Pakistan Team In Bengaluru: ಬೆಂಗಳೂರು ಹೆಸರು ಕೆಡಿಸಲು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಪಾಕ್ ಮಾಧ್ಯಮಗಳು
ಪಕ್ಕದ ಪಾಕಿಸ್ತಾನ ಭಾರತದ ಜೊತೆ ಒಂದಿಲ್ಲೊಂದು ಕ್ಯಾತೆ ತೆಗೆಯುವುದನ್ನು ಅಭ್ಯಾಸ ಮಾಡಿಕೊಂಡಿದೆ. ಕ್ರಿಕೆಟ್ ವಿಚಾರದಲ್ಲಿ ಕೂಡ ಪಾಕಿಸ್ತಾನ ಈಗ ಭಾರತದ ಮೇಲೆ ಹಲವು ಆರೋಪಗಳನ್ನು ಮಾಡುತ್ತಿದೆ. ಈಗ ಇನ್ನೂ ಇಂದು ಹೆಜ್ಜೆ ಮುಂದೆ ಹೋಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಹೆಸರನ್ನು ಕೆಡಿಸಲು ಪಾಕ್ ಮಾಧ್ಯಮಗಳು ಪ್ರಯತ್ನ ಮಾಡುತ್ತಿವೆ.
ಹೌದು, ಅಕ್ಟೋಬರ್ 20ರಂದು ಪಾಕಿಸ್ತಾನ ತಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈಗಾಗಲೇ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಪಾಕಿಸ್ತಾನ ತಂಡದ ಆಟಗಾರರು, ಕಠಿಣ ಅಭ್ಯಾಸ ಮಾಡುತ್ತಿದ್ದಾರೆ.

ಬುಧವಾರ ಬೆಂಗಳೂರನಲ್ಲಿ ಫೋರಂ ಮಾಲ್ ಮುಂಭಾಗದಲ್ಲಿ ಮಡ್‌ಪೈಪ್ ಕೆಫೆಯಲ್ಲಿ ಬೆಂಕಿ ದುರಂತ ಸಂಭವಿಸಿತ್ತು, ಈ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತ್ತು. ಕಟ್ಟಡದಿಂದ ಜಿಗಿದು ಒಬ್ಬ ಗಾಯಗೊಂಡಿದ್ದು ಬಿಟ್ಟರೆ ಯಾವ ಪ್ರಾಣಹಾನಿ ಕೂಡ ಸಂಭವಿಸಿಲ್ಲ, ಸಮಯಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದರು.
ಬಾಂಬ್ ಬ್ಲಾಸ್ಟ್ ಎಂದು ಪಾಕ್ ಮಾಧ್ಯಮಗಳ ಪ್ರಚಾರ
ಇನ್ನು ಇದೇ ಘಟನೆಯನ್ನು ಮುಂದಿಟ್ಟುಕೊಂಡು ಪಾಕಿಸ್ತಾನ ಮಾಧ್ಯಮಗಳು ಭಾರತ, ಬೆಂಗಳೂರಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿವೆ. ಪಾಕಿಸ್ತಾನ ತಂಡದ ಆಟಗಾರರು ತಂಗಿರುವ ಹೋಟೆಲ್ ಸಮೀಪವೇ ಈ ಬ್ಲಾಸ್ಟ್ ನಡೆದಿದ್ದು, ಇದೊಂದು ಉದ್ದೇಶಿತ ಕೃತ್ಯ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದ ಕೆಲವು ಹೆಸರಾಂತ ಪತ್ರಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಗಳೂರು ಅಗ್ನಿ ದುರಂತದ ವಿಡಿಯೋಗಳನ್ನು ಹಂಚಿಕೊಂಡು, ಬಾಂಬ್ ಸ್ಫೋಟ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ ಇದು ಟ್ವಿಟರ್ ನಲ್ಲಿ ಟ್ರೆಂಡ್ ಕೂಡ ಆಗಿದೆ. "ಬೆಂಗಳೂರಿನಲ್ಲಿ ನಡೆದ ಸ್ಫೋಟವು ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ಇತರ ತಂಡಗಳ ಭದ್ರತೆ ಬಗ್ಗೆ ಆತಂಕ ಮೂಡಲು ಕಾರಣವಾಗಿದೆ." ಎಂದು ಫರೀದ್ ಖಾನ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
ಭಾರತದ ಅಭಿಮಾನಿಗಳ ಆಕ್ರೋಶ
ಇನ್ನು ಪಾಕಿಸ್ತಾನದ ಪತ್ರಕರ್ತರ ಈ ಬೇಜವಾಬ್ದಾರಿ ಟ್ವೀಟ್‌ಗಳ ವಿರುದ್ಧ ಭಾರತೀಯ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಪಾಕಿಸ್ತಾನದ ಪತ್ರಕರ್ತರಿಗೆ ಭಾರತಕ್ಕೆ ಬರಲು ವೀಸಾ ಸಿಕ್ಕಿಲ್ಲ, ಅವರ ತಂಡದ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಅವರು ಅಳುತ್ತಿದ್ದಾರೆ" ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.
ಕೆಲವು ಪತ್ರಕರ್ತರನ್ನು ಹೊರತುಪಡಿಸಿದರೆ ಪಾಕಿಸ್ತಾನದ ಉಳಿದ ಪತ್ರಕರ್ತರು ಮತ್ತು ಅಭಿಮಾನಿಗಳಿಗೆ ಭಾರತ ವೀಸಾ ನೀಡಲು ನಿರಾಕರಿಸಿದ್ದರಿಂದ, ಹಲವು ಪತ್ರಕರ್ತರು ಭಾರತಕ್ಕೆ ಬರುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಮೈದಾನದಲ್ಲಿ ನಮಾಜ್ ಮಾಡಿದ್ದರ ವಿರುದ್ಧ ಮೊಹಮ್ಮದ್ ರಿಜ್ವಾನ್ ವಿರುದ್ಧ ಐಸಿಸಿಗೆ ದೂರು ನೀಡಿದ್ದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಅಹಮದಾಬಾದ್‌ನಲ್ಲಿ ಪ್ರೇಕ್ಷಕರು ಜೈಶ್ರೀರಾಮ್ ಕೂಗಿದ್ದರ ವಿರುದ್ಧ ಐಸಿಸಿಗೆ ದೂರು ನೀಡಿದೆ. ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು.












Click it and Unblock the Notifications