PC Mohan inspect: ಬೆಂಗಳೂರು ದಂಡು ರೈಲ್ವೆ ಪುನರಾಭಿವೃದ್ಧಿ, ಟ್ರಾವೆಲೇಟರ್ ನಿರ್ಮಾಣದ ಅಪ್ಡೇಟ್, ತಿಳಿಯಿರಿ
ಬೆಂಗಳೂರು, ನವೆಂಬರ್ 08: ಬೆಂಗಳೂರಿನ ಕಂಟೋನ್ಮೆಂಟ್ (ದಂಡು)ರೈಲು ನಿಲ್ದಾಣದಲ್ಲಿನ ಉಪನಗರ ರೈಲು ನಿಲ್ದಾಣ ಮತ್ತು ನೈರುತ್ಯ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳ ಜೊತೆಗೆ ಬಂಬೂ ಬಜಾರ್‌ನಲ್ಲಿ ನಿರ್ಮಾಣವಾಗುತ್ತಿರುವ ಭೂಗತ ಮೆಟ್ರೋ ನಿಲ್ದಾಣವನ್ನು ಸಂಯೋಜಿಸಲು ಟ್ರಾವೆಲೇಟರ್ ನಿರ್ಮಿಸುವಂತೆ ಬಿಜೆಪಿ ಸಂಸದರು ನಮ್ಮ ಮೆಟ್ರೋಗೆ ಸೂಚನೆ ನೀಡಿದ್ದಾರೆ.
ಹೌದು, ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಅವರು ಮಂಗಳವಾರ ಕಂಟೋನ್ಮೆಂಟ್ ರೈಲು ನಿಲ್ದಾಣದ ಮರು ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ನಿರ್ಮಾಣದ ಕೆಲಸಗಳನ್ನು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಎರಡು ನಿಲ್ದಾಣಗಳ ಸಂಯೋಜನೆಗೆ ಪೂರಕವಾಗಿ ಟ್ರಾವೆಲೇಟರ್ ನಿರ್ಮಾಣ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅವರು ಸೂಚಿಸಿದರು.

ಈ ಕುರಿತು ಸಂಸದ ಪಿಸಿ ಮೋಹನ್ ಅವರು ತಮ್ಮ X ಖಾತೆಯಲ್ಲಿ ಪರಿಶೀಲನಾ ವಿಡಿಯೋ ಹಂಚಿಕೊಂಡಿದ್ದಾರೆ. ವರ್ಷಗಳ ಹಿಂದೆ, ಭೂಗತ ಮೆಟ್ರೋ ಸ್ಥಳವನ್ನು ಕಂಟೋನ್ಮೆಂಟ್‌ನಿಂದ ಬಂಬೂ ಬಜಾರ್‌ಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಆಗ ಮೆಟ್ರೋ ಮತ್ತು ರೈಲು ನಿಲ್ದಾಣಗಳನ್ನು ಸಂಪರ್ಕಿಸಲು ಎಲಿವೇಟರ್ ಅನ್ನು ನಿರ್ಮಿಸುವ ಕುರಿತು BMRCL ಅಧಿಕಾರಿಗಳು ಭರವಸೆ ನೀಡಿದ್ದರು.
250 ಮೀಟರ್ ಸ್ಕೈವಾಕ್ ನಿರ್ಮಾಣ?
ಮೆಟ್ರೋ ಅಧಿಕಾರಿಗಳು ನೀಡಿದ ಭರವಸೆಯಂತೆ ಟ್ರಾವೆಲೇಟರ್ ಅನ್ನು ನಿರ್ಮಿಸುವ ಸಮಗ್ರ ಯೋಜನೆ ಜಾರಿಗೊಳಿಸಬೇಕು. ಈ ಸಂಬಂಧ BMRCL ಮೆಟ್ರೋ ಮತ್ತು ರೈಲು ನಿಲ್ದಾಣಗಳು ಎರಡರ ಮಧ್ಯ ಸಂಪರ್ಕ ಒದಗಿಸಲು 250 ಮೀಟರ್ ಸ್ಕೈವಾಕ್ ನಿರ್ಮಿಸುವ ಪ್ರಸ್ತಾವನೆ ಇದೆ ಎಂದು ತಿಳಿಸಿದರು.
Inspected the redevelopment progress at Bangalore Cantonment Railway station (BNC), assessed the proposed subway linking Namma Metro station on Bamboo Bazar to Cantonment Railway Station, and reviewed the newly introduced additional platforms for suburban rail operations. pic.twitter.com/DwDdGILKLl
— P C Mohan (@PCMohanMP) November 7, 2023
ಕೇವಲ ಸ್ಕೈವಾಕ್ ನಿರ್ಮಿಸುವುದು ಸಾಕಾಗುವುದಿಲ್ಲ. ಆದ್ದರಿಂದ ಮೆಟ್ರೋ ನಿಲ್ದಾಣ ಮತ್ತು ಉಪನಗರ ರೈಲು ನಿಲ್ದಾಣದ ನಡುವೆ ಟ್ರಾವೆಲೇಟರ್ ಸ್ಥಾಪನೆ ಸಾಧ್ಯತಾ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾಹಿತಿ ನೀಡಿದರು.
ದಂಡು ರೈಲು ನಿಲ್ದಾಣದಲ್ಲಿ ದೊಡ್ಡ ಪಾರ್ಕಿಂಗ್ ವ್ಯವಸ್ಥೆ
ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ಮರು-ಅಭಿವೃದ್ಧಿಪಡಿಸುವ 480 ಕೋಟಿ ರೂ. ಯೋಜನೆಯು ವಾಹನಗಳಿಗೆ ಸಾಕಷ್ಟು ಪಾರ್ಕಿಂಗ್ ಸ್ಥಳಾವಕಾಶ ಇದೆ. ಯೋಜನೆಯ ಪ್ರಕಾರ ನಿಲ್ದಾಣದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ 1,000 ಕಾರುಗಳು ಮತ್ತು 1,000 ಬೈಕ್‌ಗಳ ನಿಲುಗಡೆ ಆಗುವಷ್ಟು ವ್ಯವಸ್ಥೆ ಮಾಡಲಾಗುತ್ತಿದೆ.

