ಭಾರತೀಯ ಅಂಚೆ ಪಾರ್ಸೆಲ್ ಸೇವೆ, ಮನೆಯಿಂದ ಬುಕ್ ಮಾಡುವುದು ಹೇಗೆ?
ಬೆಂಗಳೂರು, ಜೂನ್ 07; ಭಾರತೀಯ ಅಂಚೆ ಇಲಾಖೆ 'ಪಾರ್ಸೆಲ್ ಬುಕ್ಕಿಂಗ್ ಆನ್ ವ್ಹೀಲ್ಸ್' ಎಂಬ ಯೋಜನೆಯನ್ನು ಬೆಂಗಳೂರು ನಗರದಲ್ಲಿ ಪ್ರಾರಂಭಿಸಿದೆ. ಮನೆಯಲ್ಲಿ ಕುಳಿತು ಜನರು ಪಾರ್ಸೆಲ್ ಕಳಿಸಲು ಬುಕ್ ಮಾಡಬಹುದು. ನಗರದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ಬಂದಿದೆ.
ಅಬ್ಬಿಗೆರೆ ಮತ್ತು ಪೀಣ್ಯದಲ್ಲಿ 'ಪಾರ್ಸೆಲ್ ಬುಕ್ಕಿಂಗ್ ಆನ್ ವ್ಹೀಲ್ಸ್' ಸೇವೆಗೆ ಕರ್ನಾಟಕ ಅಂಚೆ ವೃತ್ತದ ಮುಖ್ಯ ಅಂಚೆ ಮಹಾನಿರ್ದೇಶಕ ಎಸ್. ರಾಜೇಂದ್ರ ಕುಮಾರ್ ಚಾಲನೆ ನೀಡಿದರು. ವಿದೇಶಕ್ಕೆ ಸರಕು ಕಳಿಸಲು ಸಹ ಅನುಕೂಲವಾಗುವಂತೆ ಪ್ರತ್ಯೇಕ ವಿಭಾಗವನ್ನು ಆರಂಭಿಸಲಾಗಿದೆ.

ಜನರು ಮನೆಯಲ್ಲಿಯೇ ಕುಳಿತು ಸರಕು ಸಾಗಣೆ ಮಾಡಲು ಬುಕ್ ಮಾಡಲು ಅನುಕೂಲವಾಗುವಂತೆ ಈ ಸೇವೆ ಆರಂಭಿಸಲಾಗಿದೆ. ಜನರು ಕರೆ ಮಾಡಿ ನೋಂದಣಿ ಮಾಡಿದರೆ ಅಂಚೆ ಇಲಾಖೆಯ ವಾಹನ ಮನೆಯ ಬಳಿಗೆ ಬಂದು ಸಾಗಣೆ ಮಾಡಬೇಕಾದ ಸರಕನ್ನು ತೆಗೆದುಕೊಂಡು ಹೋಗಲಿದೆ.
ಬುಕ್ ಮಾಡುವುದು ಹೇಗೆ?; ಸರಕು ಸಾಗಣೆ ಮಾಡಬೇಕಾದರೆ ಜನರು 9480884078 ಸಂಖ್ಯೆಗೆ ಕರೆ ಮಾಡಬೇಕು. ತಾವಿರುವ ವಿಳಾಸ ಮತ್ತು ಹತ್ತಿರದ ಸ್ಥಳವನ್ನು ತಿಳಿಸಬೇಕು. ಬೆಂಗಳೂರು ನಗರದ ಅಬ್ಬಿಗೆರೆ ಪ್ರದೇಶದಲ್ಲಿ ಬೆಳಗ್ಗೆ 11.30ರಿಂದ 2.30ರ ತನಕ ಮತ್ತು ಪೀಣ್ಯದಲ್ಲಿ 3 ಗಂಟೆ ಬಳಿಕ ಲಭ್ಯವಿರಲಿದೆ ಎಂದು ಅಂಚೆ ಇಲಾಖೆ ಹೇಳಿದೆ.

