ಬೆಂಗಳೂರಿನಲ್ಲಿ 7 ಕಿ.ಮೀ ನಡೆದು ಬಂದ ಗರ್ಭಿಣಿ: ದಂತ ಕ್ಲಿನಿಕ್‌ನಲ್ಲಿ ಹೆರಿಗೆ
ಬೆಂಗಳೂರು, ಏಪ್ರಿಲ್ 19: ಲಾಕ್‌ಡೌನ್ ಕಾರಣದಿಂದ ಜನಸಾಮಾನ್ಯರು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಗರ್ಭಿಣಿ ಹೆಂಗಸು ಅಥವಾ ಹಿರಿಯ ನಾಗರಿಕರಿಗೆ ಅನಾರೋಗ್ಯ ಉಂಟಾದರೆ, ಅವರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಸವಾಲಿನ ಕೆಲಸವಾಗಿದೆ.
ಇಂತಹ ಕ್ಲಿಷ್ಟ ಸಂದರ್ಭಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಸುಮಾರು 7 ಕಿ.ಮೀ ಆಸ್ಪತ್ರೆ ಹುಡುಕಿ, ನಡೆದುಕೊಂಡು ಬಂದು ದಂತ ವೈದ್ಯ ಕ್ಲಿನಿಕ್‌ನಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ, ಹತ್ತಿರದಲ್ಲಿ ಯಾವುದು ಆಸ್ಪತ್ರೆ ತೆರೆದಿರುವ ಬಗ್ಗೆ ಸ್ಪಷ್ಟತೆ ಇಲ್ಲದೇ, ಯಾವುದಾರೂ ಆಸ್ಪತ್ರೆ ತೆರೆದಿರಬಹುದು ಎಂಬ ಭರವಸೆಯಿಂದ 7 ಕಿ.ಮೀ ನಡೆದುಕೊಂಡು ಬಂದಿದ್ದಾರೆ.
Karnataka: A pregnant woman delivered a baby at a dentist's clinic in Bengaluru where she had reached, along with her husband, after walking for around 7 km in hopes of reaching a hospital. The mother & baby (in pic with the dentist) were later sent to hospital after the delivery pic.twitter.com/dO9edQ9EsU
— ANI (@ANI) April 19, 2020
ಪತಿ ಜೊತೆ ಆಸ್ಪತ್ರೆ ಹುಡುಕಿ ಹೋಗುತ್ತಿದ್ದ ಸಮಯದಲ್ಲಿ ದಂತ ಕ್ಲಿನಿಕ್ ಬಾಗಿಲು ತೆರೆದಿರುವುದು ಕಣ್ಣಿಗೆ ಬಿದ್ದಿದೆ. ಕ್ಲಿನಿಕ್‌ನಲ್ಲಿ ರಮ್ಯಾ ಎಂಬ ವೈದ್ಯರಿದ್ದರು. ಸನ್ನಿವೇಶ ವಿವರಿಸಿದ ಬಳಿಕ ಡಾಕ್ಟರ್ ರಮ್ಯಾ ಹೆರಿಗೆಗೆ ನೆರವಾಗಿದ್ದಾರೆ. ಆರೋಗ್ಯವಾಗಿ ಆ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ.

ಇನ್ನು ಹೆರಿಗೆಗೆ ನೆರವಾದ ವೈದ್ಯೆ ರಮ್ಯಾ ಮಾತನಾಡಿ 'ಶಿಶು ಜನನವಾದ ನಂತರ ಯಾವುದೇ ಚಲನವಲನ ಕಾಣಿಸಿಲ್ಲ. ಬಹುಶಃ ಮಗು ಸತ್ತು ಹೋಗಿರಬಹುದು ಎಂದುಕೊಂಡಿದ್ದೆವು. ಸ್ವಲ್ಪವೊತ್ತಿನ ಬಳಿಕ ಮಗು ಜೀವಂತವಾಗಿದೆ ಎಂದು ತಿಳಿಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದೆ' ಎಂದು ಹೇಳಿಕೊಂಡಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಹೆರಿಗೆಗೆ ನೆರವಾದ ವೈದ್ಯೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ವ್ಯಕ್ತವಾಗಿದೆ.












Click it and Unblock the Notifications