ಲಾಕ್ ಡೌನ್ ವೇಳೆ ಬಾವನ ಮನೆಯಲ್ಲಿ ಕಳ್ಳತನ, ಪೊಲೀಸರ ಅತಿಥಿಯಾದ ಬಾಮೈದ
ಬೆಂಗಳೂರು, ಮೇ 18: ಕೊರೊನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ಸ್ವಂತ ಬಾವನ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಬ್ದುಲ್ ರಶೀದ್ ಮೇಕ್ರಿ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಸೈಯ್ಯದ್ ಮಸೂದ್‌ನನ್ನು ಸುದ್ದಗುಂಟೆಪಾಳ್ಯ ಠಾಣಾ ಪೊಲೀಸ ಬಂಧಿಸಿದ್ದು, 6 ಲಕ್ಷ ನಗದು, 171 ಗ್ರಾಂ ಚಿನ್ನ, ಮೈಕ್ರೋ ಓವೆನ್, ಸೀರೆಗಳು, ಆಸ್ತಿ ಪತ್ರ ವಶಕ್ಕೆ ಪಡೆದುಕೊಂಡಿದ್ದಾರೆ.
ರಾಮನಗರದಲ್ಲಿ ಹಣದಾಸೆಗೆ ಬಾರ್ ಮಾಲೀಕರಿಂದಲೇ ಮದ್ಯ ಕಳವು
ಅಂದ್ಹಾಗೆ, ಬಂಧಿತ ಸೈಯ್ಯದ್ ಮಸೂದ್, ಅಬ್ದುಲ್ ರಶೀದ್ ಮೇಕ್ರಿಯ ಪತ್ನಿಯ ಸಹೋದರನಾಗಿದ್ದ. ಅಬ್ದುಲ್ ರಶೀದ್ ಮನೆಯಲ್ಲಿ ಕಾರು ಚಾಲಕನಾಗಿ ಸೈಯ್ಯದ್ ಕೆಲಸ ಮಾಡಿಕೊಂಡಿದ್ದ. ನಂತರ ಅಬ್ದುಲ್ ಜೊತೆಯಲ್ಲಿ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆ ಕೆಲಸ ಬಿಟ್ಟಿದ್ದ ಎಂದು ತಿಳಿದು ಬಂದಿದೆ.
ಲಾಕ್ ಡೌನ್ ವೇಳೆ ಬೆನ್ಸನ್ ಟೌನಿನಲ್ಲಿದ್ದ ಮಗಳ ಮನೆಗೆ ಅಬ್ದುಲ್ ರಶೀದ್ ಹೋಗಿದ್ದರು. ಆ ಕಡೆ ಅಬ್ದುಲ್ ರಶೀದ್ ಮಗಳ ಮನೆಯಲ್ಲಿ ಸೈಯದ್ ಮಸೂದ್ ಸಹೋದರಿ ಮನೆಗೆಲಸ ಮಾಡ್ತಿದ್ದರು. ರಶೀದ್ ಮನೆಯಲ್ಲಿ ಹಣ ಒಡವೆಗಳಿರುವ ವಿಚಾರವನ್ನ ಸೈಯದ್ ಮುಂದೆ ಸಹೋದರಿ ಹೇಳಿದ್ದಳು.
ಈ ವಿಷಯ ತಿಳಿದ ಸೈಯಾದ್, ಅಬ್ದುಲ್ ರಶೀದ್ ಅವರ ಮನೆ ಬೀಗ ಒಡೆದ ಕಳ್ಳತನ ಮಾಡಿದ್ದಾನೆ. ಲಾಕ್‌ಡೌನ್ ವೇಳೆ ಕಳ್ಳತನ ಮಾಡಿದ್ದರಿಂದ ಕದ್ದ ಮಾಲು ಮಾರಲಾಗದೇ ಪರದಾಡಿದ್ದನು ಎಂದು ತಿಳಿದಿದೆ. ನಂತರ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದಾಗ ಮಾಲೀಕನ ಬಾವನೇ ಕಳ್ಳ ಎಂಬುದು ಪತ್ತೆಯಾಗಿದೆ.