ್ತಿದ್ದರು. ರಾಜ್ ಕುಮಾರ್ ಅವರ ಸರಳತೆ, ವಿನಯತೆ, ಸಜ್ಜನಿಕೆ, ಪ್ರೀತಿ, ವಿಶ್ವಾಸ ತೋರುವ ರೀತಿ ಇವೆಲ್ಲ ಅವರ ಕುಟುಂಬದ ಎಲ್ಲರಲ್ಲೂ ಇದ್ದರೂ, ಪುನೀತ್ ಅವರಲ್ಲಿ ವಿಶೇಷವಾಗಿ ಅವರ ನಗು ಮುಖದಲ್ಲಿ ಎದ್ದು ಕಾಣುತ್ತಿತ್ತು.

ನನ್ನನ್ನು ಯಾವಾಗಲೂ ಮಾಮ ಎಂದು ಪ್ರೀತಿಯಿಂದ ಕರೆಯುತ್ತಿದ್ದರು

ನನ್ನನ್ನು ಯಾವಾಗಲೂ ಮಾಮ ಎಂದು ಪ್ರೀತಿಯಿಂದ ಕರೆಯುತ್ತಿದ್ದರು

ಪುನೀತ್ ಅವರು ನನ್ನನ್ನು ಯಾವಾಗಲೂ ಮಾಮ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಅವರು ಒಮ್ಮೆ ಮೈಸೂರಿನಲ್ಲಿ ಸಿಕ್ಕಾಗ ಮಾಮ ರಾಜಕುಮಾರ ಸಿನೆಮಾ ಬಿಡುಗಡೆ ಆಗಿದೆ, ನೀವು ನೋಡಲೇಬೇಕು ಎಂದರು. ನಾನು ವಿದ್ಯಾರ್ಥಿ ಆಗಿದ್ದಾಗ, ವಕೀಲನಾಗಿದ್ದಾಗ ಚಿತ್ರಮಂದಿರಗಳಲ್ಲಿ ರಾಜ್ ಕುಮಾರ್ ಅವರ ಚಿತ್ರಗಳನ್ನು ನೋಡುತ್ತಿದ್ದೆ, ಆದರೆ ಸಕ್ರಿಯ ರಾಜಕೀಯಕ್ಕೆ ಬಂದ ಮೇಲೆ ಚಿತ್ರಮಂದಿರಕ್ಕೆ ಹೋಗಿ ಚಲನಚಿತ್ರ ನೋಡೋದು ಬಿಟ್ಟಿದ್ದೆ. ಪುನೀತ್ ಅವರ ಮಾತನ್ನು ಗೌರವಿಸಿ ಮೈಸೂರಿನ ಸರಸ್ವತಿ ಚಿತ್ರಮಂದಿರದಲ್ಲಿ ರಾಜಕುಮಾರ ಸಿನಿಮಾ ನೋಡಿದೆ. ಅತ್ಯಂತ ಅದ್ಭುತವಾಗಿ ನಟಿಸಿದ್ದರು, ಅವರ ನಟನೆ ಈಗಲೂ ಕಣ್ಣಮುಂದಿದೆ.

ಪುನೀತ್ ಅವರು ಕೇವಲ ಸಿನಿಮಾ ರಂಗಕ್ಕೆ ಸೀಮಿತವಲ್ಲ

ಪುನೀತ್ ಅವರು ಕೇವಲ ಸಿನಿಮಾ ರಂಗಕ್ಕೆ ಸೀಮಿತವಲ್ಲ

ಪುನೀತ್ ಅವರು ಕೇವಲ ಸಿನಿಮಾ ರಂಗಕ್ಕೆ ಸೀಮಿತವಾಗಿರದೆ ಸಾಮಾಜಿಕ ಕ್ಷೇತ್ರದಲ್ಲೂ ಸೇವೆ ಮಾಡುತ್ತಿದ್ದರು. ಸರ್ಕಾರದ ಅನೇಕ ಇಲಾಖೆಗಳ ಹಲವು ಕಾರ್ಯಕ್ರಮಗಳ ಪ್ರಚಾರಕರಾಗಿ ಕೆಲಸ ಮಾಡಿ, ಜನರಿಗೆ ಪರಿಣಾಮಕಾರಿಯಾಗಿ ಮಾಹಿತಿ ತಲುಪಿಸುವ ಕೆಲಸ ಮಾಡುತ್ತಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜ್ ಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜ್‍ಕುಮಾರ್ ಅವರು ಶಕ್ತಿಧಾಮದಲ್ಲಿ ಆಯೋಜಿಸುತ್ತಿದ್ದ ಕಾರ್ಯಕ್ರಮಗಳಿಗೆ ನನಗೆ ಆಹ್ವಾನ ನೀಡಿ, ಭಾಗವಹಿಸಲು ಅವಕಾಶ ಮಾಡಿಕೊಡುತ್ತಿದ್ದರು. ಅಶಕ್ತರಾಗಿರುವ ಮಹಿಳೆಯರಿಗೆ, ಮಕ್ಕಳಿಗೆ ಆಸರೆಯಾಗಿರುವ ಶಕ್ತಿಧಾಮವನ್ನು ರಾಜ್ ಕುಮಾರ್ ಅವರ ಕುಟುಂಬ ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ.

