Darshan Thoogudeep: ದರ್ಶನ್‌ಗೆ ಶಾಕ್ ಕೊಡಲು ಸಜ್ಜಾದ ಪೊಲೀಸರು
ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್ ತೂಗುದೀಪ್‌ಗೆ ಶಾಕ್ ಕೊಡಲು ಪೊಲೀಸ್ ಇಲಾಖೆ ಮುಂದಾಗಿದೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ನಟ ದರ್ಶನ್‌ಗೆ ಹೈಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ, ದರ್ಶನ್ ಈಗಾಗಲೇ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಿರುವುದಕ್ಕೆ ಆಕ್ಷೇಪಣೆ ಸಲ್ಲಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪೊಲೀಸ್ ಇಲಾಖೆ ಸಿದ್ದವಾಗಿದ್ದು, ದರ್ಶನ್‌ಗೆ ಹೊಸ ತಲೆನೋವು ಶುರುವಾಗಿದೆ.
ಈಗಾಗಲೇ ಪೊಲಿಸ್ ಇಲಾಖೆ ಕಾನೂನು ತಜ್ಞರ ಸಲಹೆಗಳನ್ನು ಪಡೆದುಕೊಂಡಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಜಾಮೀನಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದು, ಗೃಹ ಇಲಾಖೆಯ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ ಎಂದು ವರದಿಯಾಗಿದೆ.

ಗೃಹ ಇಲಾಖೆ ಒಪ್ಪಿಗೆ ಕೊಟ್ಟರೆ ದರ್ಶನ್‌ಗೆ ಕಷ್ಟ
ಪೊಲೀಸ್ ಇಲಾಖೆ ಈಗಾಗಲೇ ಕಾನೂನು ತಜ್ಞರ ಸಲಹೆಯಂತೆ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿಕೊಂಡಿದೆ. ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆಯ ಒಪ್ಪಿಗೆ ಕೇಳಲಾಗಿದೆ. ಪೊಲೀಸ್ ಆಯುಕ್ತರಾದ ದಯಾನಂದ್ ಒಪ್ಪಿಗೆ ಕೋರಿ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಗೃಹ ಇಲಾಖೆ ಏನಾದರೂ ಗ್ರೀನ್ ಸಿಗ್ನಲ್ ಕೊಟ್ಟರೆ ತಕ್ಷಣವೇ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ರದ್ದುಪಡಿಸುವಂತೆ ಮೇಲ್ಮನವಿ ಸಲ್ಲಿಸಲಿದ್ದಾರೆ.
ಒಂದು ವೇಳೆ ಸುಪ್ರೀಂ ಕೋರ್ಟ್ ಏನಾದರೂ ದರ್ಶನ್‌ರ ಜಾಮೀನು ಅರ್ಜಿ ವಿಚಾರಣೆಗೆ ಒಪ್ಪಿದರೆ, ಆಗ ದರ್ಶನ್‌ಗೆ ಮತ್ತೊಂದು ತಲೆನನೋವು ಶುರುವಾಗಲಿದೆ. ಸುಪ್ರೀಂ ಕೋರ್ಟ್ ಏನಾದರೂ ಮಧ್ಯಂತರ ಜಾಮೀನು ರದ್ದು ಮಾಡಿದರೆ ದರ್ಶನ್ ಮತ್ತೆ ಜೈಲಿಗೆ ಹೋಗುವ ಆತಂಕ ಕೂಡ ಇದೆ. ಈಗ ಗೃಹ ಇಲಾಖೆ ಒಪ್ಪಿಗೆ ಮೇಲೆ ಪೊಲೀಸರು ಮುಂದಿನ ನಡೆಯನ್ನು ನಿರ್ಧರಿಸಲಿದ್ದಾರೆ.
ದರ್ಶನ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್‌ಗೆ ಬೆನ್ನು ನೋವು ಹೆಚ್ಚಾದ ಕಾರಣ ಚಿಕಿತ್ಸೆ ಪಡೆಯುವ ಸಲುವಾಗಿ ಮಧ್ಯಂತರ ಜಾಮೀನು ಕೊಡಬೇಕು ಎಂದು ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ದರ್ಶನ್ ಪರ ವಕೀಲರ ಮನವಿ ಪುರಸ್ಕರಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
131 ದಿನಗಳ ಕಾಲ ಪರಪ್ಪನ ಅಗ್ರಹಾರ ಮತ್ತು ಬಳ್ಳಾರಿ ಕಾರಾಗೃಹದಲ್ಲಿದ್ದ ನಟ ದರ್ಶನ್ ಕೊನೆಗೂ ಹೊರಬಂದರು. ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್‌ಗೆ ಹಲವು ಪರೀಕ್ಷೆಗಳನ್ನು ಮಾಡಲಾಗಿದೆ. ಈಗಾಗಲೇ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದ್ದು ಶಸ್ತ್ರಚಿಕಿತ್ಸೆ ಅಗತ್ಯವಿರುವ ಬಗ್ಗೆ ವೈದ್ಯರು ನಿರ್ಧರಿಸಲಿದ್ದಾರೆ.












Click it and Unblock the Notifications