ಈ ದಂಡು ರೈಲು ನಿಲ್ದಾಣಕ್ಕೆ ಉಪನಗರ ರೈಲು ನಿಲ್ದಾಣ ಯೋಜನೆಯಡಿ ಇನ್ನೂ ನಾಲ್ಕು ಪ್ಲಾಟ್‌ಫಾರ್ಮ್‌ಗಳು ಸೇರ್ಪಡೆ ಆಗಲಿವೆ. ನಿಲ್ದಾಣದ ಮುಂಭಾಗದ ರಸ್ತೆಯ ತಿರುವು ಅಂತಿಮ ಹಂತದಲ್ಲಿದೆ. ನಿಲ್ದಾಣದ ರಚನಾತ್ಮಕ ಕಾಮಗಾರಿಗಳು ಆರಂಭವಾಗಿವೆ. ರಸ್ತೆಯನ್ನು 13 ರಿಂದ 24 ಮೀಟರ್‌ಗೆ ವಿಸ್ತರಿಸಲಾಗುವುದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.
ಬ್ಯಾಗೇಜ್ ತಪಾಸಣೆ ಸೌಲಭ್ಯ ಕಲ್ಪಿಸಲು ಸೂಚನೆ
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ಭರದಿಂದ ಸಾಗಿದೆ. ಈ ಮಾರ್ಗದ ಪ್ರಯಾಣಿಕರಿಗೆ ಬ್ಯಾಗೇಜ್ ತಪಾಸಣೆ ಸೌಲಭ್ಯಗಳನ್ನು ಒದಗಿಸುವಂತೆ ಸಂಸದರು BMRCL ಗೆ ಒತ್ತಾಯಿಸಿದರು. ಸಿಲ್ಕ್ ಬೋರ್ಡ್, ಕೆಆರ್ ಪುರ ಮತ್ತು ಹೆಬ್ಬಾಳ ಮೆಟ್ರೋ ನಿಲ್ದಾಣಗಳಲ್ಲಿ ಬ್ಯಾಗೇಜ್ ತಪಾಸಣೆ ವ್ಯವಸ್ಥೆ ಮಾಡುವಂತೆ ಅವರು ಸೂಚಿಸಿದರು.












Click it and Unblock the Notifications