ಬೆಂಗಳೂರು: ಜೆಪಿ ನಗರ, ಜಯನಗರದ 3 ಕಳ್ಳತನ ಪ್ರಕರಣಗಳಲ್ಲಿ ನೇಪಾಳದ 17 ಮಂದಿ ಬಂಧನ
ಬೆಂಗಳೂರು, ಮಾರ್ಚ್ 12: ಜೆಪಿ ನಗರ ಮತ್ತು ಜಯನಗರದ ಮೂರು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ವಿಭಾಗದ ಪೊಲೀಸರು ನೇಪಾಳ ಮೂಲದ 17 ಮಂದಿಯನ್ನು ಬಂಧಿಸಿದ್ದಾರೆ. ಸೆಕ್ಯುರಿಟಿ ಗಾರ್ಡ್ ಮತ್ತು ಕೆಲಸದಾಳುಗಳಾಗಿ ಕೆಲಸ ಮಾಡುತ್ತಿದ್ದ ಮಹಿಳೆಯರು ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿದೆ.
ಈ ಬಂಧಿತ ಆರೋಪಿಗಳು ಇಬ್ಬರು ಉದ್ಯಮಿಗಳು ಮತ್ತು ನಿವೃತ್ತ ಅರಣ್ಯ ಅಧಿಕಾರಿಯೊಬ್ಬರ ಮನೆಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದರು. ಬಂಧಿತರಿಂದ 2 ಕೋಟಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ವಿದೇಶಿ ಕರೆನ್ಸಿಗಳು, ಒಂದು ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಜೆಪಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ಎರಡು ಘಟನೆಗಳು ವರದಿಯಾಗಿದ್ದು, ಇನ್ನೊಂದು ಕಳ್ಳತನ ಜಯನಗರದಲ್ಲಿ ನಡೆದಿದೆ.

ಜೆಪಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ಕಿರಣ್ ಎಂಬ ರಿಯಲ್ ಎಸ್ಟೆಟ್ ಏಜೆಂಟ್ ಮತ್ತು ಉದ್ಯಮಿ ಬ್ರಿಜ್ ಭೂಷಣ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಕಿರಣ್ ಅವರ ಮನೆಯಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಜೆಪಿ ನಗರ ಪೊಲೀಸರು ನೇತ್ರಾ ಶಾಹಿ, ಲಕ್ಷ್ಮಿ ಸೆಜುವೆಲ್, ಗೋರಖ್ ಬಹದ್ದೂರ್ ಶಾಹಿ, ಭೀಮ್ ಬಹದ್ದೂರ್ ಶಾಹಿ, ಅಂಜಲಿ, ಅಬೇಶ್ ಶಾಹಿ, ಪ್ರಶಾಂತ್ ಮತ್ತು ಪ್ರಕಾಶ್ ಶಾಹಿ ಅವರನ್ನು ಬಂಧಿಸಿದ್ದಾರೆ.
ಕಿರಣ್ ಅವರು ತಮ್ಮ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ರಾತ್ರಿ ಮಲಗೆ ಬೆಳಗೆ ಏದ್ದ ಅವರಿಗೆ, ತಮ್ಮ ಮನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳು ಪಿಸ್ತೂಲ್, ಎರಡು ಮ್ಯಾಗಜೀನ್‌ಗಳು, ಸುಮಾರು 1.7 ಕೆಜಿ ಚಿನ್ನ ಮತ್ತು ಸುಮಾರು 1.4 ಕೋಟಿ ಮೌಲ್ಯದ ಇತರ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿಸು ಬಂದಿದೆ. ಉದ್ಯಮಿ ಬ್ರಿಜ್ ಭೂಷಣ್ ಅವರ ಮನೆಯಲ್ಲಿ ಆರೋಪಿಯು ಆತನ ತಾಯಿಯನ್ನು ಬೆದರಿಸಿ 25 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು.

ಜೆಪಿ ನಗರ ಪೊಲೀಸರು ಉದ್ಯಮಿ ಬ್ರಿಜ್ ಭೂಷಣ್ ಅವರ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಅರ್ಜುನ್ ಶಾಹಿ, ಪೂರನ್ ಶಾಹಿ, ಹರೀಶ್ ಶಾಹಿ ಮತ್ತು ರಮಿತ್ ಠಾಕೂರ್ ಅವರನ್ನು ಬಂಧಿಸಿದ್ದಾರೆ. ಜಯನಗರ ಪೊಲೀಸ್ ವ್ಯಾಪ್ತಿಯಲ್ಲಿ, ಆರೋಪಿಗಳು ನಿವೃತ್ತ ಅರಣ್ಯ ಅಧಿಕಾರಿ ಒಬೆದುಲ್ಲಾ ಖಾನ್ ಅವರಿಂದ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದರು. ಇದಕ್ಕೆ ಸಹಾಯ ಮಾಡಲು ನೇಪಾಳದಿಂದ ಬಂದಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications