Prajwal Revanna Horoscope: ಇದೇ ಸಮಯಕ್ಕೆ ಪ್ರಜ್ವಲ್ ಬರಬೇಕು ಅಂತ ಟೈಮ್ ಫಿಕ್ಸ್ ಮಾಡಿದ್ದ ರೇವಣ್ಣ- ಕಾರಣವೇನು?
ಬೆಂಗಳೂರು ಮೇ 31: ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸಿದ್ದಾರೆ. ಕಳೆದ ದಿನ ತಡ ರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇಷ್ಟು ದಿನ ವಿದೇಶದಲ್ಲಿ ಇದ್ದ ಪ್ರಜ್ವಲ್ ಅವರನ್ನು ತಂದೆ ರೇವಣ್ಣ ಗೊತ್ತುಪಡಿಸಿದ ಸಮಯಕ್ಕೆ ಭಾರತಕ್ಕೆ ಕರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣದ ವಿಚಾರಣೆಗಾಗಿ ಪ್ರಜ್ವಲ್ ಅವರನ್ನು ಎಸ್‌ಐಟಿ ಬಂಧಿಸಿದೆ. ಪೆನ್‌ಡ್ರೈವ್ ವಿಚಾರ ಹೊರಬರುತ್ತಿದ್ದಂತೆ ಪ್ರಜ್ವಲ್ ತಲೆಮರಿಸಿಕೊಂಡಿದ್ದರು. ವಿದೇಶಕ್ಕೆ ಹಾರಿದ್ದ ಪ್ರಜ್ವಲ್ ಅವರನ್ನು ವಾಪಾಸ್ ಆಗುವಂತೆ ಎಸ್‌ಐಟಿ ನೋಟೀಸ್ ಜಾರಿ ಮಾಡಿತ್ತು.

ಇದೇ ವಿಚಾರದಲ್ಲಿ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದ ಮೇಲೆ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರನ್ನೂ ಬಂಧಿಸಲಾಗಿತ್ತು. ಬಳಿಕ ಜಾಮೀನು ಮೇಲೆ ಹೊರ ಬಂದ ರೇವಣ್ಣ ದೈವದ ಮೊರೆ ಹೋಗಿದ್ದರು. ತೋಟದ ಮನೆಯಲ್ಲಿ ಹೋಮ ಹವನ ಮಾಡಿಸಿದ್ದರು. ಜೈಲಿಗೆ ಹೋಗಿ ಬಂದ ಬಳಿಕ ರೇವಣ್ಣ ಒಂದಿಲ್ಲಾ ಒಂದು ದೇವಸ್ಥಾನಕ್ಕೆ ಭೇಟಿ ನೀಡುತ್ತಲೇ ಇದ್ದಾರೆ.
ಆಧ್ಯಾತ್ಮವನ್ನು ಹೆಚ್ಚಾಗಿ ನಂಬುವ ರೇವಣ್ಣ ಅವರು ಮಗನ ವಿಚಾರದಲ್ಲೂ ಅದನ್ನು ಮುಂದುವರೆಸಿದ್ದಾರೆ. ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರುತ್ತಿದ್ದಂತೆ ಬಂಧಿಸುವ ಸುಳಿವು ಇದ್ದ ರೇವಣ್ಣ, ಪ್ರಜ್ವಲ್ ಆಗಮನಕ್ಕೂ ಸಮಯ ನಿಗಧಿ ಮಾಡಿದ್ದರೂ. ತಂದೆ ಗೊತ್ತುಪಡಿಸಿದ ಅದೇ ಸಮಯಕ್ಕೆ ಪ್ರಜ್ವಲ್ ಭಾರತಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಪ್ರಜ್ವಲ್ ಮೇ 30ರ ರಾತ್ರಿ 12 ಗಂಟೆ ನಂತರ ಬೆಂಗಳೂರು ತಲುಪಬೇಕು ಎಂದು ಸಮಯ ಫಿಕ್ಸ್ ಆಗಿತ್ತು. ಈ ದಿನಾಂಕದಂದೇ ಪ್ರಜ್ವಲ್ ಭಾರತಕ್ಕೆ ಬರಲು ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಅವರೇ ಮುಹೂರ್ತ ಫಿಕ್ಸ್ ಮಾಡಿದ್ದರಂತೆ! ಇದಕ್ಕೆ ಕಾರಣ ಜ್ಯೋತಿಷ್ಯಶಾಸ್ತ್ರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಮೂಹೂರ್ತ ಪ್ರಜ್ವಲ್ ಅವರಿಗೆ ಒಳ್ಳೆಯದು ಎಂಬ ನಂಬಿಕೆ. ಇದೇ ಸಮಯಕ್ಕೆ ಪ್ರಜ್ವಲ್ ಬೆಂಗಳೂರು ತಲುಪಿದ್ದಾರೆ. ಹಾಗಾದರೆ ಈ ಸಮಯಕ್ಕೆ ಪ್ರಜ್ವಲ್ ಆಗಮಿಸಿದ್ದರಿಂದ ಆಗುವ ಪ್ರಯೋಜನಗಳೇನು ಎಂದು ತಿಳಿಯುವುದಾದರೆ-

ಪ್ರಜ್ವಲ್ ರೇವಣ್ಣ ಮೇ 31ರ ಬೆಳಿಗ್ಗೆ 10ಗಂಟೆಗೆ ಎಸ್‌ಐಟಿ ಮುಂದೆ ಹಾಜರಾದರೆ ಅವರಿಗೆ ತುಂಬಾ ಪ್ರಯೋಜನವಿದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಶುಕ್ರವಾರ ಕರ್ಕ ಲಕಗ್ನ, ಕುಂಭರಾಶಿ ಇದೆ. ಲಾಭದಲ್ಲಿ ಗುರು, ರವಿ, ಶುಕ್ರ ಇದ್ದು ಇದು ಮಹಿಳೆಯರಿಗೆ ಸಂಬಂಧಿಸಿಯೂ ಮಹತ್ವದ್ದಾಗಿದೆ.
ಶುಕ್ರಬಲ, ಪೂರ್ವಾಭಾದ್ರ ನಕ್ಷತ್ರ ಗುರು ನಕ್ಷತ್ರ, ಶನಿರಾಶಿಯ ಪರಿಣಾಮ ಪ್ರಜ್ವಲ್‌ಗೆ ಹಲವಾರು ಪ್ರಯೋಜನಗಳು ಆಗುವ ಸಾಧ್ಯತೆ ಇದೆ. ಇಂದಿನ ಪಂಚಾಂಗದ ಪ್ರಕಾರ ಈ ಸಮಯ ಪ್ರಯೋಜನವಾಗಲಿದೆ. ಇದೇ ಸಮಯಕ್ಕೆ ಪ್ರಜ್ವಲ್ ವಿಚಾರಣೆಗೆ ಹಾಜರಾದರೆ ಶತ್ರುಗಳು ಮಿತ್ರರಾಗುವ ಸಾಧ್ಯತೆ ಇದ್ದು ಜಾತಕ ದೋಷ ಕಡಿಮೆಯಾಗಲಿದೆ. ಇದೇ ಉದ್ದೇಶದಿಂದ ಜಾತಕ ನೋಡಿ ಪ್ರಜ್ವಲ್ ಅವರನ್ನು ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications