Prajwal Revanna case: ನಮ್ಮ ನಡಿಗೆ ಹಾಸನದ ಕಡೆಗೆ ಎಂದ 'ನಾವೆದ್ದು ನಿಲ್ಲದಿದ್ದರೆ' ಸಂಘಟನೆ
ಬೆಂಗಳೂರು, ಮೇ. 28: ಈಗಾಗಲೇ ಹಾಸನ ಸಂಸದ, ಎನ್‌ಡಿಎ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣದ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಮೇ 30ರಂದು ಹಾಸನ ಚಲೋಗೆ ಕರೆ ನೀಡಲಾಗಿದೆ. ಇದರ ಬೆನ್ನಲ್ಲೇ ಮಾನವ ಹಕ್ಕುಗಳ ಸಂಘಟನೆ 'ನಾವೆದ್ದು ನಿಲ್ಲದಿದ್ದರೆ' ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ.
'ನಮ್ಮ ನಡಿಗೆ ಹಾಸನದ ಕಡೆಗೆ' ಎಂಬ ಘೋಷಣೆ ಅಡಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಚಲೋ ನಡೆಸುವುದಾಗಿ 'ನಾವೆದ್ದು ನಿಲ್ಲದಿದ್ದರೆ' ಸಂಘಟನೆ ಘೋಷಣೆ ಮಾಡಿದೆ. ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿರುವ ಪ್ರತಿಭಟನೆಗೆ ಸಾಥ್ ನೀಡಲಿದೆ.

'ನಮ್ಮ ನಡಿಗೆ ಹಾಸನದ ಕಡೆಗೆ'
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಗತಿಪರ ಗುಂಪುಗಳ 10,000 ಕ್ಕೂ ಹೆಚ್ಚು ವ್ಯಕ್ತಿಗಳು ಮೇ 30 ರಂದು ಹಾಸನಕ್ಕೆ 'ನ್ಯಾಯ ಮೆರವಣಿಗೆ' ನಡೆಸಲಿದ್ದಾರೆ. ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಅಧಿಕಾರ, ಸಾಂವಿಧಾನಿಕ ಜವಾಬ್ದಾರಿ ಮತ್ತು ಜಾತಿ ಸವಲತ್ತುಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದೆ.
ಏಪ್ರಿಲ್‌ನಲ್ಲಿ ಪ್ರಕರಣ ಬೆಳಕಿಗೆ ಬಂದ ನಂತರ ಭಾರತದಿಂದ ಪಲಾಯನ ಮಾಡಿದ ಸಂಸದರನ್ನು ಮರಳಿ ಕರೆತರುವಲ್ಲಿ ಕೇಂದ್ರ ಸರ್ಕಾರದ 'ಉದ್ದೇಶಪೂರ್ವಕ ವಿಳಂಬ' ಮಾಡಿದೆ ಎಂದು ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಮೈತ್ರೇಯಿ ಕೃಷ್ಣನ್ ಆರೋಪಿಸಿದ್ದಾರೆ. ಜೊತೆಗೆ ಪ್ರಜ್ವಲ್ ಅವರ ರಾಜತಾಂತ್ರಿಕ ವೀಸಾವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
"ಪ್ರಜ್ವಲ್ ಮತ್ತು ಅವರ ತಂದೆ ಎಚ್ ಡಿ ರೇವಣ್ಣ ಅವರು ಮಾಡಿದ ಘೋರ ಅಪರಾಧಗಳ ಚರ್ಚೆಯನ್ನು ಬಿಟ್ಟು, ಪೆನ್ ಡ್ರೈವ್‌ಗಳನ್ನು ಯಾರು ಹಂಚಿದ್ದಾರೆ ಎಂಬುದಕ್ಕೆ ಪ್ರಾಮುಖ್ಯತೆ ನೀಡುವುದನ್ನು ನೋಡುವುದು ಅಸಹನೀಯವಾಗಿದೆ. ರಾಜಕೀಯ ಲಾಭದ ಉದ್ದೇಶದಿಂದ ಇದನ್ನು ಮಾಡಲಾಗಿದೆ. ಯಾವುದೇ ಬೆಲೆ ತೆತ್ತಾದರೂ ಪ್ರಜ್ವಲ್‌ನನ್ನು ತಕ್ಷಣವೇ ಬಂಧಿಸಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದು ಮಹಿಳಾ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಆಗ್ರಹಿಸಿದ್ದಾರೆ.

ಹಾಸನದ ತುಳಿತಕ್ಕೊಳಗಾದ ಸಮುದಾಯಗಳಿಂದ ಬಂದ ಹಲವಾರು ಮಹಿಳೆಯರ ಜೀವನ ಈ ಪ್ರಕರಣದ ಮೇಲೆ ನಿಂತಿದ್ದು, ಇಡೀ ಪ್ರಕರಣವನ್ನು ಸೂಕ್ಷ್ಮತೆಯಿಂದ ನೋಡಬೇಕು. ಸಂತ್ರಸ್ತ ಮಹಿಳೆಯರ ಘನತೆ ಮತ್ತು ಖಾಸಗಿತನವನ್ನು ಎಲ್ಲ ರೀತಿಯಲ್ಲೂ ಕಾಪಾಡಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿಮಲಾ ಕೆ.ಎಸ್. ಹೇಳಿದ್ದಾರೆ.
ಜೊತೆಗೆ ಸಂತ್ರಸ್ತರಿಗೆ ವೈಯಕ್ತಿಕ ಸಮಾಲೋಚನೆ, ಕಾನೂನು ಸಲಹೆ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರದ ಬೇಡಿಕರಯನ್ನು ಮುಂದಿಡುವುದು ಕೂಡ ಈ ಹಾಸನ ಚಲೋದ ಗುರಿಯಾಗಿದೆ ಎಂದು ಅಕ್ಕೈ ಪದ್ಮಶಾಲಿ ಘೋಷಿಸಿದ್ದಾರೆ. ಇನ್ನು, ಸೈಬರ್ ಪೊಲೀಸರು ಸಾಮಾಜಿಕ ಮಾಧ್ಯಮದಿಂದ ವೈರಲ್ ಆಗಿರುವ ಎಲ್ಲಾ ವೀಡಿಯೊಗಳನ್ನು ತೆಗೆದುಹಾಕಬೇಕು ಎಂದು 'ನಾವೆದ್ದು ನಿಲ್ಲದಿದ್ದಿರೆ' ಸಮಘಟನೆ ಒತ್ತಾಯಿಸಿದೆ.












Click it and Unblock the Notifications