Bengaluru voter data theft: ಅಕ್ರಮ ಮಾಹಿತಿ ಸಂಗ್ರಹಕ್ಕೆ ಬಿಬಿಎಂಪಿ ಒಪ್ಪಿಗೆ- ತನಿಖಾ ವರದಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಹೆಸರು
ಬೆಂಗಳೂರು, ಏಪ್ರಿಲ್ 17: ಬೆಂಗಳೂರು ಮತದಾರರ ಮಾಹಿತಿ ಕಳ್ಳತನ ( Bengaluru voter data theft ) ಮಾಡಲು ಖಾಸಗಿ ಸಂಸ್ಥೆಯೊಂದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( BBMP ) ಅಧಿಕಾರಿಗಳು ಒಪ್ಪಿಗೆ ನೀಡಿದ್ದರೆಂಬ ಸ್ಪೋಟಕ ವಿಚಾರ ತನಿಖೆಯಿಂದ ಬಹಿರಂಗಗೊಂಡಿದೆ.
ಪ್ರಕರಣದಲ್ಲಿ ಪ್ರಮುಖ ಆರೋಪ ಹೊತ್ತಿರುವ ಚಿಲುಮೆ ಟ್ರಸ್ಟ್‌ಗೆ ಬಿಬಿಎಂಪಿ ಅಧಿಕಾರಿಗಳು ಅಕ್ರಮವಾಗಿ ಪರವಾನಗಿ ನೀಡದ್ದರೆಂದು ತಿಳಿದುಬಂದಿದೆ. ಅನಧಿಕೃತ ಖಾಸಗಿ ಡಿಜಿಟಲ್ ಅಪ್ಲಿಕೇಶನ್‌ನಲ್ಲಿ (ಡಿಜಿಟಲ್ ಸಮೀಕ್ಷಾ) ಮತದಾರರ ಡೇಟಾವನ್ನು ಅಕ್ರಮವಾಗಿ ಸಂಗ್ರಹಿಸುವ ನಿಟ್ಟಿನಲ್ಲಿ ಚಿಲುಮೆ ಟ್ರಸ್ಟ್ ಕಾರ್ಯನಿರ್ವಹಿಸಿತ್ತು ಎಂಬ ಮಾಹಿತಿ ಸಿಕ್ಕಿದೆ.

ಈ ಅಕ್ರಮ ಡೇಟಾಗಳನ್ನು ವಿದೇಶಿ ಸರ್ವರ್‌ನಲ್ಲಿ ಸಂಗ್ರಹಿಸಲಾಗಿದೆ ಎಂದು ವರದಿಯಾಗಿದೆ. ಆ ಮೂಲಕ ವೈಯಕ್ತಿಕ ಡೇಟಾಗಳನ್ನು ಅಕ್ರಮವಾಗಿ ಸಂಗ್ರಹಿಸಿ ದುರುಪಯೋಗ ಪಡಿಸಿಕೊಳ್ಳುವುದು ಈ ಸಂಸ್ಥೆಯ ಮೂಲ ಉದ್ದೇಶವಾಗಿತ್ತು ತನಿಖೆ ಹೇಳಿದೆ.
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಬೆಂಗಳೂರು ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಅವರು ತನಿಖೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿಗಳ ಪಾತ್ರದ ಬಗ್ಗೆ ಪ್ರತ್ಯೇಕ ಪೊಲೀಸ್ ತನಿಖೆಗೆ ಶಿಫಾರಸು ಮಾಡಲಾಗಿದೆ.
2022 ರ ಸೆಪ್ಟೆಂಬರ್ 20 ರಂದು ಸಮನ್ವಯ ಟ್ರಸ್ಟ್‌ನಿಂದ ಚಿಲುಮೆ ವಿರುದ್ಧ ಸಲ್ಲಿಸಿದ ದೂರಿನ ಮೇಲೆ ಕಾರ್ಯನಿರ್ವಹಿಸಲು ಆಗಿನ ವಿಶೇಷ ಆಯುಕ್ತ (ಚುನಾವಣೆ) ಐಎಎಸ್ ಅಧಿಕಾರಿ ಎಸ್ ರಂಗಪ್ಪ ಅವರನ್ನು ನೇಮಿಸಲಾಗಿತ್ತು. ಈ ತನಿಖೆಯಲ್ಲಿ ವಿಳಂಬವಾಗಿದೆ ಎಂದು ಎತ್ತಿ ತೋರಿಸಲಾಗಿದೆ. ಈ ವಿಳಂಬವನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹೊಂಬಾಳೆ ಫಿಲ್ಮ್ಸ್ ಮತ್ತು ರಾಜ್ ಧರ್ಮ ಅನಾಲಿಟಿಕಾ ಜೊತೆ ಚಿಲುಮೆ ಗ್ರೂಪ್‌ನ ಸಂಭಾವ್ಯ ಸಂಪರ್ಕಗಳು ತನಿಖೆಯಿಂದ ಬಹಿರಂಗಗೊಂಡಿದೆ. ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ್‌ಗೆ ಸಂಬಂಧಿಸಿದ ಎರಡು ಸಂಸ್ಥೆಗಳು ಚಿಲುಮೆ ಗ್ರೂಪ್‌ನ ಸಂಪರ್ಕದಲ್ಲಿವೆ ಎಂದು ಗೊತ್ತಾಗಿದೆ. ಸಚಿವರ ಸೋದರ ಸಂಬಂಧಿ ವಿಜಯ್ ಕಿರಗಂದೂರು ಅವರ ಹೊಂಬಾಳೆ ಲೇಬಲ್‌ನಿಂದ ಪಡೆದ ಸಾಲಕ್ಕೆ ಅಶ್ವಥ್ ನಾರಾಯಣ್ ಬ್ಯಾಂಕ್ ಗ್ಯಾರಂಟರ್ ಆಗಿದ್ದಾರೆ ಎಂದು ಕಂಪನಿಗಳ ರಿಜಿಸ್ಟ್ರಾರ್ (ಆರ್‌ಒಸಿ) ದಾಖಲೆಗಳು ತೋರಿಸುತ್ತವೆ.
ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಡಿಜಿಟಲ್ ಸಮೀಕ್ಷಾದ ಮೊದಲ ವಹಿವಾಟುಗಳಲ್ಲಿ, 'ಕನ್ಸ್ಟ್ರಕ್ಷನ್ ಎಂಟರ್‌ಪ್ರೈಸ್' ಆಗಿ ನೋಂದಾಯಿಸಲಾಗಿದೆ. ಡಿಸೆಂಬರ್ 2022 ರಲ್ಲಿ, ಸಚಿವರು ಚಿಲುಮೆ ಗ್ರೂಪ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ ಅಶ್ವಥ್ ನಾರಾಯಣ್ ಅದನ್ನು ನಿರಾಕರಿಸಿದರು.
ಪ್ರಕರಣದಲ್ಲಿ ಭಾಗಿಯಾಗಿರುವ ಐಎಎಸ್ ಅಧಿಕಾರಿಗಳು ಮತ್ತು ಚುನಾವಣಾ ನೋಂದಣಿ ಅಧಿಕಾರಿಗಳ (ಇಆರ್‌ಒ) ವಿಚಾರಣೆ ಹೊರತಾಗಿ, ಈ ವರ್ಷದ ಫೆಬ್ರವರಿಯಲ್ಲಿ ಸಲ್ಲಿಸಲಾದ ತನಿಖಾ ವರದಿಯು ಚಿಲುಮೆಯ ಹಣಕಾಸನ್ನು ಆಡಿಟ್ ಮಾಡಿದೆ.
ಮತದಾರರ ದತ್ತಾಂಶ ಕಳ್ಳತನದ ಆರೋಪಗಳು ಬೆಳಕಿಗೆ ಬಂದ ನಂತರ, ಪೊಲೀಸರು ಚಿಲುಮೆ ಎಂಟರ್‌ಪ್ರೈಸಸ್ ನಿರ್ದೇಶಕ ರವಿಕುಮಾರ್ ಕೃಷ್ಣಪ್ಪ ಮತ್ತು ಸಂಸ್ಥೆಯ ಕೆಲವು ಉದ್ಯೋಗಿಗಳನ್ನು ಬಿಬಿಎಂಪಿ ಅಧಿಕಾರಿಗಳೊಂದಿಗೆ ಬಂಧಿಸಿದ್ದರು. ಈ ಪ್ರಕರಣದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಚೈನೀಸ್ ಅಥವಾ ಪೂರ್ವ ಯುರೋಪಿಯನ್ ಸರ್ವರ್‌ಗಳಲ್ಲಿ ಚಿಲುಮೆ ಸಂಸ್ಥೆಯು ಅಕ್ರಮ ಡೇಟಾವನ್ನು ಸಂಗ್ರಹಿಸಿದೆ. ಇದನ್ನು ಪೊಲೀಸರು ತಕ್ಷಣವೇ ಹಿಂಪಡೆಯುವಂತೆ ವರದಿಯು ಶಿಫಾರಸು ಮಾಡಿದೆ.
ಮತದಾರರ ಡೇಟಾ ಕಳ್ಳತನದ ಪ್ರಕರಣವು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಡೇಟಾ ಕಳ್ಳತನ ಮಾಡಲು ಆಡಳಿತಾರೂಢ ಬಿಜೆಪಿ ಸರ್ಕಾರ ಕುಮ್ಮಕ್ಕು ನೀಡಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.












Click it and Unblock the Notifications