ರಾಜ್ಯ ಬಿಜೆಪಿ ಉಸ್ತುವಾರಿ ಜಾವಡೇಕರ್ ಸೆ. 4ರಂದು ಬೆಂಗಳೂರಿಗೆ
ರಾಜ್ಯ ಬಿಜೆಪಿ ಉಸ್ತುವಾರಿ ಹೊತ್ತಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರಿಂದ ಸೆಪ್ಟಂಬರ್ 4ರಂದು ಬೆಂಗಳೂರು ಭೇಟಿ. ರಾಜ್ಯ ಬಿಜೆಪಿ ನಾಯಕರ ಜತೆಗೆ ಚರ್ಚೆ ನಡೆಸಲಿರುವ ಜಾವಡೇಕರ್.
ಬೆಂಗಳೂರು, ಆಗಸ್ಟ್ 31: ರಾಜ್ಯ ಬಿಜೆಪಿ ಉಸ್ತುವಾರಿ ಹೊತ್ತಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು, ಸೆಪ್ಟಂಬರ್ 4ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಜಾವಡೇಕರ್ ಅವರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಲಾಗಿದೆ. ಇತ್ತೀಚೆಗಷ್ಟೇ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬೆಂಗಳೂರಿಗೆ ಬಂದು ಹೋದ ಬೆನ್ನಲ್ಲೇ ಜಾವಡೇಕರ್ ಅವರಿಗೆ ಈ ವಿಶೇಷ ಜವಾಬ್ದಾರಿ ಹೊರಿಸಲಾಗಿದೆ.

ಹೀಗೆ, ಹೊಸ ಹೊಣೆ ಹೊತ್ತ ನಂತರ ಇದೇ ಮೊದಲ ಬಾರಿಗೆ ಅವರು ಕರ್ನಾಟಕ್ಕೆ ಬರುತ್ತಿದ್ದಾರೆ.
ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿಯ ಸಭೆಯಲ್ಲಿ ಅಮಿತ್ ಶಾ ಅವರು, ರಾಜ್ಯದಲ್ಲಿ ಬೃಹತ್ ರಥಯಾತ್ರೆ ಆಯೋಜಿಸುವಂತೆ ಸೂಚಿಸಿದ್ದಾರೆ. ಈ ರಥಯಾತ್ರೆಯು ಕರ್ನಾಟಕದೆಲ್ಲೆಡೆ ಸಂಚರಿಸಲಿದ್ದು, ರಾಜ್ಯ ಬಿಜೆಪಿ ನಾಯಕರು ಸೇರಿದಂತೆ ಪ್ರಧಾನಿ ಮೋದಿ, ಅಮಿತ್ ಶಾ ಕೂಡ ಭಾಗಿಯಾಗಲಿದ್ದಾರೆ.
ಈ ಬಾರಿಯ ಕರ್ನಾಟಕ ಭೇಟಿಯ ವೇಳೆ, ಈ ರಥ ಯಾತ್ರೆಯ ಆಯೋಜನೆ ಕುರಿತಂತೆ ರೂಪುರೇಷೆಗಳನ್ನು ಚರ್ಚಿಸಿ ತೀರ್ಮಾನಿಸಲಿದ್ದಾರೆ ಜಾವಡೇಕರ್. ಇದಲ್ಲದೆ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿಗಳಾದ ಈಶ್ವರಪ್ಪ, ಆರ್. ಅಶೋಕ್ , ಹಿರಿಯ ನಾಯಕರಾದ ಸುರೇಶ್ ಕುಮಾರ್ ಸೇರಿದಂತೆ ಹಲವಾರು ನಾಯಕರೊಡನೆ ಜಾವಡೇಕರ್ ಮಾತುಕತೆ ನಡೆಸಲಿದ್ದಾರೆಂದು ಹೇಳಲಾಗಿದೆ.












Click it and Unblock the Notifications