ಐದನೇ ದಿನಕ್ಕೆ ಕಾಲಿಟ್ಟ ಯಡಿಯೂರಪ್ಪ ಧರಣಿ
ಬೆಂಗಳೂರು, ನ.4 : ಶಾದಿಭಾಗ್ಯ ಯೋಜನೆಯನ್ನು ಎಲ್ಲ ಜಾತಿ-ಧರ್ಮದ ಬಡವರಿಗೂ ವಿಸ್ತರಿಸಬೇಕು ಮತ್ತು ಎಪಿಎಲ್ ಕಾರ್ಡ್‌ದಾರರಿಗೆ ಹಿಂದಿನಂತೆ ಪಡಿತರ ವಿತರಣೆ ಮುಂದುವರೆಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡೆಸುತ್ತಿರುವ ಅಹೋರಾತ್ರಿ ಧರಣಿ ಸೋಮವಾರ ಐದನೇ ದಿನಕ್ಕೆ ಕಾಲಿಟ್ಟಿದೆ.
ಭಾನುವಾರ ದೇಶ ದೀಪಾವಳಿ ಸಂಭ್ರಮದಲ್ಲಿದ್ದರೆ ಯಡಿಯೂರಪ್ಪ ಸೇರಿದಂತೆ ಕೆಜೆಪಿಯ ನೂರಾರು ಕಾರ್ಯಕರ್ತರು ಹಬ್ಬ ಆಚರಿಸಲಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಿಂದ ಧರಣಿಗೆ ಬಂದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಯಡಿಯೂರಪ್ಪ ದೀಪಾವಳಿ ದಿನವನ್ನು ಕಳೆದರು.

ಐದು ದಿನಗಳಿಂದ ಯಡಿಯೂರಪ್ಪ ಧರಣಿ ನಡೆಸುತ್ತಿದ್ದರೂ, ರಾಜ್ಯ ಸರ್ಕಾರದಿಂದ ಯಡಿಯೂರಪ್ಪ ಅವರನ್ನು ಮನವೊಲಿಸುವ ಯಾವುದೇ ಪ್ರಯತ್ನವೂ ನಡೆದಿಲ್ಲ. ಆದ್ದರಿಂದ ಪ್ರತಿಭಟನೆಯನ್ನು ತೀವ್ರಗೊಳಿಸಲು ಯಡಿಯೂರಪ್ಪ ಉದ್ದೇಶಿಸಿದ್ದಾರೆ. ಮಂಗಳವಾರ ಧರಣಿ ಸ್ಥಳದಲ್ಲೇ ಕೆಜೆಪಿಯ ರಾಜ್ಯ ಕಾರ್ಯಕಾರಿಣಿಯ ಸಭೆ ಕರೆದು ಮುಂದಿನ ಹೋರಾಟ ರೂಪುರೇಷೆ ನಿರ್ಧರಿಸಲಿದ್ದಾರೆ.
ಮಂಗಳವಾರ ಕಾರ್ಯಕಾರಣಿ ಸಭೆಯ ನಂತರ ಧರಣಿ ಸತ್ಯಾಗ್ರಹವನ್ನು ಅಂತ್ಯಗೊಳಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ, ನಂತರ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲು ಕೆಜೆಪಿ ತೀರ್ಮಾನಿಸಿದೆ. ಆದರೆ, ಈ ಕುರಿತು ಮಂಗಳವಾರ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ. (ಯಡಿಯೂರಪ್ಪಗೆ ಧರಣಿ ಏಕೆ?)
ಮಂಗಳವಾರದ ನಂತರ ಜಿಲ್ಲಾ ಪ್ರವಾಸ ಕೈಗೊಳ್ಳಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಚಾಮರಾಜನಗರದಿಂದ ಪ್ರವಾಸ ಆರಂಭಿಸಿ ಹಲವು ಜಿಲ್ಲೆಗಳಲ್ಲಿ ಸಂಚರಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಲಿದ್ದಾರೆ. ನಂತರ ಈ ತಿಂಗಳ 25ರಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನಮಂಡಲದ ಉಭಯಸದನಗಳ ಚಳಿಗಾಲದ ಅಧಿವೇಶನದಲ್ಲಿ ಉಗ್ರ ಪ್ರತಿಭಟನೆಯ ಮೂಲಕ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.











Click it and Unblock the Notifications