ಪುನೀತ್ ರಾಜ್‍ಕುಮಾರ್ ಅವರ ಸರಳತೆ, ವಿನಯ

ಪುನೀತ್ ರಾಜ್‍ಕುಮಾರ್ ಅವರ ಸರಳತೆ, ವಿನಯ

ಒಬ್ಬ ನಟ ನಿಧನರಾದಾಗ ಕರ್ನಾಟಕದ ಕೋಟ್ಯಂತರ ಜನರೆಲ್ಲರೂ ಈ ರೀತಿ ಕಣ್ಣೀರು ಹಾಕಿದ್ದನ್ನು ನಾನು ನನ್ನ ಜೀವನದಲ್ಲೇ ಕಂಡಿರಲಿಲ್ಲ. ಇಷ್ಟು ಬೇಗ ಪುನೀತ್ ಅವರು ನಮ್ಮನ್ನು ಅಗಲಬಾರದಿತ್ತು. ಸಮಾಜಕ್ಕೆ ಸೇವೆ ಮಾಡುವ ಅವಕಾಶ ಅವರಿಗೆ ಇನ್ನು ಸಾಕಷ್ಟು ಇತ್ತು. ಆದರೆ ವಿಧಿಯಾಟ ಯಾರಿಂದಲೂ ತಪ್ಪಿಸಲು ಆಗಲ್ಲ, ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ ದೊಡ್ಡ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ. ಅದು ನಾಡಿನ ಯುವ ಜನರಿಗೆ ದಾರಿದೀಪವಾಗಲಿದೆ. ಪುನೀತ್ ರಾಜ್‍ಕುಮಾರ್ ಅವರ ಸರಳತೆ, ವಿನಯ, ಸಾಮಾಜಿಕ ಸೇವೆಯ ಗುಣಗಳನ್ನು ನಾವು ಅಳವಡಿಸಿಕೊಳ್ಳಲು ಪ್ರಯತ್ನಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂಬುದು ನನ್ನ ಭಾವನೆ.

ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ಕೊಡಬೇಕು

ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ಕೊಡಬೇಕು

ರಾಜ್ಯ ಸರ್ಕಾರ ಪುನೀತ್ ಅವರಿಗೆ ಕರ್ನಾಟಕ ರತ್ನ ಬಿರುದನ್ನು ನೀಡಲು ತೀರ್ಮಾನ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅವರ ಈ ನಿರ್ಧಾರ ಸ್ವಾಗತಾರ್ಹವಾದುದ್ದು. ಅದೇ ರೀತಿ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ಕೊಡಬೇಕು ಎಂದು ಈ ಹಿಂದೆಯೇ ಒತ್ತಾಯ ಮಾಡಿದ್ದೆ. ಈ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವರು ಇರುವುದರಿಂದ ಅವರು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಷ್ಟೇ ಅಲ್ಲದೆ, ಪ್ರಶಸ್ತಿ ಕೊಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ.

ಮೇರು ವ್ಯಕ್ತಿತ್ವ ಹೊಂದಿದ್ದರು

ಮೇರು ವ್ಯಕ್ತಿತ್ವ ಹೊಂದಿದ್ದರು

ರಾಜ್ ಕುಮಾರ್ ಅವರು ಮೂರು ಜನ ಮಕ್ಕಳನ್ನು ನೋಡಿದಾಗ ರಾಜ್ ಕುಮಾರ್ ಅವರನ್ನು ನೋಡಿದ ಹಾಗೆ ಅನಿಸುತ್ತದೆ. ತಂದೆಯ ಎಲ್ಲಾ ಗುಣಗಳನ್ನು ಮಕ್ಕಳು ಅಳವಡಿಸಿಕೊಂಡಿದ್ದಾರೆ. ರಾಜ್ ಕುಮಾರ್ ಅವರು ತಮ್ಮ ಅಭಿಮಾನಿಗಳನ್ನು ಅಭಿಮಾನಿ ದೇವರು ಎಂದು ಕರೆಯುವ ಮೂಲಕ ವಿಶೇಷ ಸ್ಥಾನವನ್ನು ನೀಡಿದ್ದರು. ಕೆಲವು ನಟರ ಚಲನಚಿತ್ರ ನಟನೆ ಹಾಗೂ ನಿಜ ಜೀವನ ಸ್ವಲ್ಪ ಭಿನ್ನವಾಗಿರುತ್ತದೆ, ಆದರೆ ರಾಜ್ ಕುಮಾರ್ ಅವರು ಸಿನೆಮಾ ರಂಗ ಮತ್ತು ನಿಜ ಜೀವನ ಎರಡೂ ಕಡೆ ಒಂದೇ ರೀತಿಯ ಮೇರು ವ್ಯಕ್ತಿತ್ವ ಹೊಂದಿದ್ದರು ಎಂಬುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಪುನೀತ್ ಅವರ ಸಾವಿನಿಂದ ಕನ್ನಡ ನಾಡು ಮತ್ತು ಚಿತ್ರರಂಗ ದುಃಖತಪ್ತವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಕರುಣಿಸಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ.

   Bangalore Weather Forecast - ಇನ್ನೂ ಮೂರು ದಿನ ಮಳೆ | Oneindia Kannada
   English summary
   Puneeth Namana event: Former CM Siddaramaiah praised actor Puneeth Rajkumar, Here is Full Speech detail.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X