Bengaluru : ಇನ್ಮುಂದೆ ಪಾಸ್‌ಪೋರ್ಟ್ ಪರಿಶೀಲನೆಗೆ 'ಬಾಡಿ ಕ್ಯಾಮೆರಾ' ಕಡ್ಡಾಯ
ಬೆಂಗಳೂರು: ಪಾಸ್‌ಪೋರ್ಟ್ ಪೊಲೀಸ್ ಪರಿಶೀಲನೆ (Passport Police Verification) ನೆಪದಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡುವುದು ಹಾಗೂ ಲಂಚಕ್ಕೆ ಬೇಡಿಕೆ ಇಡುವ ಪ್ರಕರಣಗಳಿಗೆ ಬ್ರೇಕ್ ಹಾಕಲು ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯ (Bengaluru Police Commissionerate) ಮಹತ್ವದ ಹಾಗೂ ಕಟ್ಟು ನಿಟ್ಟಿನ ಹೆಜ್ಜೆಯೊಂದನ್ನು ಇಟ್ಟಿದೆ. ಪಾಸ್‌ಪೋರ್ಟ್ ಪರಿಶೀಲನಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರುವ ಉದ್ದೇಶದಿಂದ, ಪರಿಶೀಲನೆಗೆ ತೆರಳುವ ಪೊಲೀಸ್ ಸಿಬ್ಬಂದಿಗೆ ಇನ್ನು ಮುಂದೆ ದೇಹದ ಮೇಲೆ ಅಳವಡಿಸಬಹುದಾದ ಕ್ಯಾಮೆರಾಗಳ (Body-worn cameras) ಬಳಕೆಯನ್ನು ಕಡ್ಡಾಯಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ಆದೇಶದಲ್ಲಿ ಏನೆಲ್ಲ ಹೊಸ ನಿಯಮಗಳನ್ನು (ಮಾರ್ಗಸೂಚಿಗಳು) ಪಾಲಿಸುವಂತೆ ತಿಳಿಸಲಾಗಿದೆ ಅನ್ನುವ ಮಾಹಿತಿ ಇಲ್ಲಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ (DG & IGP) ಎಂ.ಎ. ಸಲೀಂ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಬುಧವಾರ ಈ ಕುರಿತ ಅಧಿಕೃತ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಹೊಸ ನಿಯಮವು ಸಾರ್ವಜನಿಕರಿಗೆ ದೊಡ್ಡ ಮಟ್ಟದ ರಿಲೀಫ್ ನೀಡಲಿದೆ.

ಠಾಣೆಗೆ ಕರೆಸುವಂತಿಲ್ಲ, ಮುಂಚಿತವಾಗಿ ಮಾಹಿತಿ ನೀಡಬೇಕು
ಹೊಸ ಮಾರ್ಗಸೂಚಿಗಳ ಪ್ರಕಾರ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಅರ್ಜಿದಾರರು ನೀಡಿದ ವಸತಿ ವಿಳಾಸಕ್ಕೆ ಖುದ್ದಾಗಿ ಭೇಟಿ ನೀಡಲೇಬೇಕು. ಅಲ್ಲಿ ನೆರೆಹೊರೆಯವರು ಮತ್ತು ನಿವಾಸಿಗಳಿಂದ ಅಗತ್ಯ ಮಾಹಿತಿ ಸಂಗ್ರಹಿಸಬೇಕು. ಪರಿಶೀಲನೆಯ ನೆಪದಲ್ಲಿ ಯಾವುದೇ ಕಾರಣಕ್ಕೂ ಅರ್ಜಿದಾರರನ್ನು ಪೊಲೀಸ್ ಠಾಣೆಗೆ ಕರೆಸುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.
