ಅಜ್ಞಾನಿಗಳಿಂದ ಪೌರತ್ವ ಕಾಯ್ದೆಗೆ ಪ್ರತಿಭಟನೆ: ತೇಜಸ್ವಿ ಸೂರ್ಯ
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಜ್ಞಾನಿಗಳು, ಎದೆ ಸೀಳಿದರೆ ಒಂದು ಅಕ್ಷರ ಇಲ್ಲದವರು ಪ್ರತಿಭಟನೆಯ ಹೆಸರಲ್ಲಿ ಗಲಭೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದರು.
ಬೆಂಗಳೂರು, ಡಿಸೆಂಬರ್ 22: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಜ್ಞಾನಿಗಳು, ಎದೆ ಸೀಳಿದರೆ ಒಂದು ಅಕ್ಷರ ಇಲ್ಲದವರು ಪ್ರತಿಭಟನೆಯ ಹೆಸರಲ್ಲಿ ಗಲಭೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದರು.
ಪೌರತ್ವ ಕಾಯ್ದೆಯ ಪರವಾಗಿ ಬೆಂಗಳೂರಿನ ಟೌನ್ ಹಾಲ್ ಎದುರು ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಈ ಕಾಯ್ದೆಯನ್ನು ಕೆಲವು ನಕಲಿ ಜಾತ್ಯಾತೀತ ಮೂಲಭೂತವಾದಿಗಳು ತಪ್ಪಾಗಿ ಬಿಂಬಿಸುತ್ತಿದ್ದಾರೆ, ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದರು.
ಈ ಕಾಯ್ದೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ಕೊಟ್ಟು ಪ್ರತಿಭಟನೆಗಿಳಿಯುವಂತೆ ಮಾಡುತ್ತಿದ್ದಾರೆ, ಇದು ಅಜ್ಞಾನಿಗಳು, ಪಂಕ್ಚರ್ ಅಂಗಡಿ ಹಾಕಿಕೊಂಡಿರುವವರು ಮಾಡುವಂತಹ ಕೆಲಸ ಎಂದು ಹೇಳಿದರು.

ಈ ನೂತನ ಕಾಯ್ದೆಯಿಂದ ಭಾರತದ ಯಾವ ಮುಸಲ್ಮಾನನಿಗೂ ತೊಂದರೆಯಾಗುವುದಿಲ್ಲ, ಪಾಕಿಸ್ತಾನ, ಬಾಂಗ್ಲದೇಶ ಮತ್ತು ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾನೂನು, ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ನಾವು ಯು.ಟಿ.ಖಾದರ್ ಅವರಂತೆ ಪ್ರಚೋದನಕಾರಿ ಹೇಳಿಕೆ ನೀಡುವುದಿಲ್ಲ, ಒಂದು ವೇಳೆ ನಾವು ಜನ ಸೇರಿಸಿದರೆ ಅವರು ಪ್ರತಿಭಟಿಸಲೂ ಜನ ಬರುವುದಿಲ್ಲ ಎಂದು ಟೀಕಿಸಿದರು.
ಮಕ್ಕಳು ಶಾಲೆಗೆ ಹೋಗುವ ಬಸ್ ಗೂ ಬೆಂಕಿ ಹಚ್ಚುತ್ತಿದ್ದಾರೆ. ಇದೆಂತಹ ಪ್ರತಿಭಟನೆ ಎಂದು ಪ್ರಶ್ನಿಸಿದರು. ನಾವೆಲ್ಲರೂ ಸೇರಿ ಕಾಂಗ್ರೆಸ್ ಮತ್ತು ಪ್ರತಿಭಟನೆಗೆ ಇಳಿದಿರುವವರ ದೇಶನಿಷ್ಠೆಯನ್ನು ಪ್ರಶ್ನಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಮಾತನಾಡಿದರು.











Click it and Unblock the Notifications