ಗಣೇಶ ವಿಸರ್ಜನೆ, ಮೇರಿ ಹಬ್ಬ: ಮದ್ಯ ಮಾರಾಟ ನಿಷಿದ್ಧ
ಬೆಂಗಳೂರು, ಸೆ. 6: ಪೂರ್ವ ವಿಭಾಗದ ವ್ಯಾಪ್ತಿಯಲ್ಲಿನ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಹಾಗೂ ಶಿವಾಜಿನಗರದ ಸೈಂಟ್ ಮೇರಿಸ್ ರಥೋತ್ಸವದ ಹಿನ್ನ್ನೆಲೆಯಲ್ಲಿ ಸೆ.7ರ ಬೆಳಗ್ಗೆ 6ರಿಂದ ಸೆ.8ರ ರಾತ್ರಿ 11:30ರ ವರೆಗೆ ಭಾರತಿನಗರ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಇಲ್ಲಿನ ಭಾರತೀನಗರ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲ ಬಾರ್, ವೈನ್ಸ್ ಶಾಪ್, ಪಬ್‌ಗಳನ್ನು ಸೆ.7 ಮತ್ತು 8ರಂದು ಕಡ್ಡಾಯವಾಗಿ ಮುಚ್ಚಲು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.(ಗಣೇಶ ಕೂರಿಸಿದ ಮೇಲೆ ಇವನ್ನು ಮರೆಯಬೇಡಿ)

ಈ ಕಾರ್ಯಕ್ರಮದಲ್ಲಿ 75ರಿಂದ 1ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದುದರಿಂದ ಈ ವೇಳೆ ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿ ಶಾಂತಿ ಭಂಗವುಂಟುಮಾಡುವ ಸಾಧ್ಯತೆ ಇದೆ. ಹೀಗಾಗಿ ಮೇಲ್ಕಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಲ್ಲ ಮದ್ಯದಂಗಡಿ ಮುಚ್ಚಲು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.
ವಿದ್ಯಾರಣ್ಯಪುರ ಮತ್ತು ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಸೆ. 7ರಂದು ಅನೇಕ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮದ್ಯ ಮಾರಾಟ ನಿಷೇಧಿಸಲಾಗಿದೆ.
ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಮತ್ತು ವಿನಾಯಕ ಸೇವಾ ಸಮಿತಿಯವರು ಪ್ರತಿಷ್ಠಾಪಿಸಿರುವ ಸುಮಾರು 20ಕ್ಕೂ ಹೆಚ್ಚು ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಸಾಮೂಹಿಕ ಮೆರವಣಿಗೆಯೂ ನಡೆಯಲಿದ್ದು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹೊರಡುವ ಗಣೇಶ ಮೂರ್ತಿಗಳು ವಿದ್ಯಾರಣ್ಯಪುರ ಕೊನೆ ಬಸ್ ನಿಲ್ದಾಣ, ಜಲ್ಲಿ ಮಿಷನ್ ವೃತ್ತ, ಚಿಕ್ಕಬೆಟ್ಟಹಳ್ಳಿ ಮಸೀದಿ, ಚಿಕ್ಕಬೆಟ್ಟಹಳ್ಳಿ ದರ್ಗಾ ಮುಖೇನ ವೀರಸಾಗರ ಕೆರೆಗೆ ತೆರಳಲಿದೆ. ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕಿಡಿಗೇಡಿಗಳ ಕೃತ್ಯದಿಂದ ಶಾಂತಿ ಭಂಗವಾಗಬಾರದೆಂದು ಎಲ್ಲ ಮದ್ಯದಂಗಡಿಗೆ ಬಾಗಿಲು ಹಾಕಲು ತಿಳಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.












Click it and Unblock the Notifications