ಅಂಚೆ ಇಲಾಖೆ ಮುಂದಿನ ಹಂತದಲ್ಲಿ ಎಂ. ಜಿ. ರಸ್ತೆಯಲ್ಲಿ, ಬಳಿಕ ಮಹದೇವಪುರ ಮತ್ತು ಬೆಂಗಳೂರು ದಕ್ಷಿಣದ ವಿಕಾಸ ನಗರಕ್ಕೆ ಈ ಸೇವೆಯನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಿದೆ. ಜನರು ಈ ಸೇವೆ ಸದುಪಯೋಗ ಪಡಿಸಿಕೊಂಡು ಭಾರತೀಯ ಅಂಚೆ ಇಲಾಖೆ ಜೊತೆ ಕೈ ಜೋಡಿಸಬೇಕು ಎಂದು ಕರೆ ನೀಡಲಾಗಿದೆ.
ದೇಶದೊಳಗೆ ಮಾತ್ರವಲ್ಲ 'ಪಾರ್ಸೆಲ್ ಬುಕ್ಕಿಂಗ್ ಆನ್ ವ್ಹೀಲ್ಸ್' ಮೂಲಕ ವಿದೇಶಗಳಿಗೆ ಸಹ ಪಾರ್ಸೆಲ್ ಕಳಿಸಬಹುದಾಗಿದೆ. ಇದಕ್ಕಾಗಿಯೇ ಅಂಚೆ ಇಲಾಖೆ ಪ್ರತ್ಯೇಕ ವಿಭಾಗವೊಂದನ್ನು ಮಾಡಿದೆ. ಇದಕ್ಕೆ ಸಹ ಜನರು ಮನೆಯಿಂದಲೇ ಬುಕ್ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಪ್ರಸ್ತುತ ಪ್ರಾಯೋಗಿಕವಾಗಿ ಬೆಂಗಳೂರು ನಗರದಲ್ಲಿ ಅಬ್ಬಿಗೆರೆ, ಪೀಣ್ಯ ವ್ಯಾಪ್ತಿಯಲ್ಲಿ 'ಪಾರ್ಸೆಲ್ ಬುಕ್ಕಿಂಗ್ ಆನ್ ವ್ಹೀಲ್ಸ್' ಸೇವೆ ಲಭ್ಯವಿದೆ. ಮುಂದಿನ ಹಂತದಲ್ಲಿ ನಗರದ ವಿವಿಧ ಪ್ರದೇಶಗಳಿಗೆ ಇದನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ಅಂಚೆ ಇಲಾಖೆ ಹೇಳಿದೆ.
ಮಾವು ಪಾರ್ಸೆಲ್ ಸೌಲಭ್ಯ; ಮಾವಿನ ಹಣ್ಣಿನ ಋತುವಿನಲ್ಲಿ ಭಾರತೀಯ ಅಂಚೆ ಇಲಾಖೆ ಜನರ ಮನೆ ಬಾಗಿಲಿಗೆ ಮಾವಿನ ಹಣ್ಣು ಪೂರೈಕೆ ಮಾಡುವ ಸೇವೆ ಪ್ರಾರಂಭ ಮಾಡಿತ್ತು. ಇದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆನ್‌ಲೈನ್ ಮೂಲಕ ಮಾವಿನ ಹಣ್ಣು ಬುಕ್ ಮಾಡಿದರೆ ಜನರ ಮನೆಗೆ ಹಣ್ಣು ಪೂರೈಕೆ ಮಾಡಲು ಅಂಚೆ ಇಲಾಖೆ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
ಭಾರತೀಯ ಅಂಚೆ ಇಲಾಖೆ ದೇಶದಲ್ಲಿ 'ಪಾರ್ಸೆಲ್ ಬುಕ್ಕಿಂಗ್ ಆನ್ ವ್ಹೀಲ್ಸ್' ಸೇವೆ ನೀಡಲು ಭಾರತೀಯ ರೈಲ್ವೆಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಜನರ ಮನೆಯಿಂದ ಪಡೆದ ಪಾರ್ಸೆಲ್ ಅನ್ನು ರೈಲಿನ ಮೂಲಕ ಬೇರೆ ಕಡೆಗೆ ಸಾಗಣೆ ಮಾಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ಇದಕ್ಕೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಇತರ ನಗರಗಳಿಗೆ ಸೇವೆ ವಿಸ್ತರಣೆ ಮಾಡುವ ನಿರೀಕ್ಷೆ ಇದೆ.












Click it and Unblock the Notifications