ಅಷ್ಟೇ ಅಲ್ಲದೆ, ಪೊಲೀಸರು ಪರಿಶೀಲನೆಗಾಗಿ ಮನೆಗೆ ಭೇಟಿ ನೀಡುವ ಕನಿಷ್ಠ 24 ಗಂಟೆಗಳ ಮೊದಲು ಅರ್ಜಿದಾರರಿಗೆ ಎಸ್‌ಎಂಎಸ್ (SMS) ಅಥವಾ ಫೋನ್ ಕರೆ ಮೂಲಕ ಮುಂಚಿತವಾಗಿ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಪರಿಶೀಲನಾ ಪ್ರಕ್ರಿಯೆ ಆರಂಭದಿಂದ ಹಿಡಿದು ಅದು ಪೂರ್ಣಗೊಳ್ಳುವವರೆಗೂ ಸಿಬ್ಬಂದಿ ಕಡ್ಡಾಯವಾಗಿ ತಮ್ಮ ಸಮವಸ್ತ್ರದ ಮೇಲೆ 'ಬಾಡಿ ವಾರ್ನ್ ಕ್ಯಾಮೆರಾ'ವನ್ನು ಆನ್ ಮಾಡಿರಬೇಕು. ಇಡೀ ಪ್ರಕ್ರಿಯೆ ಪಾರದರ್ಶಕವಾಗಿ ರೆಕಾರ್ಡ್ ಆಗಬೇಕು ಎಂದು ಸೂಚಿಸಲಾಗಿದೆ.
ಪುರಾವೆ ಇಲ್ಲದೆ ನೆಗೆಟಿವ್ ರಿಪೋರ್ಟ್ ನೀಡುವಂತಿಲ್ಲ
ಸೂಕ್ತ ಹಾಗೂ ಸ್ಪಷ್ಟವಾದ ಪುರಾವೆಗಳಿಲ್ಲದೆ ಅರ್ಜಿದಾರರ ವಿರುದ್ಧ ಯಾವುದೇ 'ಪ್ರತಿಕೂಲ ವರದಿಗಳನ್ನು' (Adverse reports) ಸಲ್ಲಿಸುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಲಂಚದ ಉದ್ದೇಶದಿಂದ ಕಿರುಕುಳ ನೀಡುವುದು, ಅನಗತ್ಯ ವಿಳಂಬ ಮಾಡುವುದು ಅಥವಾ ಸಾರ್ವಜನಿಕರಿಗೆ ಅನಾನುಕೂಲತೆ ಉಂಟುಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ಕರ್ತವ್ಯ ಲೋಪವೆಸಗಿದರೆ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.
"ಸಾಮಾನ್ಯವಾಗಿ ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ಹೋಗುವ ಕಾನ್‌ಸ್ಟೇಬಲ್‌ಗಳು ಆಯಾ ಪ್ರದೇಶ ಮತ್ತು ವ್ಯಕ್ತಿಯ ಆಧಾರದ ಮೇಲೆ 200 ರಿಂದ 1,000 ರೂ.ಗಳವರೆಗೆ ಲಂಚ ಪಡೆಯುತ್ತಿದ್ದ ಬಗ್ಗೆ ವ್ಯಾಪಕ ದೂರುಗಳಿದ್ದವು. ಲಂಚ ಕೊಡದಿದ್ದಾಗ ಬೇಕೆಂದೇ ನೆಗೆಟಿವ್ ರಿಪೋರ್ಟ್ ನೀಡಿ ತೊಂದರೆ ಕೊಡುವ ಪ್ರಕರಣಗಳೂ ವರದಿಯಾಗಿದ್ದವು. ಈಗ ಬಾಡಿ ವಾರ್ನ್ ಕ್ಯಾಮೆರಾಗಳು ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಿವೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಭಾಗೀಯ ಉಪ ಪೊಲೀಸ್ ಆಯುಕ್ತರು (DCPs) ಈ ಹೊಸ ನಿಯಮಗಳ ಪಾಲನೆಯನ್ನು ಖುದ್ದಾಗಿ ಮೇಲ್ವಿಚಾರಣೆ ಮಾಡಬೇಕು ಮತ್ತು ಕೇಂದ್ರ ಕಚೇರಿಗೆ ಸಾಪ್ತಾಹಿಕ ವರದಿಗಳನ್ನು (Weekly reports) ಸಲ್ಲಿಸಬೇಕು. ಪ್ರಕ್ರಿಯೆಯಲ್ಲಿ ವಿಳಂಬವನ್ನು ತಪ್ಪಿಸಲು ಮತ್ತು ಸೇವೆಯನ್ನು ತ್ವರಿತವಾಗಿ ಒದಗಿಸಲು ಈ ನಿಯಮವು ಬಹುದೊಡ್ಡ ಪಾತ್ರ ವಹಿಸಲಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.












Click it and Unblock the Notifications