Bengaluru Power Cut: ಬೆಂಗಳೂರಿನ ಈ ಭಾಗಗಳಲ್ಲಿ 6 ದಿನ 8 ಗಂಟೆ ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಅಕ್ಟೋಬರ್ 6ರಿಂದ ಮುಂದಿನ 6 ದಿನಗಳವರೆಗೂ ಬೆಂಗಳೂರಿನ ಈ ಭಾಗಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಹಾಗೂ ಕಾರಣ ಏನು ಎಂದು ತಿಳಿಯಿರಿ.
ಕೆಪಿಟಿಸಿಎಲ್ ವತಿಯಿಂದ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಮುಂದಿನ 6 ದಿನ ನಗರದ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಸಮಯದಲ್ಲಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

ನಗರದಾದ್ಯಂತ ವಿವಿಧ ಸಬ್‌ಸ್ಟೇಷನ್‌ಗಳು ಮತ್ತು 11 ಕೆವಿ ಫೀಡರ್ ಲೈನ್‌ಗಳಲ್ಲಿ ಅಗತ್ಯ ನಿರ್ವಹಣೆ, ದುರಸ್ತಿ ಕಾಮಗಾರಿಗಳ ಹಿನ್ನೆಲೆ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ವಿದ್ಯುತ್ ಕಡಿತವು ಹಂತ-ಹಂತದ ನಿರ್ವಹಣಾ ಯೋಜನೆಯ ಭಾಗವಾಗಿದೆ ಮತ್ತು ಲೋಡ್ ಶೆಡ್ಡಿಂಗ್‌ನಿಂದಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಎಲ್ಲೆಲ್ಲಿ ವಿದ್ಯುತ್ ಕಡಿತ?: ಬನಶಂಕರಿ, ಜೆ.ಪಿ. ನಗರ, ಜಯನಗರ, ಬಿಟಿಎಂ ಲೇಔಟ್, ವಿಜಯನಗರ, ನಾಗರಭಾವಿ, ರಾಜರಾಜೇಶ್ವರಿ ನಗರ, ಕೆಂಗೇರಿ, ಚಂದ್ರ ಲೇಔಟ್, ವಿದ್ಯಾರಣ್ಯಪುರ, ಯಲಹಂಕ, ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ, ಇಂದಿರಾನಗರ, ಮಹದೇವಪುರ, ಕೆ.ಆರ್. ಪುರಂ, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರಿನ ವಿದ್ಯುತ್ ಮೂಲಸೌಕರ್ಯವನ್ನು ಬಲಪಡಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಕೆಪಿಟಿಸಿಎಲ್)ನೊಂದಿಗೆ ಜಂಟಿಯಾಗಿ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಯಾವೆಲ್ಲಾ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆಯೋ ಆ ಪ್ರದೇಶಗಳ ನಿವಾಸಿಗಳು, ಅಗತ್ಯ ಸಾಧನಗಳನ್ನು ಚಾರ್ಜ್ ಮಾಡಲು, ನೀರನ್ನು ಸಂಗ್ರಹಿಸಲು ಸಲಹೆ ನೀಡಿದೆ.
ಇನ್ನು ಕಾಮಗಾರಿಯು ಸಮಯಕ್ಕೆ ಮುಂಚಿತವಾಗಿ ಪೂರ್ಣಗೊಂಡರೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ವಿದ್ಯುತ್ ಅನ್ನು ಪುನಃಸ್ಥಾಪಿಸಲಾಗುವುದು ಎಂದು ಗ್ರಾಹಕರಿಗೆ ಭರವಸೆ ನೀಡಿದೆ. ಇತ್ತೀಚಿನ ತಿಂಗಳುಗಳಲ್ಲಿ, ವಿಶೇಷವಾಗಿ ವಾರಾಂತ್ಯಗಳಲ್ಲಿ ನಗರದಲ್ಲಿ ಆಗಾಗ ವಿದ್ಯುತ್ ಕಡಿತ ಆಗುತ್ತಲಿದೆ. ವಿದ್ಯುತ್ ಸಂಬಂಧಿತ ಕಾರ್ಯನಿರ್ವಹಣ ಕಾರ್ಯಗಳ ಹಿನ್ನೆಲೆ ವಿದ್ಯುತ್ ಪೂರೈಕೆಯಲ್ಲಿ ಕಡಿತವನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಬೆಸ್ಕಾಂನ ಅಧಿಕೃತ ವೆಬ್‌ಸೈಟ್, ಸಹಾಯವಾಣಿ ಅಥವಾ ಮೊಬೈಲ್ ಅಪ್ಲಿಕೇಶನ್‌ಗೆ ಭೇಟಿ ನೀಡಬಹುದು ಎಂದು ತಿಳಿಸಿದೆ.












Click it and Unblock the Notifications