ಬಿಬಿಎಂಪಿ ಮೇಯರ್ ಆಯ್ಕೆಗೆ ಸಿದ್ಧತೆ ಆರಂಭ, ಯಾರೊಂದಿಗೆ ಮೈತ್ರಿ?
ಬೆಂಗಳೂರು, ಸೆಪ್ಟೆಂಬರ್ 08 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಅವಧಿ ಸೆ.28ಕ್ಕೆ ಅಂತ್ಯಗೊಳ್ಳಲಿದೆ. ಬಿಬಿಎಂಪಿ ಹೊಸ ಮೇಯರ್ ಆಯ್ಕೆ ಚುನಾವಣೆಗೆ ಸಿದ್ಧವಾಗುತ್ತಿದ್ದು, 266 ಜನರು ಈ ಬಾರಿ ಬೆಂಗಳೂರಿನ ಪ್ರಥಮ ಪ್ರಜೆಯನ್ನು ಆಯ್ಕೆ ಮಾಡಲಿದ್ದಾರೆ.
ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡುವ ಮತದಾರರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತೆ ಜಯಂತಿ ಅವರಿಗೆ ಸಲ್ಲಿಸಿದ್ದಾರೆ. ಪ್ರಾದೇಶಿಕ ಆಯುಕ್ತರು ಕೆಲವು ದಿನಗಳಲ್ಲಿ ಚುನಾವಣಾ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
266 ಜನರು ಮತದಾನ ಮಾಡುವುದರಿಂದ ಈ ಬಾರಿ ಮೇಯರ್ ಹುದ್ದೆಗೆ ಏರಲು ಮ್ಯಾಜಿಕ್ ನಂಬರ್ 134. ಪಾಲಿಕೆಯಲ್ಲಿ ಬಿಜೆಪಿ ಹೆಚ್ಚು ಸದಸ್ಯ ಬಲ ಹೊಂದಿದೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು, ಮೇಯರ್ ಮತ್ತು ಉಪ ಮೇಯರ್ ಪಟ್ಟ ಹಂಚಿಕೊಂಡಿದ್ದು, ಬಿಜೆಪಿಗೆ ಅಧಿಕಾರ ಸಿಕ್ಕಿಲ್ಲ.
ಪ್ರಸ್ತುತ ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ (ಕಾಂಗ್ರೆಸ್), ಉಪ ಮೇಯರ್ ಎಂ.ಆನಂದ (ಜೆಡಿಎಸ್). ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಜೆಡಿಎಸ್ ಈ ಬಾರಿ ಮೇಯರ್ ಪಟ್ಟಕ್ಕಾಗಿ ಬೇಡಿಕೆ ಇಟ್ಟಿದೆ. ಮೇಯರ್ ಪಟ್ಟ ಕೊಟ್ಟರೆ ಮೈತ್ರಿ ಮುಂದುವರೆಸುವುದಾಗಿ ಹೇಳಿದ್ದು, ಮೇಯರ್ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ....

ಸೆ.28ಕ್ಕೆ ಅವಧಿ ಅಂತ್ಯ
ಹಾಲಿ ಬಿಬಿಎಂಪಿ ಮೇಯರ್ ಆಗಿರುವ ಜಿ.ಪದ್ಮಾವತಿ, ಉಪ ಮೇಯರ್ ಎಂ.ಆನಂದ ಅವರ ಅವಧಿ ಸೆ.28ಕ್ಕೆ ಅಂತ್ಯಗೊಳ್ಳಲಿದೆ. ಪ್ರಾದೇಶಿಕ ಆಯುಕ್ತರು ಕೆಲವೇ ದಿನಗಳಲ್ಲಿ ನೂತನ ಮೇಯರ್ ಆಯ್ಕೆಯ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಲಿದ್ದಾರೆ.

266 ಜನರಿಂದ ಮೇಯರ್ ಆಯ್ಕೆ
ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. 198 ಪಾಲಿಕೆ ಸದಸ್ಯರು, 68 ಜನಪ್ರತಿನಿಧಿಗಳು ಸೇರಿ 266 ಜನರು ಮತ ಚಲಾವಣೆ ಮಾಡಲಿದ್ದಾರೆ. ಪ್ರಾದೇಶಿಕ ಆಯುಕ್ತರಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿ ಸಲ್ಲಿಸಿದ್ದಾರೆ.

ಮೇಯರ್ ಆಯ್ಕೆಗೆ ಮ್ಯಾಜಿಕ್ ನಂ 134
ಬಿಬಿಎಂಪಿಯ ಮತದಾರರ ಪಟ್ಟಿ ಪ್ರಕಾರ 198 ಬಿಬಿಎಂಪಿ ಸದಸ್ಯರು. 68 ಜನಪ್ರತಿನಿಧಿಗಳು (28 ಶಾಸಕರು, 25 ಪರಿಷತ್ ಸದಸ್ಯರು, 10 ರಾಜ್ಯಸಭಾ ಸದಸ್ಯರು, 5 ಸಂಸದರು) ಸೇರಿ 266 ಜನರು ಮತ ಚಲಾವಣೆ ಮಾಡಲಿದ್ದಾರೆ. ಆದ್ದರಿಂದ, ಮೇಯರ್ ಆಯ್ಕೆಯಾಗಲು ಮ್ಯಾಜಿಕ್ ನಂಬರ್ 134.

ಪಕ್ಷಗಳ ಲೆಕ್ಕಾಚಾರ
ಪ್ರಸ್ತುತ ಬಿಬಿಎಂಪಿಯಲ್ಲಿನ ಪಕ್ಷದ ಬಲಾಬಲದ ಲೆಕ್ಕಾಚಾರದ ಪ್ರಕಾರ ಬಿಜೆಪಿ 124, ಕಾಂಗ್ರೆಸ್ 109, ಜೆಡಿಎಸ್ 24 ಸದಸ್ಯ ಬಲ ಹೊಂದಿದೆ. 9 ಪಕ್ಷೇತರ ಸದಸ್ಯರಿದ್ದಾರೆ. ಈ ಬಾರಿಯ ಮೇಯರ್ ಹುದ್ದೆ ಪರಿಶಿಷ್ಟ ಜಾತಿ (ಸಾಮಾನ್ಯ) ಸದಸ್ಯರಿಗೆ ಮೀಸಲಾಗಿದೆ.ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ.

ಮೇಯರ್ ಪಟ್ಟಕ್ಕೆ ಬೇಡಿಕೆ
ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದೆ. ಮೇಯರ್ ಮತ್ತು ಉಪ ಮೇಯರ್ ಪಟ್ಟವನ್ನು ಎರಡೂ ಪಕ್ಷಗಳು ಹಂಚಿಕೊಂಡಿವೆ. ಆದರೆ, ಈ ಬಾರಿ ಜೆಡಿಎಸ್ ಮೇಯರ್ ಪಟ್ಟಕ್ಕೆ ಬೇಡಿಕೆ ಇಟ್ಟಿದೆ. ಆದ್ದರಿಂದ, ಮೇಯರ್ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications