Property Tax: ಆಸ್ತಿ ಕಳೆದುಕೊಳ್ಳುವ ಭೀತಿ: ಬಿಬಿಎಂಪಿ ಪ್ಲ್ಯಾನ್ ಸಕ್ಸಸ್!
Property Tax: ಬೆಂಗಳೂರಿನ ಆಸ್ತಿದಾರರಿಂದ ಹಲವು ವರ್ಷಗಳ ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡುವಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಸ್ಟರ್ ಪ್ಲ್ಯಾನ್ ಸಕಸ್ಸ್ ಆಗಿದೆ. ಬಿಬಿಎಂಪಿಯು ಬೆಂಗಳೂರು ಆಸ್ತಿದಾರರಿಂದ ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡುವುದಕ್ಕೆ ವಿಶೇಷವಾದ ಹಾಗೂ ಇಲ್ಲಿಯ ವರೆಗೆ ಮಾಡಿರದ ಪ್ಲ್ಯಾನ್‌ವೊಂದನ್ನು ಮಾಡಿತ್ತು. ಅದು ಇದೀಗ ಸಕ್ಸಸ್ ಆಗಿದೆ. ಬಿಬಿಎಂಪಿಗೆ ಪ್ರಮುಖ ಆದಾಯ ಆಸ್ತಿ ತೆರಿಗೆ ಸಂಗ್ರಹ. ಕಳೆದ ಆರ್ಥಿಕ ಸಾಲಿನಲ್ಲಿ 5,000 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗಿದೆ. ಆದರೆ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಆಸ್ತಿದಾರರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಅವರಿಂದ ಆಸ್ತಿ ತೆರಿಗೆ ಸಂಗ್ರಹ ಮಾಡುವುದಕ್ಕೆ ಬಿಬಿಎಂಪಿ ಹಲವು ಬಾರಿ ನೋಟಿಸ್‌ಗಳನ್ನು ಕೊಟ್ಟಿತ್ತು.
ಅಲ್ಲದೆ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಎಚ್ಚರಿಕೆಯನ್ನು ಸಹ ಕೊಟ್ಟಿದ್ದರು. ಆದರೆ, ಇದ್ಯಾವುದಕ್ಕೂ ಜನ ಕ್ಯಾರೇ ಎಂದಿರಲಿಲ್ಲ. ಇದೀಗ ಬಿಬಿಎಂಪಿಯು ಆಸ್ತಿಗಳನ್ನು ಹರಾಜು ಹಾಕುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಮಹತ್ವದ ಬದಲಾವಣೆಗಳು ಆಗಿವೆ ಅದರ ವಿವರ ಇಲ್ಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಹಲವು ವರ್ಷಗಳಿಂದ ಉಳಿಸಿಕೊಂಡವರಿಂದ ಆಸ್ತಿ ತೆರಿಗೆ ಸಂಗ್ರಹ ಮಾಡುವುದಕ್ಕೆ ಹಲವು ಮಾರ್ಗಗಳನ್ನು ಅನುಸರಿಸಲಾಗಿತ್ತು. ಅದರಲ್ಲಿ ಮುಖ್ಯವಾಗಿ ಕಾರಣ ಕೇಳಿ ನೋಟಿಸ್, ಬೇಡಿಕೆ ನೋಟಿಸ್, ಆಸ್ತಿಗಳ ಮುಟ್ಟುಗೋಲು ಹಾಗೂ ವಸತಿಯೇತರ ಆಸ್ತಿಗಳಿಗೆ ಬೀಗಮುದ್ರೆ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಆದರೆ, ಈ ಕ್ರಮಗಳನ್ನು ಕೈಗೊಂಡ ಮೇಲೂ ಹಲವರು ಆಸ್ತಿ ತೆರಿಗೆ ಬಾಕಿ ಪಾವತಿ ಮಾಡಿಲ್ಲ. ಆಸ್ತಿ ಮಾಲೀಕರು ಹಲವು ವರ್ಷಗಳಿಂದ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಹೀಗಾಗಿ ಆಸ್ತಿದಾರರು ಆಸ್ತಿ ತೆರಿಗೆ ಪಾವತಿಸದೆ ಇರುವುದರಿಂದ ತುರ್ತು ಮಾರಾಟ ಮಾಡಲು ಹರಾಜು ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಬಿಬಿಎಂಪಿ ಹೇಳಿತ್ತು.
ಶೇ.55 ಆಸ್ತಿದಾರರಿಂದ ಆಸ್ತಿ ತೆರಿಗೆ ಪಾವತಿ
ಬಿಬಿಎಂಪಿ ಈ ರೀತಿ ಆಸ್ತಿಗಳನ್ನೇ ಹರಾಜು ಹಾಕುವುದಾಗಿ ಹೇಳಿದ ಮೇಲೆ ಹಲವು ಆಸ್ತಿದಾರರು ಎಚ್ಚೆತ್ತುಕೊಂಡಿದ್ದಾರೆ. ಆಸ್ತಿ ಹರಾಜು ಹಾಕುವ ಬಿಬಿಎಂಪಿಯ ಪ್ಲ್ಯಾನ್ ವರ್ಕ್‌ಔಟ್ ಆಗಿದೆ. ಆಸ್ತಿ ತೆರಿಗೆ ಪಾವತಿ ಮಾಡದೆ ಇರುವವರು ಈ ಆದೇಶದ ನಂತರ ಆಸ್ತಿ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಇಲ್ಲಿಯ ವರೆಗೆ 608 ಆಸ್ತಿಗಳನ್ನು ಮೊದಲ ಹಂತದಲ್ಲಿ ಹರಾಜು ಹಾಕುವುದಾಗಿ ಬಿಬಿಎಂಪಿ ಹೇಳಿತ್ತು. ಈ ಎಲ್ಲಾ ಆಸ್ತಿದಾರರಿಗೂ ನೋಟಿಸ್ ಜಾರಿ ಮಾಡಲಾಗಿತ್ತು.
ಇದೀಗ ಇದರಲ್ಲಿ ಶೇ55% ರಷ್ಟು ಜನ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಇದರಿಂದ ಬಿಬಿಎಂಪಿಗೆ ಕೋಟ್ಯಾಂತರ ರೂಪಾಯಿ ಆದಾಯ ಹರಿದು ಬಂದಿದೆ. ಹೌದು ಆಸ್ತಿ ಕಳೆದುಕೊಳ್ಳುವ ಆತಂಕದಲ್ಲಿ ಜನ ಆಸ್ತಿ ತೆರಿಗೆ ಪಾವತಿ ಮಾಡಿ ಅವರಿಗೆ ಬಂದ ಸಂಕಷ್ಟದಿಂದ ಪಾರಾಗುತ್ತಿದ್ದಾರೆ. ಶೇ55ರಷ್ಟು ಆಸ್ತಿದಾರರು ಆಸ್ತಿ ತೆರಿಗೆ ಬಾಕಿ ಪಾವತಿ ಮಾಡಿದ್ದಾರೆ ಎಂದು Oneindia Kannadaಕ್ಕೆ ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಅವರು ತಿಳಿಸಿದ್ದಾರೆ.












Click it and Unblock the Notifications