BDA: ಬೆಂಗಳೂರಲ್ಲಿ ಸ್ವಂತ ಮನೆ ಕಟ್ಟಿಸುವವರಿಗೆ ಎದುರಾಯ್ತು ದೊಡ್ಡ ಸಮಸ್ಯೆ
ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಕಟ್ಟಿಕೊಳ್ಳಬೇಕು ಎನ್ನುವುದು ಹಲವರ ಕನಸು. ಇದಕ್ಕಾಗಿ ಕೆಲವರು ಮೈತುಂಬಾ ಸಾಲ ಮಾಡಿಕೊಂಡರೂ ಕನಸು ನನಸಾಗಲು ಅದೆಷ್ಟೋ ವರ್ಷಗಳು ಕಾಯಬೇಕು. ಆದರೆ, ಬೆಂಗಳೂರಿನಲ್ಲಿ ಸ್ವಂತ ಸೈಟ್ ಖರೀದಿಸಿದರೂ ಅದರಲ್ಲಿ ಮನೆ ಕಟ್ಟಿಕೊಳ್ಳಲು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೆಂಗಳೂರಿಗರಿಂದ ದೂರು ಕೇಳಿಬರುತ್ತಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ( ಬಿಡಿಎ) ಕಟ್ಟಡ ನಕ್ಷೆ ಅನುಮೋದನೆ ಪಡೆಯಲು ಪರದಾಡುವಂತಾಗಿದೆ ಎಂದು ಹೇಳಲಾಗುತ್ತಿದೆ. ತಮ್ಮ ಸ್ವಂತ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು ಸಾರ್ವಜನಿಕರು ತಿಂಗಳುಗಟ್ಟಲೆ ಕಾಯುವ ಅನಿವಾರ್ಯತೆ ಎದುರಾಗಿದೆ ಎಂದು ದೂರುಗಳು ಕೇಳಿಬರುತ್ತಿವೆ.

ಇನ್ನು ಬಿಡಿಎ ಕಟ್ಟಡ ನಕ್ಷೆ ಅನುಮೋದನೆಗೆ ಸೂಕ್ತ ಆನ್‌ಲೈನ್ ವ್ಯವಸ್ಥೆ ಇಲ್ಲ ಎಂದು ಹೇಳಲಾಗುತ್ತಿದೆ. ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸದವರಿಗೆ ಗಡುವಿನಲ್ಲಿ ಅನುಮೋದನೆ ಕೂಡ ಸಿಗುತ್ತಿಲ್ಲ. ಇದರಿಂದಾಗಿ ಸ್ವಂತ ಮನೆ ಕಟ್ಟುವವರಿಗೆ ಭಾರಿ ಸಮಸ್ಯೆಯಾಗುತ್ತಿದೆ ಎನ್ನಲಾಗಿದೆ.
ಕಟ್ಟಡ ನಕ್ಷೆ ಅನುಮೋದನೆಗೆ ಅರ್ಜಿ ಸಲ್ಲಿಸಿದ 21 ದಿನಗಳಲ್ಲಿ ಅನುಮೋದನೆ ಕೊಡಬೇಕು ಎನ್ನುವ ನಿಯಮ ಇದೆ. ಆದರೆ ಅದು ಕಚೇರಿಗಳಲ್ಲಿ ಪಾಲನೆಯಾಗುತ್ತಿಲ್ಲ. ಸೈಟುದಾರರು ಮನೆ ಕಟ್ಟಿಕೊಳ್ಳಲು ಬಿಡಿಎ ಕಟ್ಟಡ ನಕ್ಷೆಗೆ ಅನುಮೋದನೆ ನೀಡಲೇಬೇಕಿದೆ. ಹಾಗಾಗಿ ಅರ್ಜಿ ಸಲ್ಲಿಸಲು ಬಿಡಿಎ ಕಚೇರಿಗಳ ಸುತ್ತ ಅಲೆಯುವಂತಾಗಿದೆ. ಅಲ್ಲಿನ ಅಧಿಕಾರಿಗಳು ಮೀಟಿಂಗ್ ಇದೆ ಅಥವಾ ಇನ್ನಿತರ ಕಾರಣಗಳನ್ನು ನೀಡಿ ಸಕಾಲದಲ್ಲಿ ಅನುಮೋದನೆ ನೀಡದೆ ಅಲೆದಾಡಿಸುತ್ತಿದ್ದಾರೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ಕೆಲವು ಬಾರಿ ಅರ್ಜಿ ಸಲ್ಲಿಸಿ ತಿಂಗಳುಗಳೇ ಕಳೆದರೂ ಯಾವುದೇ ಅನುಮೋದನೆ ಸಿಗುತ್ತಿಲ್ಲ. ಇದರಿಂದಾಗಿ ಮನೆ ಕಟ್ಟಬೇಕು ಎಂಬ ಕನಸನ್ನು ಬಿಡಿಎ ಸತಾಯಿಸುತ್ತಿದೆ ಎಂದು ಸಂಕಟ ಹೊರಹಾಕುತ್ತಿದ್ದಾರೆ. ಮುಖ್ಯವಾಗಿ ಬಿಡಿಎ ವ್ಯಾಪ್ತಿಯ ನಾಡಪ್ರಭು ಕೆಂಪೇಗೌಡ ಬಡಾವಣೆ, ಅರ್ಕಾವತಿ ಬಡಾವಣೆ, ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆ, ಅಂಜನಾಪುರ ಬಡಾವಣೆ, ಬನಶಂಕರಿ ಸೇರಿದಂತೆ ಬಿಡಿಎ ನಿರ್ಮಿಸಿರುವ ಬಡಾವಣೆಗಳಲ್ಲಿ ಕಟ್ಟಡ ನಕ್ಷೆ ಅನುಮೋದನೆಗಾಗಿ ಸೈಟ್ ಮಾಲೀಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಆರ್.ಅಶೋಕ್ ಕಿಡಿ: ಕಟ್ಟಡ ನಕ್ಷೆ ಅನುಮೋದನೆಗೆ ವಿಳಂಬವಾಗುತ್ತಿರುವ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಎಷ್ಟು ಬಾರಿ ಸರ್ಕಾರದ ಗಮನಕ್ಕೆ ತಂದರೂ ಬಿಡಿಎಯಿಂದ ಕಟ್ಟಡ ನಕ್ಷೆ ಅನುಮೋದನೆ ಪಡೆಯಲು ಬೆಂಗಳೂರಿನ ನಾಗರಿಕರ ಪರದಾಟ, ಅಲೆದಾಟ ನಿಲ್ಲುತ್ತಲೇ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ತಮ್ಮ ಸ್ವಂತ ಸೈಟಿನಲ್ಲಿ ಮನೆ ಕಟ್ಟಿಕೊಳ್ಳಲು ಸಾರ್ವಜನಿಕರು ತಿಂಗಳುಗಟ್ಟಲೆ ಕಾಯುವ ಅನಿವಾರ್ಯತೆ ಎದುರಾಗಿದೆ. ಬೆಂಗಳೂರಿನ ಜನತೆ ಕಟ್ಟಡ ನಕ್ಷೆ ಅನುಮತಿ ಪಡೆಯಲು ತಮಗೆ ತಗ್ಗಿ-ಬಗ್ಗಿ ನಡೆಯಬೇಕು ಎನ್ನುವ ಅಪೇಕ್ಷೆ ಏನಾದರೂ ಇಟ್ಟುಕೊಂಡಿದ್ದೀರಾ? ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಆರ್.ಅಶೋಕ್ ಪ್ರಶ್ನಿಸಿದ್ದಾರೆ.












Click it and Unblock the Notifications