ಫಾರ್ಮ್‌ಹೌಸ್‌ನಲ್ಲಿ ರೇವ್ ಪಾರ್ಟಿ, ನಶೆಯಲ್ಲಿದ್ದವರ ಕಿಕ್ ಇಳಿಸಿದ ಪೊಲೀಸ್
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ದೇವನಹಳ್ಳಿ ಸಮೀಪ ಅಕ್ರಮವಾಗಿ ರೇವ್ ಪಾರ್ಟಿ ನಡೆಯುತ್ತಿದ್ದ ಫಾರ್ಮ್‌ಹೌಸ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರ ದಾಳಿ ವೇಳೆ ರೇವ್ ಪಾರ್ಟಿಯಲ್ಲಿ ಸುಮಾರು 31 ಜನರನ್ನು ಬಂಧಿಸಲಾಗಿದೆ. ಈಶಾನ್ಯ ವಿಭಾಗದ ಪೊಲೀಸರು ಸೋಮವಾರ ಮುಂಜಾನೆ 5 ಗಂಟೆ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ದೇವನಹಳ್ಳಿ ಬಳಿಯ ಕನ್ನಮಂಗಲದಲ್ಲಿರುವ ತೋಟದ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪಾರ್ಟಿಯಲ್ಲಿ ಮಿಂದೆದ್ದಿದ್ದ ಮೂವತ್ತಕ್ಕೂ ಹೆಚ್ಚು ಮಂದಿಯನ್ನು ಲಾಕ್ ಮಾಡಿದ್ದಾರೆ.
ಬಂಧಿತರಲ್ಲಿ ಒಬ್ಬ ಚೀನಾ ಪ್ರಜೆಯೂ ಇದ್ದು, ಫಾರ್ಮ್‌ಹೌಸ್ ಬಳಿಯ ನಿವಾಸಿಗಳು ಪಾರ್ಟಿಯ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದರು. ರಾತ್ರಿಯಿಡೀ ಫುಲ್ ಪಾರ್ಟಿ ಮಾಡಿರುವ ಇವರು ನಶೆಯಲ್ಲಿ ಮುಳುಗಿದ್ದವರು. ಏಕಾಏಕಿ ದಾಳಿ ನಡೆಸಿದ ಕಾರಣ ಎಲ್ಲರೂ ಸಿಕ್ಕಿಬಿದ್ದಿದ್ದಾರೆ. ಈ ಆಸ್ತಿ ಮಾಲೀಕರು ಇನ್ನೂ ಪತ್ತೆಯಾಗಿಲ್ಲ. ಆದರೆ, ಫಾರ್ಮ್‌ಹೌಸ್ ನೋಡಿಕೊಳ್ಳುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ.

ರೇವ್ ಪಾರ್ಟಿಯಲ್ಲಿ ಅರೆಸ್ಟ್ ಆಗಿರುವ ಬಹುತೇಕರು ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರು ಎಂದು ತಿಳಿದುಬಂದಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಇವರ ಮೇಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ. ರೇವ್ ಪಾರ್ಟಿಯಲ್ಲಿ ಅರೆಸ್ಟ್ ಮಾಡಿದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ರಕ್ತ ಮತ್ತು ಮೂತ್ರದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸೋಮವಾರ ಇದರ ವರದಿ ಬರಲಿದ್ದು, ಎಲ್ಲರೂ ಡ್ರಗ್ಸ್ ಸೇವಿಸಿದ್ದರೇ ಎಂಬುದು ತಿಳಿಯಲಿದೆ ಎಂದು ಬೆಂಗಳೂರು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ (DCP) ಸಜೀತ್ ಹೇಳಿದ್ದಾರೆ.
ಭಾರಿ ಡ್ರಗ್ಸ್ ವಶಕ್ಕೆ
ರೇವ್ ಪಾರ್ಟಿಯಲ್ಲಿ ಹಶಿಶ್, ಹೈಬ್ರಿಡ್ ಗಾಂಜಾ, ಅಫೀಮು, ಚರಸ್, ಗಾಂಜಾ ಮತ್ತು ಕೊಕೇನ್ ಸೇರಿದಂತೆ ಹಲವು ರೀತಿಯ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪಾರ್ಟಿಯಲ್ಲಿ ಡ್ರಗ್ ಪೆಡ್ಲರ್‌ಗಳು ಮತ್ತು ಪೂರೈಕೆದಾರರು ಕೂಡ ಭಾಗಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಬರ್ತ್‌ಡೇ ಪಾರ್ಟಿ ನೆಪದಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ಇದಕ್ಕಾಗಿ ಒಂದು ವಾಟ್ಸಾಪ್ ಗ್ರೂಪ್ ಕೂಡ ಇದ್ದು, ಪಾರ್ಟಿಗೆ ಸಂಬಂಧಿಸಿದ ಮಾಹಿತಿಗಳನ್ನು ಅದರಲ್ಲಿ ಹಂಚಿಕೊಳ್ಳುತ್ತಿದ್ದರು ಎಂದು ವಿವರಿಸಿದ್ದಾರೆ. ಈ ಸಂಬಂಧ ಪೊಲೀಸರು ರೇವ್ ಪಾರ್ಟಿಯಲ್ಲಿ ಇದ್ದವರಿಗೆ ಬಿಸಿ ಮುಟ್ಟಿಸುವ ಕೆಲಸ ಶುರು ಮಾಡಿದ್ದಾರೆ.
ದೇವನಹಳ್ಳಿ ಸುತ್ತಮುತ್ತ ಹೆಚ್ಚಾಯ್ತು ಡ್ರಗ್ಸ್ ಹಾವಳಿ
ವಾಣಿಜ್ಯ ಚಟುವಟಿಕೆಗಳಿಂದ ಅಭಿವೃದ್ಧಿ ಹೊಂದುತ್ತಿರುವ ದೇವನಹಳ್ಳಿ ಭಾಗದಲ್ಲೂ ಇತ್ತೀಚೆಗೆ ಡ್ರಗ್ಸ್ ಹಾವಳಿ ಹೆಚ್ಚಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಬೇರೆ ಊರುಗಳಿಂದ ಬಂದು ಇಲ್ಲಿ ನೆಲೆಸುತ್ತಿರುವವರ ಸಂಖ್ಯೆಯೂ ಮಿತಿಮೀರುತ್ತಿದ್ದು, ಡ್ರಗ್ಸ್ ಕೂಡ ಕಾಲಿಟ್ಟಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗಷ್ಟೇ ಪೊಲೀಸರು ದೇವನಹಳ್ಳಿ ಬಳಿ ಗಾಂಜಾ ಮಾರುತ್ತಿದ್ದ ಮೂವರು ಯುವಕರನ್ನು ಬಂಧಿಸಿದ್ದರು. ಯುವಜನರು ಈ ಡ್ರಗ್ಸ್‌ಗೆ ದಾಸರಾಗುತ್ತಿದ್ದು, ಈ ದಂಧೆ ದೊಡ್ಡಮಟ್ಟದಲ್ಲೇ ನಡೆಯುತ್ತಿರುವ ಅನುಮಾನವಿದ್ದು, ಹೊರಭಾಗದಿಂದ ಇಲ್ಲಿಗೆ ಬರುತ್ತಿರುವ ಯುವಕ ಯುವತಿಯರ ಮೇಲೆ ಪೊಲೀಸರು ಹದ್ದಿನಕಣ್ಣಿಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.












Click it and Unblock the Notifications