Peripheral Ring Road: ಯೋಜನೆಗೆ ಭೂ ಸ್ವಾಧೀನ, ಆಸ್ತಿ ಮಾಲೀಕರ ಆತಂಕವೇನು?
ಬೆಂಗಳೂರು, ಅಕ್ಟೋಬರ್ 07: ಉದ್ಯಾನ ನಗರಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ರೂಪಿಸಿದ್ದ ಯೋಜನೆಗೆ 17 ವರ್ಷಗಳ ಬಳಿಕ ಚಾಲನೆ ಸಿಗಲಿದೆ. ಈ ಮಹತ್ವದ ರಸ್ತೆ ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೆತ್ತಿಕೊಳ್ಳಲಿದೆ. ಯೋಜನೆಗೆ ಅಗತ್ಯವಿರುವ ಭೂಮಿ ಸ್ವಾಧೀನ ಪಡಿಸಿಕೊಳ್ಳಲು 9 ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆದರೆ ಯೋಜನೆಗೆ ಆಸ್ತಿಯನ್ನು ನೀಡುವ ಮಾಲೀಕರಿಗೆ ಹೊಸ ಆತಂಕ ಶುರುವಾಗಿದೆ.
ಬಿಡಿಎ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಹೆಸರಿನಲ್ಲಿ 73 ಕಿ. ಮೀ. ಉದ್ದದ ರಸ್ತೆಯನ್ನು ಸುಮಾರು 30,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ. ತುಮಕೂರು ರಸ್ತೆ- ಹೊಸೂರು ರಸ್ತೆ ಸಂಪರ್ಕಿಸುವ 8 ಪಥದ ರಸ್ತೆ ಯೋಜನೆ ಇದು. 2007ರಲ್ಲಿ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್) ಹೆಸರಿನಲ್ಲಿ ರಸ್ತೆ ನಿರ್ಮಾಣದ ಪ್ರಸ್ತಾವನೆ ಸಿದ್ಧವಾಗಿತ್ತು, ಈಗ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಹೆಸರಿನಲ್ಲಿ ಯೋಜನೆ ಮರು ವಿನ್ಯಾಗೊಳಿಸಲಾಗಿದೆ.

ಬಿಡಿಎ ಅಧಿಕಾರಿಗಳ ಮಾಹಿತಿ ಪ್ರಕಾರ ಈ ಯೋಜನೆಗೆ 2,596 ಎಕರೆ ಭೂಮಿ ಅಗತ್ಯವಿದೆ. ಭೂ ಸ್ವಾಧೀನಕ್ಕಾಗಿಯೇ 9 ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 1,800 ಎಕರೆ ವಿಸ್ತೀರ್ಣದ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ. ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ.
ಮಾಲೀಕರ ಆತಂಕವೇನು?; ಭೂ ಸ್ವಾಧೀನ ಅಧಿಕಾರಿಗಳು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ವ್ಯಾಪ್ತಿಗೆ ಒಳಪಡುವ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಿದ್ದಾರೆ. ಮಾಲೀಕರು ಭೂ ಸ್ವಾಧೀನ ಕಾಯ್ದೆ, 1984ರ ಅಡಿ ನೋಟಿಸ್ ಪಡೆಯಲಿದ್ದು, ಭೂಮಿ ತಮ್ಮ ಒಡೆತನದಲ್ಲಿದೆ ಎಂಬುದಕ್ಕೆ ಅವರು ದಾಖಲೆಗಳನ್ನು ನೀಡಬೇಕು, ಯೋಜನೆಗೆ ಭೂಮಿ ನೀಡಲು ಆಕ್ಷೇಪಣೆಗಳಿದ್ದರೆ ಸಲ್ಲಿಕೆ ಮಾಡಬೇಕು.
ಯೋಜನೆಗೆ ನೀಡುವ ಭೂಮಿಗೆ ಸದ್ಯ ಜಾರಿಯಲ್ಲಿರುವ 2013ರ ನಿಯಮಗಳ ಅನ್ವಯ ಪರಿಹಾರಕ್ಕಾಗಿ ಬೇಡಿಕೆಯನ್ನು ಮಾಲೀಕರು ಸಲ್ಲಿಸಬಹುದು. ಭೂ ಸ್ವಾಧೀನ ಅಧಿಕಾರಿಗಳೇ ಭೂ ಸ್ವಾಧೀನ, ಪರಿಹಾರಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ಇತ್ಯರ್ಥ ಮಾಡುತ್ತಾರೆ. 2007ರಲ್ಲಿ ಯೋಜನೆ ಪ್ರಸ್ತಾವನೆ ಸಿದ್ಧವಾದಗಲೂ ಭೂ ಮಾಲೀಕರಿಗೆ ಪರಿಹಾರ ನೀಡುವ ವಿಚಾರದಲ್ಲಿ ಗೊಂದಲವಾಗಿತ್ತು, ಆಗ ಕೆಲವು ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು.
ಮೊದಲು ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಯಾವ ಬಿಡ್ ದಾರರು ಬಾರದ ಕಾರಣ ಯೋಜನೆ ವಿಳಂಬವಾಯಿತು. ಕಾಂಗ್ರೆಸ್ ಸರ್ಕಾರ ಮತ್ತೆ ಯೋಜನೆ ಚುರುಕುಗೊಳಿಸಲು ಮುಂದಾಗಿದ್ದು, ರಾಜ್ಯ ಸರ್ಕಾರವೇ ಸಂಪೂರ್ಣವಾಗಿ ಯೋಜನೆ ಕೈಗೆತ್ತಿಕೊಳ್ಳಲಿದೆ. ಇದಕ್ಕಾಗಿ ಶೇ 70ರಷ್ಟು ಅನುದಾನವನ್ನು ಸಾಲದ ರೂಪದಲ್ಲಿ, ಉಳಿದ ಅನುದಾನವನ್ನು ರಾಜ್ಯ ಸರ್ಕಾರ ಭರಿಸಲಿದೆ.
ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಅರ್ಧ ವೃತ್ತಾಕಾರದಲ್ಲಿ 73 ಕಿ. ಮೀ. 8 ಪಥದ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ. ಹೊಸೂರು ಮತ್ತು ತುಮಕೂರು ರಸ್ತೆ ಸಂಪರ್ಕಿಸುವ ಈ ಕಾರಿಡಾರ್ ಬೆಂಗಳೂರು ಉತ್ತರ, ಪೂರ್ವ ಮತ್ತು ಆನೇಕಲ್ ತಾಲೂಕುಗಳ ಮೂಲಕ ಹಾದು ಹೋಗಲಿದೆ.
2007ರಲ್ಲಿಯೇ ಯೋಜನೆಗೆ ಭೂಮಿ ಗುರುತಿಸಿ ಅಧಿಸೂಚನೆ ಹೊರಡಿಸಲಾಗಿತ್ತು. 2022ರಲ್ಲಿ ಪುನಃ ಹೆಚ್ಚುವರಿಯಾಗಿ 600ಕ್ಕೂ ಅಧಿಕ ಜಮೀನು ಗುರುತಿಸಲಾಗಿದೆ. ಬಿಡಿಎ ಮಾಹಿತಿ ಪ್ರಕಾರ ವಿಶೇಷ ಭೂಸ್ವಾಧೀನ ಅಧಿಕಾರಿಗಳು, ತಹಶೀಲ್ದಾರ್, ಭೂ ಮಾಪಕರು ಮತ್ತು ಡೇಟಾ ಎಂಟ್ರಿ ಆಪರೇಟರ್ ಸೇರಿ 68 ಸಿಬ್ಬಂದಿ ಭೂ ಸಾಧ್ವೀನ, ಪರಿಹಾರ ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.
73 ಕಿ. ಮೀ. 8 ಪಥದ ರಸ್ತೆಯನ್ನು ಮೂರು ವಿಭಾಗವಾಗಿ ಮಾಡಿ ಬಿಡಿಎ ಕಾಮಗಾರಿಯನ್ನು ಕೈಗೊಳ್ಳಲಿದೆ. ಜಮೀನು ವಿವಾದವಿಲ್ಲದ ಕಡೆ ಭೂ ಸ್ವಾಧೀನ ಕಾರ್ಯ ಬೇಗ ಪೂರ್ಣಗೊಳಿಸಿ, ಯೋಜನೆ ಕಾಮಗಾರಿಯನ್ನು ಆರಂಭಿಸಲು ಟೆಂಡರ್ ಕರೆಯಲಿದೆ. ಈಗಾಗಲೇ ಸರ್ಕಾರ ಸಹ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಿದೆ.












Click it and Unblock the Notifications